ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸದವರಿಗೆ ದಂಡ

ಜಾಗೃತಿ ಮೂಡಿಸಲಾಗಿದೆ, ಇನ್ನು ಮುಂದೆ ಕಡ್ಡಾಯ ಕ್ರಮ: ತಹಶೀಲ್ದಾರ್‌
Last Updated 7 ಏಪ್ರಿಲ್ 2021, 5:02 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದಲ್ಲಿ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗುತ್ತಿರುವುದನ್ನು ಗಮನಿಸಿ ಮಂಗಳವಾರ ತಾಲ್ಲೂಕು ಆಡಳಿತ, ನಗರಸಭೆ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿ ಒಟ್ಟಾಗಿ ರಸ್ತೆಗಳಿಗೆ ಇಳಿದು ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ರಸ್ತೆಗಳಲ್ಲಿ ಅಲೆದಾಡಿದ್ದು ವಿಶೇಷವಾಗಿತ್ತು.
ನಗರದ ಜನರು ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಸುವುದನ್ನು ಮರೆತುಬಿಟ್ಟಿದ್ದರು. ಮಂಗಳವಾರ ಅಧಿಕಾರಿಗಳು ಏಕಾಏಕಿ ರಸ್ತೆ ಇಳಿದಿರುವುದನ್ನು ಕಂಡು ಕಕ್ಕಾಬಿಕ್ಕಿಯಾದರು ಹಾಗೂ ಆಶ್ಚರ್ಯವನ್ನು ವ್ಯಕ್ತಪಡಿಸಿದರು.

ಡಿವೈಎಸ್ಪಿ ವಿ.ಲಕ್ಷ್ಮಯ್ಯ ಮಾತನಾಡಿ, ‘ದೇಶ ಹಾಗೂ ವಿಶ್ವದಾದ್ಯಂತ ಕೊರೊನಾ ಎರಡನೇ ಅಲೆ ಶರವೇಗದಲ್ಲಿ ಹರಡುತ್ತಿದೆ. ಸೋಂಕನ್ನು ತಡೆಗಟ್ಟುವುದು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕರು ಉದಾಸೀನತೆ ತೋರುತ್ತಿರುವುದು ವಿಷಾದನೀಯ. ಸಮಾಜದ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.

‘ಸಾರ್ವಜನಿಕರ ಆರೋಗ್ಯ ಹಾಗೂ ಅವರ ಮನೆಯವರ ಆರೋಗ್ಯ ಸಾರ್ವಜನಿಕರ ಕೈಯಲ್ಲಿ ಇದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮನೆಯನ್ನು ದಾಟಿ ಹೊರಬರುವುದಿಲ್ಲ. ಸಮಾಜದಲ್ಲಿ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಕಂಕಣಬದ್ಧರಾಗಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ, ‘ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಸಾಕಷ್ಟು ತೊಂದರೆ ಅನುಭವಿಸಲಾಗಿದೆ. ಒಂದು ಕಡೆ ಮುಕ್ತರಾಗುತ್ತಿದ್ದೇವೆ ಎಂಬ ಹಂತಕ್ಕೆ ಬರುತ್ತಿದ್ದಂತೆ ಮತ್ತೆ ಹರಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಸೋಂಕು ಆವರಿಸಿಕೊಂಡ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ತಡೆಯುವುದು ಉತ್ತಮ. ಎಲ್ಲ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಇನ್ನು ಮುಂದೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ನಗರಸಭೆಯ ಪರಿಸರ ಎಂಜನಿಯರ್ ಉಮಾಶಂಕರ್, ಸರ್ಕಲ್ ಇನ್ಸ್ ಸ್ಪೆಕ್ಟರ್ ಶ್ರೀನಿವಾಸಪ್ಪ ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT