ಬುಧವಾರ, ಸೆಪ್ಟೆಂಬರ್ 22, 2021
28 °C
ಕೆಲಸ ಮಾಡಿ ತಿಂಗಳು ಉರುಳಿದರೂ ಪಾವತಿಯಾಗದ ಕೂಲಿ ಹಣ

ಚಿಕ್ಕಬಳ್ಳಾಪುರ: ₹9 ಕೋಟಿ ನರೇಗಾ ಕೂಲಿ ಬಾಕಿ, ಕಾರ್ಮಿಕರ ಪರದಾಟ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೆಲ ತಿಂಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ನೀಡಬೇಕಾದ ₹9 ಕೋಟಿ ಕೂಲಿ ಬಾಕಿ ಉಳಿದಿದ್ದು, ಬದುಕಿಗಾಗಿ ನರೇಗಾ ಆಸರೆ ಮಾಡಿಕೊಂಡಿರುವ ಗ್ರಾಮೀಣ ಪ್ರದೇಶದ ಜನರು ಸಕಾಲಕ್ಕೆ ನರೇಗಾ ಕೂಲಿ ಹಣ ಕೈಸೇರದೆ ಕಂಗಾಲಾಗಿದ್ದಾರೆ.

ದೇಶದಲ್ಲಿ ಕೋವಿಡ್–19 ಉಲ್ಬಣಿಸಿದ ಬಳಿಕ ಸ್ಥಳೀಯರು ಅಲ್ಲದೇ ಮುಂಬೈ, ಪುಣೆ, ಬೆಂಗಳೂರಿಗೆ ಹೋದ ವಲಸಿಗರು ವಾಪಸ್ ಆದಾಗ ಅವರಿಗೆ ನೆರವಾಗಿದ್ದು, ನರೇಗಾ ಯೋಜನೆ. ಆದರೆ, ಕೆಲ ಕಡೆ ಕಾರ್ಮಿಕರಿಗೆ ಒಂದೂವರೆ ಎರಡು ತಿಂಗಳಿಂದ ಕೂಲಿ ಹಣ ಪಾವತಿಯಾಗದೆ ದಿಕ್ಕು ತೋಚದಂತಾಗಿದೆ.

ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ₹6 ಕೋಟಿ ಮತ್ತು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಅನುಷ್ಠಾನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು ₹3 ಕೋಟಿ ಕೂಲಿ ಹಣ ಬಾಕಿ ಇದೆ. ಜತೆಗೆ, ಕೋಟಿಗಟ್ಟಲೇ ಸಾಮಗ್ರಿ ಬಿಲ್‌ ಸಹ ಪಾವತಿಯಾಗಬೇಕಿದೆ.

ಜಿಲ್ಲೆಯಲ್ಲಿ ಚಿಂತಾಮಣಿ ಮತ್ತು ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನರೇಗಾ ಕೂಲಿ ಪಾವತಿಯಾಗಬೇಕಿದೆ. ಕೂಲಿ ಕೆಲಸ ಮಾಡಿಸಿಕೊಳ್ಳಲು ಆರಂಭದಲ್ಲಿ ಪಂಚಾಯಿತಿಗಳು ಪೈಪೋಟಿಗೆ ಬಿದ್ದವಂತೆ ವರ್ತಿಸಿ ಯೋಜನೆ ಅನುಷ್ಠಾನ ಮಾಡುತ್ತವೆ. ನಂತರ ಕೂಲಿ ಹಣ ನೀಡದೇ ವಿಳಂಬ ಮಾಡುತ್ತಿವೆ. ಇದರಿಂದ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಉದ್ಯೋಗ ಅರಸಿ ಬೇರೆಡೆ ಹೋಗುವಂತಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಂದರಲ್ಲಿಯೇ ಸುಮಾರು ₹12 ಲಕ್ಷಕ್ಕೂ ಅಧಿಕ ಕೂಲಿ ಕೆಲ ತಿಂಗಳಿಂದ ಕಾರ್ಮಿಕರ ಕೈ ಸೇರಿಲ್ಲ. ಕೂಲಿಗಾಗಿ ನೂರಾರು ಕಾರ್ಮಿಕರು ಪಂಚಾಯಿತಿಗೆ ಅಲೆಯುವಂತಾಗಿದೆ.

ಈ ಬಗ್ಗೆ ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್‌ ಸ್ವಾಮಿ ಅವರನ್ನು ವಿಚಾರಿಸಿದರೆ, ‘ನರೇಗಾ ಕೂಲಿ ಹಣ ಪಾವತಿಗೆ ಅಗತ್ಯವಾದ ಬೆರಳು ಮುದ್ರೆ ನೀಡಲು ಪಿಡಿಒಗಳು ವಿಳಂಬ ಮಾಡಿದ ಕಾರಣಕ್ಕೆ ಬಿಲ್‌ಗಳು ತಿರಸ್ಕೃತಗೊಂಡಿವೆ. ಹೊಸದಾಗಿ ಎನ್‌ಎಂಆರ್ ತೆಗೆದು ಬಾಕಿ ಪಾವತಿಗೆ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ನರೇಗಾ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ನಂಬರ್‌ ಒನ್‌ ಎಂದು ತೋರಿಸಲು ಹೋಗಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕಾರ್ಮಿಕರು ಕೂಲಿಗಾಗಿ ಪರದಾಡುವಂತಾಗಿದೆ. ನರೇಗಾ ಪ್ರಗತಿ ತೋರಿಸುವ ಧಾವಂತ 100 ದಿನಗಳ ಕೂಲಿ ಕೆಲಸ ಮುಗಿದಿದ್ದರೂ ಮುಗಿದಿವೆ ಎಂದು ಇಒಗಳು ವರದಿ ನೀಡಿದ ಕಾರಣಕ್ಕೆ ನರೇಗಾ ಕೂಲಿ ಬಾಕಿ ಪಾವತಿಗೆ ಅಡ್ಡಗಾಲಾಗಿದೆ’ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.

‘ಈ ವಿಚಾರ ಸಿಇಒ ಅವರ ಗಮನಕ್ಕೆ ತರುತ್ತಿದ್ದಂತೆ ಇಒಗಳು ಹೊಸದಾಗಿ ಎನ್‌ಎಂಆರ್‌ ತೆಗೆದು ಕೂಲಿ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಅದಕ್ಕಾಗಿ ಸಮಯಾವಕಾಶ ಕೇಳಿದ್ದಾರೆ. ಕೂಲಿಕಾರರು ಗೌರಿ ಹಬ್ಬ ಕೇಳಿದ ಕೂಲಿ ಈವರೆಗೆ ಸಿಕ್ಕಿಲ್ಲ. ಏನು ನಡೆಯುತ್ತಿದೆಯೋ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಏನು ಮಾಡಬೇಕು ತೋಚುತ್ತಿಲ್ಲ

ನರೇಗಾ ಯೋಜನೆ ಅಡಿ ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿದ್ದೆ. ನನಗೆ ₹1 ಲಕ್ಷ ಸಾಮಗ್ರಿ ಬಿಲ್,  ₹1 ಲಕ್ಷ ಕೂಲಿ ಹಣ ಬರಬೇಕು. ಜುಲೈ 27ಕ್ಕೆ ಕಾಮಗಾರಿ ಮಾಹಿತಿ ಸಲ್ಲಿಕೆಯಾದರೂ ಈವರೆಗೆ ಬಿಲ್ ಪಾವತಿಯಾಗಿಲ್ಲ. ಕೂಲಿ ಹಣ ಕೇಳಿದರೆ ಅಧಿಕಾರಿಗಳು ಏನೆನೋ ಸಬೂಬು ಹೇಳುತ್ತಾರೆ. ಏನು ಮಾಡಬೇಕು ತೋಚುತ್ತಿಲ್ಲ.

ಎನ್‌.ಎಂ.ಮಬ್ಬಾಷಾ, ನಾರೇಮದ್ದೇಪಲ್ಲಿ ನಿವಾಸಿ

ಚಾತಕ ಪಕ್ಷಿಗಳಾದ ಕಾರ್ಮಿಕರು

ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜುಲೈ 27 ರಂದು 243 ಕಾರ್ಮಿಕರ ವೇತನ ₹66,825 ಮತ್ತು ಆಗಸ್ಟ್ 3 ರಂದು 230 ಕಾರ್ಮಿಕರ ಕೂಲಿ ₹63,250 ಪಾವತಿಗೆ ಸಂಬಂಧಿಸಿದವರಿಗೆ ಮಾಹಿತಿ ಸಲ್ಲಿಸಿದ್ದಾರೆ. ಪಿಡಿಒ ಸಹ ಬಿಲ್‌ ಪಾವತಿಗೆ ಅಗತ್ಯವಾದ ಬೆರಳು ಮುದ್ರೆ ನೀಡಿದ್ದಾಗಿ ತಿಳಿಸುತ್ತಾರೆ. ಆದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ಆ ಎರಡು ಬಿಲ್‌ ತಿರಸ್ಕರಿಸಿದ್ದಾರೆ. ಹೀಗಾಗಿ ನೂರಾರು ಕಾರ್ಮಿಕರು ಕೂಲಿ ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ಅಧಿಕಾರಿಗಳಿಗೆ ಕೂಲಿ ಕೇಳಿದರೆ ಅವರು ಪಾವತಿಗೆ ಸಮಯಾವಕಾಶ ಕೇಳುತ್ತಿದ್ದಾರೆ.

–ಈಶ್ವರ, ದುಗ್ಗನಾಯಕನಪಲ್ಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು