ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಮೂಲ ಸೌಕರ್ಯಗಳಿಲ್ಲದೆ ಜನ ಹೈರಾಣು

ಬಾಗೇಪಲ್ಲಿ ಪುರಸಭೆ ಅಧ್ಯಕ್ಷೆ ರೇಷ್ಮಾಬಾನು ನಯಾಜ್ ಪ್ರತಿನಿಧಿಸುವ ವಾರ್ಡ್‌ ದುಃಸ್ಥಿತಿ
Last Updated 26 ಸೆಪ್ಟೆಂಬರ್ 2022, 4:32 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಮನೆಗಳ ನಿರ್ಮಾಣಕ್ಕೆ ನೀಲಿನಕ್ಷೆ ಇಲ್ಲ. ನಿವೇಶನ, ಮನೆಗಳ ನಿರ್ಮಾಣ, ರಸ್ತೆಗಳು, ಚರಂಡಿಗಳು ಇಲ್ಲ. ಬೀದಿ ದೀಪಗಳಿಲ್ಲ. ಹಾವು, ಚೇಳು, ಸೊಳ್ಳೆಗಳ ಕಡಿತ. ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಕಾರುಬಾರು– ಇದೆಲ್ಲಾ ಪಟ್ಟಣದ ನ್ಯಾಷನಲ್ ಕಾಲೇಜಿನ ಪಕ್ಕದಲ್ಲಿರುವ 5ನೇ ವಾರ್ಡ್ ದುಸ್ಥಿತಿ.

ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದವರೆಗೆ ಪ್ರದೇಶವು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿದೆ. 23 ವಾರ್ಡ್‍ಗಳು ಇದ್ದು, ಕೆಲವೊಂದನ್ನು ಹೊರತುಪಡಿಸಿ ಬಹುತೇಕ ವಾರ್ಡ್‌ಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಒಳಚರಂಡಿ ಹಾಗೂ ಚರಂಡಿಗಳು, ಸಿ.ಸಿ.ರಸ್ತೆಗಳ ತುಂಡು ಗುತ್ತಿಗೆಗಳ ಕಾಮಗಾರಿಗಳಿಂದ ಅವೈಜ್ಞಾನಿಕವಾಗಿವೆ. ರಸ್ತೆಗಳು, ಚರಂಡಿಗಳು ನಿರ್ಮಾಣ ಆಗದಿರುವುದರಿಂದ ಕೊಳಚೆ ನೀರು ಮತ್ತು ಗುಂಡಿ ಬಿದ್ದ ರಸ್ತೆಯಲ್ಲೇ ಜನ ನಿತ್ಯ ಸಂಚರಿಸುವಂತಾಗಿದೆ.

ವಾರ್ಡ್‌ನಲ್ಲಿ 200 ಮನೆಗಳಿವೆ. 850 ಮಂದಿ ಮತದಾರರು ಇದ್ದಾರೆ. 5ನೇ ವಾರ್ಡ್‍ನಿಂದ ಪ್ರತಿನಿಧಿಸಿದ್ದ ರೇಷ್ಮಾ ಬಾನು ನಯಾಜ್ ಅವರು ಇದೀಗ ಪುರಸಭೆ ಅಧ್ಯಕ್ಷೆ. ಆದಾಗ್ಯೂ, ಅವರ ವಾರ್ಡ್ ಮಾತ್ರ ತೀರಾ ಹಿಂದುಳಿದೆ.

ಪುರಸಭೆಯಲ್ಲಿ ಮನೆಗಳ ನಿರ್ಮಾಣ, ರಸ್ತೆ, ಬೀದಿದೀಪ, ಚರಂಡಿಗಳ ವ್ಯವಸ್ಥೆಗೆ ಲನಕ್ಷೆಯೇ ಸಮರ್ಪಕವಾಗಿಲ್ಲ. ನಿವೇಶನಗಳ ಖರೀದಿದಾರರು, ಮನೆಗಳ ಮಾಲೀಕರು ನೀಲ ನಕ್ಷೆಯಂತೆ ಮನೆಗಳನ್ನು ನಿರ್ಮಿಸಿಲ್ಲ. 5 ರಿಂದ 10 ಅಡಿಗಳಷ್ಟು ಅಗಲದ ರಸ್ತೆಗಳು ಇಲ್ಲ. ವಾರ್ಡ್‍ನಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಗುಂಡಿಗಳು ಬಿದ್ದಿವೆ.

ಸರ್ಕಾರಗಳಿಂದ ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ಹಣ ಅನುದಾನ ಬಿಡುಗಡೆ ಆಗಿದೆ. ಎಸ್‌ಎಫ್‌ಸಿ, ವಿವಿಧ ಹಣಕಾಸು ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ನೆಲೆಸುವ ವಾರ್ಡ್‍ಗಳಿಗೆವಿಶೇಷ ಅನುದಾನಗಳಿವೆ. ಆದರೆ ಪಟ್ಟಣದ 23 ವಾರ್ಡ್‍ಗಳಲ್ಲಿ ತುಂಡುಗುತ್ತಿಗೆಗಳ ಕಾಮಗಾರಿಗಳಿಂದಅಭಿವೃದ್ಧಿ ಆಗಿಲ್ಲ.

ಬೀದಿನಾಯಿಗಳ ಉಪಟಳದಿಂದ ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಗಳಲ್ಲಿ ಸಂಚರಿಸಲು ಆಗುತ್ತಿಲ್ಲ.

ಪುರಸಭೆಗೆ ಬಂದ ವಿವಿಧ ಅನುದಾನದಡಿ ₹10 ಲಕ್ಷ ಬಂದಿದ್ದು, ಅಗತ್ಯ ಇರುವ ಕಡೆ ಸಿಸಿ ರಸ್ತೆ, ಚರಂಡಿಗಳನ್ನು ಮಾಡಿಸಲಾಗಿದೆ. ನಗರೋತ್ಥಾನದಲ್ಲಿ ₹25 ಲಕ್ಷ ಹಾಗೂ ₹6 ಲಕ್ಷ ಅನುದಾನ ವಾರ್ಡ್‍ಗೆ ಬರುತ್ತದೆ ಎಂದು ವಾರ್ಡ್ ಪ್ರತಿನಿಧಿ ಹಾಗೂ ಪುರಸಭೆ ಅಧ್ಯಕ್ಷೆ ರೇಷ್ಮಾಬಾನು ನಯಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಾರ್ಡ್‌ನಲ್ಲಿರುವ ವಿವಿಧ ಕಾಮಗಳಿಗೆ ಟೆಂಡ್ ಪ್ರಕ್ರಿಯೆ ಹಂತದಲ್ಲಿದೆ.ನಾಳೆಯಿಂದಲೇ ಗುಂಡಿಗಳನ್ನು ಮುಚ್ಚಿಸುವ, ರಸ್ತೆಯನ್ನು ಸಮತಟ್ಟು ಮಾಡಿಸುತ್ತೇನೆ. ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕು. 23 ವಾರ್ಡ್‍ಗಳು, ಪಟ್ಟಣದ ಅಭಿವೃದ್ಧಿ ಮಾಡಿಸುತ್ತೇನೆ ಎಂದರು.

ನಗರೋತ್ಥಾನ ಹಾಗೂ ವಿಶೇಷ ಅನುದಾನಗಳನ್ನು ಬಳಸಿಕೊಂಡು, ವಾರ್ಡ್‍ಗಳಲ್ಲಿ ರಸ್ತೆ, ಚರಂಡಿಗಳನ್ನು ಮಾಡಿಸಲಾಗುವುದು. ಮೂಲ ಸೌಲಭ್ಯಗಳನ್ನು ಕಲ್ಪಿಸುವುದೇ ಗುರಿ ಆಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ವಾರ್ಡ್‍ಗಳ ಸದಸ್ಯರೊಂದಿಗೆ ಚರ್ಚಿಸಲಾಗುವುದು. ವಿಶೇಷ ಅನುದಾನ ಕಲ್ಪಿಸುವಂತೆ ಹಾಗೂ ಒಳಚರಂಡಿ ಕಾಮಗಾರಿ ಮುಗಿಸಿ, ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್ ತಿಳಿಸಿದರು.

ರಸ್ತೆಗೆ ಹರಿಯುತ್ತಿರುವ ಚರಂಡಿ ನೀರು

ಚರಂಡಿಗಳ ನಿರ್ಮಾಣ ಮಾಡಿಲ್ಲ. ಹೀಗಾಗಿ ಕೊಳಚೆ ನೀರು ರಸ್ತೆಗಳಿಗೆ ಹರಿದಿದೆ. ರಸ್ತೆಗಳೆಲ್ಲಾ ಕೆಸರಿನಿಂದ ಕೂಡಿದ್ದು, ಜನ ಶೌಚಾಲಯದ ನೀರು, ಮಲಿನ ನೀರಿನ ಮೇಲೆ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಳೆ ಬಂದಾಗ ಮಳೆಯ, ಚರಂಡಿ ನೀರು ಮನೆಗಳಿಗೆ ನುಗ್ಗಿವೆ. ಚರಂಡಿಗಳು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ನೀರು ಸರಾಗವಾಗಿ ಹರಿಯುತ್ತಿಲ್ಲ. ಸಮರ್ಪವಾಗಿ ಸ್ವಚ್ಛತೆ ಮಾಡಿಲ್ಲ.

ಕಸ, ಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಹೂಳು ತುಂಬಿದೆ. ನೀರು ನಿಂತಲ್ಲಿ ನಿಂತಿದೆ. ರಾಶಿಗಟ್ಟಲೇ ತ್ಯಾಜ್ಯಗಳು ತುಂಬಿದೆ. ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಬೀಡಾಡಿ ನಾಯಿಗಳು, ಹಂದಿಗಳು ಕಸ, ತ್ಯಾಜ್ಯದ ರಾಶಿಗಳನ್ನು ಚೆಲ್ಲಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT