ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಪಿನಾಕಿನಿ ನದಿ; ತೆರವಾಗದ ಕಟ್ಟಡಗಳು

ಗೌರಿಬಿದನೂರಿನಲ್ಲಿ ನದಿ‍ಪಾತ್ರ ಒತ್ತುವರಿ: ವಾಣಿಜ್ಯ ಸಂಕೀರ್ಣ, ಮನೆ ನಿರ್ಮಾಣ
Last Updated 6 ಫೆಬ್ರುವರಿ 2023, 6:12 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರ ಸಮೀಪ ಹರಿಯುವ ಉತ್ತರ ಪಿನಾಕಿನಿ ನದಿ ಪಾತ್ರ ದಶಕಗಳಿಂದಲೂ ಒತ್ತುವರಿಗೆ ನುಲುಗಿದೆ. ಅನಧಿಕೃತವಾಗಿ ನಿರ್ಮಿಸಿರುವ ವಸತಿ ಮತ್ತು ವಾಣಿಜ್ಯ ‌ಕಟ್ಟಡಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ‌ಅಧಿಕಾರಿಗಳು‌ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ನಗರದ ಪೂರ್ವ ದಿಕ್ಕಿನಲ್ಲಿ ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಗೂ ಅಧಿಕ ದೂರ ನದಿಯ ಎರಡೂ ದಂಡೆಗಳನ್ನು ಅತಿಕ್ರಮಿಸಲಾಗಿದೆ. ವಾರ್ಡ್ ನಂಬರ್ 5, 6, 7, 8 ಮತ್ತು 15 ಪಿನಾಕಿನಿ ನದಿ ಪಾತ್ರದಲ್ಲಿ ಬರುತ್ತವೆ. ನದಿ ಪಾತ್ರದಲ್ಲಿ ಬಡಾವಣೆಗಳೇ ನಿರ್ಮಾಣಗೊಂಡಿವೆ. 5ನೇ ವಾರ್ಡ್ ವ್ಯಾಪ್ತಿಯಲ್ಲಿ ಸಂತೆ ಮೈದಾನ, ಆಂಜನೇಯಸ್ವಾಮಿ ದೇವಾಲಯ, 6ನೇ ವಾರ್ಡಿನಲ್ಲಿ ಸಂತೇ ಮೈದಾನ, 7ನೇ ವಾರ್ಡಿನಲ್ಲಿ ಕಾಕನತೋಪು, ಟಿಪ್ಪುನಗರ, 8ನೇ ವಾರ್ಡಿನಲ್ಲಿ ಹಂದಿ ಜೋಗಿಗಳ ಕಾಲೋನಿ, 15ನೇ ವಾರ್ಡಿನಲ್ಲಿ ಅಭಿಲಾಷ್ ಲೇಔಟ್ ಪೂರ್ವ ಭಾಗಕ್ಕೆ ಸೇರಿದ ಜನವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸಂಪೂರ್ಣ ಪಿನಾಕಿನಿ ‌ನದಿ ಪಾತ್ರದಲ್ಲಿವೆ.

5 ವಾರ್ಡ್‌ನ ನದಿ ಆಕ್ರಮಿತ ಬಡಾವಣೆಯಲ್ಲಿ 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 1 ಕಲ್ಯಾಣ ಮಂಟಪ, 2 ದೇವಾಲಯ, 2 ಪ್ರತಿಷ್ಠಿತ ಖಾಸಗಿ ಶಾಲೆಗಳು, 1 ಅಂಗನವಾಡಿ ಕೇಂದ್ರ, 3 ಚರ್ಚ್, ಎರಡು ಮಸೀದಿಗಳು, ಒಂದು ವೃದ್ಧಾಶ್ರಮ, ಒಂದು ಅಪೂರ್ಣಗೊಂಡ ಮಟನ್ ಮಾರ್ಕೆಟ್, 1 ಸಮುದಾಯ ಶೌಚಾಲಯ ಕಟ್ಟಡಗಳು ನಿರ್ಮಾಣವಾಗಿವೆ. ಇಲ್ಲಿನ ಕೆಲವು ಕಟ್ಟಡಗಳನ್ನು ಸರ್ಕಾರದ ಅನುದಾನ ಬಳಸಿ ನಿರ್ಮಿಸಲಾಗಿದೆ.

ದಶಕಗಳಿಂದಲೂ ನಿರಾಶ್ರಿತರ ಹೆಸರಿನಲ್ಲಿ ನದಿ ಪಾತ್ರದಲ್ಲಿ ಕೆಲವರು 2-3 ಅಂತಸ್ತಿನ ವಾಸದ ಮತ್ತು ವಾಣಿಜ್ಯ ಬಳಕೆಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ‌ಕೃಪೆಯಿಂದ ಅವರಿಗೆ ನಗರಸಭೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಜನನಾಯಕರು ಚುನಾವಣೆ ಸಂದರ್ಭದಲ್ಲಿ ಕೇವಲ ‘ಮತಬ್ಯಾಂಕ್’ಗಾಗಿ ಬಳಕೆಯಾಗುವ ಈ‌ ನಿರಾಶ್ರಿತರ ಮನೆಗಳಿಗೆ ಯಾವುದೇ ದಾಖಲೆಗಳಿಲ್ಲ.

1800ಕ್ಕೂ ಹೆಚ್ಚು ಕುಟುಂಬಗಳು ಪಿನಾಕಿನಿ ನದಿ ಪಾತ್ರದಲ್ಲಿ ನೆಲೆಸಿವೆ. ದಿನದಿಂದ ದಿನಕ್ಕೆ ‌ಇವುಗಳ ಸಂಖ್ಯೆ ಏರಿಕೆಯಾಗುತ್ತಿದೆ. ದಶಕಗಳ ‌ಹಿಂದೆ 150 ಮೀ ಗೂ ಹೆಚ್ಚು ಅಗಲವಿದ್ದ ಪಿನಾಕಿನಿ ‌ನದಿಯ ಪಾತ್ರವು ಒತ್ತುವರಿಯ ಪರಿಣಾಮದಿಂದಾಗಿ 150 ಅಡಿ ಆಗಿದೆ. ಇದು ಜನನಾಯಕರ ಸಾಧನೆಯಾಗಿದೆ!

ಈ‌ ಭಾಗದ ರೈತರ ಜೀವನಾಡಿ ಆಗಿರುವ ಪಿನಾಕಿನಿ ನದಿ ಪಾತ್ರದಲ್ಲಿ ಈಗ ದುರ್ನಾತ ಬೀರುತ್ತಿದೆ. ನದಿಯ ಒಡಲನ್ನು ದುರ್ನಾತ ಬೀರುವ ‘ತ್ಯಾಜ್ಯದ ಕೂಪ’ವಾಗಿದೆ. ನದಿಯುದ್ದಕ್ಕೂ ‌ಆಕ್ರಮಿತ ಬಡಾವಣೆಗಳಲ್ಲಿನ ಚರಂಡಿ‌ ನೀರು ಹರಿಯುತ್ತಿರುವುದರಿಂದ ನದಿ ಮಲಿನವಾಗುತ್ತಿದೆ.

ದಶಕಗಳಿಂದಲೂ ‌ನಗರಸಭೆಯ‌ ಅನುದಾನದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೋಟ್ಯಂತರ ‌ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಲೇ ಇವೆ. ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂಬಂತೆ ಜನನಾಯಕರೇ ಈ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.

ಪಿನಾಕಿನಿ ನದಿ ಪಾತ್ರದ ಗಡಿಯನ್ನು ಗುರುತಿಸಿ ಅನಧಿಕೃತ ಅತಿಕ್ರಮಣವನ್ನು ತೆರವುಗೊಳಿಸಿ ನದಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆರ್ಟ್ ಆಪ್ ಲಿವಿಂಗ್‌ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ₹ 4 ಕೋಟಿ ವಿಶೇಷ ಅನುದಾನ‌ ಬಿಡುಗಡೆಯಾಗಿತ್ತು. ಆದರೆ ಇದರ ಜವಾಬ್ದಾರಿ ಹೊತ್ತ ಸ್ಥಳೀಯ ಜನನಾಯಕರೊಬ್ಬರು ನಗರ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ನದಿಯ ಎರಡೂ‌ ಭಾಗದಲ್ಲಿ ತಂತಿ‌ಬೇಲಿ ನಿರ್ಮಾಣ ಮಾಡಿ ನಿರಾಶ್ರಿತರಿಗೆ ಆಸರೆ ಆಗಿದ್ದಾರೆ.

ಅಕ್ರಮ ಚಟುವಟಿಕೆಗಳ ತಾಣ: ನದಿ ಪಾತ್ರದಲ್ಲಿನ ಆಕ್ರಮಿತ ಕೆಲವು ಬಡಾವಣೆಗಳಲ್ಲಿ ನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಪೊಲೀಸರಿಗೆ ಇದರ‌ ಬಗ್ಗೆ ಖಚಿತ ಮಾಹಿತಿಯಿದೆ. ಆದರೂ ಜನನಾಯಕರ ರಕ್ಷಣೆಯಿಂದ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ಸಾಗುತ್ತಿವೆ ಎನ್ನುವ ದೂರುಗಳಿವೆ.
ರೈತರ ಜೀವನಾಡಿಯಾಗಿರುವ ಉತ್ತರ ಪಿನಾಕಿನಿ ನದಿಯು ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಿಂದಾಗಿ ನಿರಂತರವಾಗಿ ಹರಿಯುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸುವ ಜತೆಗೆ ಜನರಿಗೆ ಸಂತಸ ನೀಡಿದೆ‌. ಆದರೆ ನಗರದ ಬಹುಪಾಲು ಚರಂಡಿ ನೀರು ಮತ್ತು ತ್ಯಾಜ್ಯವು ಪಿನಾಕಿನಿಯ ಒಡಲು ತುಂಬುತ್ತಿದೆ. ನಾಗರಿಕರು ಮೂಗು ಮುಚ್ಚಿ ಓಡಾಡುವ ಪರಿ ಇದೆ‌.

ಮಾಲಿನ್ಯ ತಡೆಗೆ ಕ್ರಮ: ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ನದಿ ಪಾತ್ರವನ್ನು ಸರ್ವೆ ಮಾಡುವಂತೆ ತಹಶೀಲ್ದಾರರಿಗೆ ತಿಳಿಸಿದ್ದಾರೆ. ದಶಕಗಳಿಂದಲೂ ನದಿ ಪಾತ್ರದಲ್ಲಿ ವಾಸವಾಗಿರುವ ನಿರಾಶ್ರಿತರು ಸ್ಥಳವನ್ನು ಖಾಲಿ‌ ಮಾಡಲು ಬದಲಿ ವ್ಯವಸ್ಥೆ ಕೇಳುತ್ತಿದ್ದಾರೆ. ನದಿಯು ಮಲಿನವಾಗುವುದನ್ನು ತಡೆಯಲು ಸೂಕ್ತ ಕ್ರಮ ವಹಿಸುತ್ತೇವೆ.

ಡಿ.ಎಂ.ಗೀತಾ, ಪೌರಾಯುಕ್ತೆ, ನಗರಸಭೆ, ಗೌರಿಬಿದನೂರು

ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಮೂರ್ನಾಲ್ಕು ದಶಕಗಳಿಂದಲೂ ‌ನದಿ ಪಾತ್ರದಲ್ಲಿ ನಿರಾಶ್ರಿತ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಅವರ ಜೀವನ ಶೈಲಿಯು ಅತ್ಯಂತ ಕಷ್ಟವಾಗಿದೆ. ಅವರು ಅತಿಕ್ರಮಿಸಿಕೊಂಡು ಬದುಕು ಕಟ್ಟಿಕೊಂಡಿರುವ ಸ್ಥಳಗಳನ್ನು ತೆರವುಗೊಳಿಸುವ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ಜೀವನಕ್ಕೆ ಪರ್ಯಾಯ ‌ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಿದೆ. ನದಿಯು ಮಲಿನವಾಗುತ್ತಿರುವ ಬಗ್ಗೆ ಅಸಮಾಧಾನವಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಮ್ಮ ದಕ್ಷತೆ ಮೆರೆಯಬೇಕು.

ಕಲೀಂ ಉಲ್ಲಾ, 7ನೇ ವಾರ್ಡಿನ ನಗರಸಭೆ ಸದಸ್ಯ

ಪತ್ರ ಬರೆದರೂ ಉಪಯೋಗವಿಲ್ಲ: ಅಕ್ರಮವಾಗಿ ಒತ್ತುವರಿಯಾಗಿರುವ ನದಿ ಪಾತ್ರದ ಸರ್ವೇ ನಡೆಸಿ ಗಡಿ ಗುರ್ತಿಸಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅನೇಕ ಬಾರಿ ಜಿಲ್ಲಾಧಿಕಾರಿ ಮತ್ತು ಸಚಿವರಿಗೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ನದಿ ಪಾತ್ರ ಸ್ವಚ್ಛಗೊಳಿಸಲು ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕಾಗಿದೆ.

ಬಿ.ಜಿ.ವೇಣುಗೋಪಾಲರೆಡ್ಡಿ, ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ

ರೈತರಿಗ ಸಂಕಷ್ಟ: ಒತ್ತುವರಿ ಆಗಿರುವ ನದಿ ಪಾತ್ರ ತೆರವುಗೊಳಿಸಿ ರೈತರ ಜೀವಾಳವಾಗಿರುವ ನದಿಯನ್ನು ಉಳಿಸುವ ಮನಸ್ಥಿತಿ ಯಾರಿಗೂ ಇಲ್ಲ. ಜನಪ್ರತಿನಿಧಿಗಳು ಚುನಾವಣೆಗೆ ಮತಬ್ಯಾಂಕ್ ಮಾಡಿಕೊಂಡು ನಿರಾಶ್ರಿತರ ರಕ್ಷಣೆಗೆ ನಿಂತಿದ್ದಾರೆ. ಅಧಿಕಾರಿಗಳು ಅವರ ಕೈಗೊಂಬೆಗಳಾಗಿದ್ದಾರೆ. ನದಿಯ ಮೂಲಸ್ವರೂಪವನ್ನು ನಿರ್ಮಾಣ ಮಾಡುವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನದಿಯನ್ನು ಉಳಿಸಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.

ಸನತ್ ಕುಮಾರ್, ರೈತ ಮುಖಂಡು

ದಶಕಗಳಿಂದಲೂ ಧಕ್ಕೆ: ದಶಕಗಳಿಂದಲೂ ‌ಪಿನಾಕಿನಿಯ ನದಿ ಒಡಲಿಗೆ ಸಂಚಕಾರ ಎದುರಾಗುತ್ತಿದ್ದು, ಆರಂಭದಲ್ಲಿ ಅಕ್ರಮ ಮರಳು ದಂಧೆ ನಡೆದಿದೆ. ನಂತರದ ದಿನಗಳಲ್ಲಿ ನಿರಾಶ್ರಿತರ ಹೆಸರಿನಲ್ಲಿ ನದಿ ಪಾತ್ರವನ್ನು ಅತಿಕ್ರಮಣ ಮಾಡಿಕೊಂಡಿ ನಿರಂತರವಾಗಿ ‌ಮಲಿನ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ನಾಗರಿಕರು ಇದರ ಬಗ್ಗೆ ಎಚ್ಚೆತ್ತು ಹೋರಾಟ ಮಾಡದಿದ್ದಲ್ಲಿ ಮುಂದಿನ ಪೀಳಿಗೆ ಸಮಸ್ಯೆಗಳ ಸವಾಲುಗಳನ್ನು ‌ಎದುರಿಸುವ ಸ್ಥಿತಿ ಎದುರಾಗುತ್ತದೆ.

ಚೌಡಪ್ಪ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT