ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆ ಇಂದಿನ ಆದ್ಯತೆ

Last Updated 19 ಜುಲೈ 2019, 14:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಳೆ ಬಾರದಿರಲು ಪರಿಸರ ನಾಶ ಪ್ರಮುಖ ಕಾರಣ. ಆದ್ದರಿಂದ ಪರಿಸರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕಿದೆ’ ಎಂದು ತಾಲ್ಲೂಕಿನ ಕುರ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೆಂಕಟರೆಡ್ಡಿ ಹೇಳಿದರು.

ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗೆ ಪರಿಸರ ಕಡಿಮೆಯಾಗಿ ಪ್ರಾಣಿ, ಪಕ್ಷಿಗಳಿಗೆ ನೀರು, ನೆರಳಿಲ್ಲದಂತಹ ಸ್ಥಿತಿ ನಿರ್ಮಾಣ ಆಗುತ್ತಿದೆ. ಮರ, ಗಿಡಗಳನ್ನು ಬೆಳೆಸುವುದರಿಂದ ಜೀವವೈವಿಧ್ಯದಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಜತೆಗೆ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಕಟ್ಟಿಕೊಟ್ಟಂತೆ ಆಗುತ್ತದೆ’ ಎಂದು ತಿಳಿಸಿದರು.


‘ಮನುಷ್ಯ ನಿಸರ್ಗದ ಜತೆ ಬೆರೆತು ಬಾಳುವವರೆಗೂ ಭವಿಷ್ಯದ ಅಪಾಯ ತಪ್ಪಿದ್ದಲ್ಲ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಅದರ ನಡುವೆಯೇ ನಾವು ಸರಳ ಜೀವನ ರೂಢಿಸಿಕೊಳ್ಳಬೇಕಿದೆ’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಮಂಜುಳಾ ಮಾತನಾಡಿ, ‘ವಿದ್ಯಾರ್ಥಿಗಳು ಬೀಜದ ಉಂಡೆಗಳನ್ನು ತಯಾರಿಸಿ, ಹರಡುವ ಮೂಲಕ ಪರಿಸರ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಡೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ’ ಎಂದು ಹೇಳಿದರು.

ವಿದ್ಯಾರ್ಥಿಗಳೇ ಮನೆಯಿಂದ ಗೊಬ್ಬರ, ಮಣ್ಣು ಹಾಗೂ ಹೊಂಗೆ, ನೇರಳೆ, ಬೇವು, ಹಲಸಿನ ಬೀಜಗಳನ್ನು ಸಂಗ್ರಹಿಸಿ ತಂದು ಸುಮಾರು 1,000 ಬೀಜದ ಉಂಡೆಗಳನ್ನು ತಯಾರಿಸಿ ಕೌರನ ಬೆಟ್ಟದ ಸುತ್ತ ಮತ್ತು ಸರ್ಕಾರಿ ಜಾಗದಲ್ಲಿ ಪ್ರಸರಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT