ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಮುಖಂಡರಿಂದ ಠಾಣೆಗೆ ಮುತ್ತಿಗೆ

ಜೆಡಿಎಸ್ ಅತೃಪ್ತ ವಿರುದ್ಧ ಶಾಸಕ ಎಂ.ಕೃಷ್ಣಾರೆಡ್ಡಿ ದೂರು: ಪೊಲೀಸರಿಂದ ಪರಿಶೀಲನಾ ಭರವಸೆ
Last Updated 8 ಫೆಬ್ರುವರಿ 2023, 7:00 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಜೆಡಿಎಸ್ ಪಕ್ಷದ ಆಂತರಿಕ ಬೇಗುದಿ ಬಹಿರಂಗವಾಗಿದ್ದು ಶಾಸಕ ಎಂ.ಕೃಷ್ಣಾರೆಡ್ಡಿ ಸ್ವಪಕ್ಷದ ಮುಖಂಡ ಮಹೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿ ಎಚ್.ನಾರಾಯಣಸ್ವಾಮಿ ಬೆಂಬಲಿಗರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕೈವಾರ ಹೋಬಳಿ ಸಂತೇಕಲ್ಲಹಳ್ಳಿ ಕ್ಷೇತ್ರದಿಂದ ಎಚ್.ನಾರಾಯಣಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಆಯ್ಕೆಯಾಗಿದ್ದರು. ಅವರ ಪುತ್ರ ಎಚ್.ಮಹೇಶ್ ಮುಖಂಡತ್ವದಲ್ಲಿ ಗ್ರಾಮ ಪಂಚಾಯಿತಿ ಮತ್ತು ವೈಜಕೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಚುನಾವಣೆಯಲ್ಲಿ ಜಯಬೇರಿ ಬಾರಿಸಿದ್ದರು. ಕಳೆದ 10 ವರ್ಷಗಳಿಂದಲೂ ಜೆಡಿಎಸ್ ಪಕ್ಷದ ಪರವಾಗಿ ಶ್ರಮಿಸಿದ್ದರು. ಇತ್ತೀಚೆಗೆ ಶಾಸಕ ಎಂ.ಕೃಷ್ಣಾರೆಡ್ಡಿ ಮತ್ತು ಎಚ್.ನಾರಾಯಣಸ್ವಾಮಿ, ಮಹೇಶ್ ನಡುವೆ ಸಂಬಂಧ ಹಳಸಿತ್ತು.

ಫೆಬ್ರುವರಿ 6ರಂದು ಸೋಮವಾರ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ ಎಚ್.ನಾರಾಯಣಸ್ವಾಮಿ ಮತ್ತು ಮಹೇಶ್ ನೇತೃತ್ವದಲ್ಲಿ ಅತೃಪ್ತ ಮುಖಂಡರು, ಕಾರ್ಯಕರ್ತರು ಸಭೆ ಸೇರಿ ಶಾಸಕರ ವಿರುದ್ಧ ಆರೋಪ ಮಾಡಿದ್ದರು. ಶಾಸಕರ ಅಭಿವೃದ್ಧಿ ಮಾತುಗಳು ಬಾಯಿ ಮಾತಿಗೆ ಮಾತ್ರ ಸೀಮಿತ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ದೂರಿದ್ದರು.

ಸಭೆಯಲ್ಲಿ ಶಾಸಕರ ವಿರುದ್ಧ ಕೆಟ್ಟಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬೈರಾರೆಡ್ಡಿ ಮಂಗಳವಾರ ಗ್ರಾಮಾಂತರ ಠಾಣೆಗೆ ಮಹೇಶ್ ವಿರುದ್ಧ ದೂರು ನೀಡಿದ್ದರು. ರಾಜಕೀಯವಾಗಿ ಅತೃಪ್ತರ ಸಭೆ ನಡೆಸಿ ನಮಗಾಗಿರುವ ಅನ್ಯಾಯವನ್ನು ತೋಡಿಕೊಂಡಿದ್ದೇವೆ. ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ರಾಜಕೀಯವಾಗಿ ಮಾತನಾಡಬಾರದೇ ಎಂದು ಅವರ ನೂರಾರು ಬೆಂಬಲಿಗರು ಠಾಣೆಗೆ ಮುತ್ತಿಗೆ ಹಾಕಿದರು. ಶತೃವಿನ ಶತ್ರು ಮಿತ್ರ ಎನ್ನುವಂತೆ ಕಾಂಗ್ರೆಸ್ ಮುಖಂಡರು ಅವರಿಗೆ ಸಾಥ್ ನೀಡಿದರು.

ಎಎಸ್ಪಿ ಕುಶಾಲ್ ಚೌಕ್ಸೆ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ‘ದೂರು ನೀಡಿದ್ದಾರೆ. ದೂರಿನ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು. ಸಾಕ್ಷ್ಯಾಧಾರ ದೊರೆತರೆ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಕಳೆದ 30 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಎಲ್ಲೂ ಬೆರಳು ತೋರಿಸುವ ಕೆಲಸ ಮಾಡಿಲ್ಲ. ಕಳೆದ 10 ವರ್ಷಗಳಿಂದ ಶಾಸಕರಾಗಿ ಹಗಲು ರಾತ್ರಿ ದುಡಿದಿದ್ದೇವೆ. ಎರಡು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಕ್ಕೆ ದೂರು ದಾಖಲಿಸಿದ್ದಾರೆ. ಪರಿಣಾಮ ಮುಂದೆ ಅನುಭವಿಸುತ್ತಾರೆ ಎಂದು ಎಚ್.ನಾರಾಯಣಸ್ವಾಮಿ
ಹೇಳಿದರು.

ಶಾಸಕರ ವಿರುದ್ಧ ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. 10 ವರ್ಷದಿಂದ ಮನೆ ಆಳಿನಂತೆ ಶಾಸಕರಿಗಾಗಿ ದುಡಿದಿದ್ದೇವೆ. ನಮಗೆ ನೋವಾಗಿದೆ, ನಮ್ಮ ನೋವು, ಬೇಗುದಿ ತೋಡಿಕೊಂಡಿದ್ದೇವೆ. ಇದುವರೆಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ. ಶಾಸಕರೇ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಗಲಾಟೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮುಖಂಡ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

ತೇಜೋವಧೆ ಮಾಡಿದ್ದರಿಂದ ದೂರು: ‘ಎಚ್.ನಾರಾಯಣಸ್ವಾಮಿ, ಮಹೇಶ್ ಕಳೆದ 6 ತಿಂಗಳಿನಿಂದ ನಮ್ಮಿಂದ ದೂರವಾಗಿದ್ದಾರೆ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ. ವೈಯಕ್ತಿಕವಾಗಿ ಕೆಟ್ಟ ಭಾಷೆ ಬಳಸಿ ತೇಜೋವಧೆ ಮಾಡಿದ್ದರಿಂದ ದೂರು ನೀಡಿದ್ದೇನೆ. ತನಿಖೆ ನಡೆಸಿ ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT