ಶನಿವಾರ, ಮಾರ್ಚ್ 6, 2021
32 °C
‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ನಿಮಿತ್ತ ನಗರದಲ್ಲಿ ಜಾಗೃತಿ ಜಾಥಾ

ಸುಂದರ ಬದುಕಿಗೆ ಸಕಾರಾತ್ಮಕ ಚಿಂತನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಅವಸರದ ಮನಸ್ಥಿತಿ ಅಥವಾ ಆಘಾತಕರ ಆಲೋಚನೆಯಿಂದ ಒಂದು ನಿಮಿಷ ಹೊರ ಬಂದು ಸಕಾರಾತ್ಮಕ ಮತ್ತು ಸಂಯಮದಿಂದ ಆಲೋಚಿಸಿದರೆ ಆತ್ಮಹತ್ಯೆಯಂತಹ ವಿಚಾರಗಳನ್ನು ತೊಲಗಿಸಿ, ಸುಂದರ ಜೀವನ ನಡೆಸಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ನಿಮಿತ್ತ ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಸ್ಯೆಯು ಜೀವನದ ಒಂದು ಭಾಗ. ಅದನ್ನು ಎದುರಿಸಿ ಜೀವಂತವಾಗಿರಿ. ಪ್ರತಿ ಮನುಷ್ಯನಿಗೂ ಸಮಸ್ಯೆಗಳು ಇರುತ್ತವೆ. ಅದನ್ನು ಎದುರಿಸುವ ಶಕ್ತಿ ಸಹಾ ಅವರಿಗೆ ಇರುತ್ತದೆ. ಅದನ್ನು ತಿಳಿಯದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಎಂಬ ಪೈಶಾಚಿಕ ಕೃತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳು, ಸಂಘ ಸಂಸ್ಥೆಗಳು ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ’ ಎಂದು ತಿಳಿಸಿದರು.

‘ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಬದುಕುವುದೇ ಬೇಡ ಸಾಯುವುದೇ ಲೇಸು ಎಂಬ ಆಲೋಚನೆ ಬಂದಾಗ ಒಂದು ನಿಮಿಷ ನಿಮ್ಮ ತೀರ್ಮಾನ ಮುಂದೂಡಿ, ನಂಬಿಕಸ್ಥ ವ್ಯಕ್ತಿಗಳ ಜತೆ ಮನದೊಳಗಿನ ದುಗುಡ ತೋಡಿಕೊಂಡರೆ ನಿಮ್ಮ ನಿಧಾರವೇ ಬದಲಾಗುವಂತಹ ಉತ್ತಮ ಸಲಹೆಗಳು ದೊರೆಯುತ್ತವೆ’ ಎಂದರು.

‘ಆತ್ಮಹತ್ಯೆ ತಡೆಗಟ್ಟಲು ಎಲ್ಲರೂ ಒಗ್ಗುಡೋಣ ಎಂಬುದು ಈ ಬಾರಿ ದಿನಾಚರಣೆಯ ಘೋಷವಾಕ್ಯವಾಗಿದೆ. ಅದಂತೆ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

‘ಆತ್ಮಹತ್ಯೆ ಕುರಿತು ಜನರಲ್ಲಿ ತಿಳಿವಳಿಕೆ ತರಬೇಕು ಎನ್ನುವ ಉದ್ದೇಶದಿಂದಲೇ ವಿಶ್ವಸಂಸ್ಥೆ ಈ ದಿನಾಚರಣೆಯನ್ನು ಆಚರಣೆಗೆ ತಂದಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು ಮಾನಸಿಕ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಿ, ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಜತೆಗೆ ಅವರಿಗೆ ಅಗತ್ಯವಾದ ಒಳ್ಳೆಯ ಲಭ್ಯವಿರುವ ಚಿಕಿತ್ಸೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಮೋಹನ್, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.