ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಸಿಗದ ಮಾಸಾಶನ, ತಾಳಲಾರದ ಬಡತನ

ಕೆಳಗಿನತೋಟ ಪ್ರದೇಶದ ಅಂಗವಿಕಲೆ ಪರ್ವಿನ್ ತಾಜ್ ಅವರಿಗೆ ಆರು ತಿಂಗಳಿಂದ ಸಿಗದ ಸರ್ಕಾರದ ಹಣ, ಗಾಯದ ಮೇಲೆ ಬರೆದ ಎಳೆದ ಲಾಕ್‌ಡೌನ್‌
Last Updated 17 ಮೇ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಣ್ಣು ಪೊರೆ ಆಪರೇಷನ್‌ನಿಂದ ದುಡಿಯದಂತಾದ ಗಂಡ, ಮಗನ ದುಡಿಮೆ ಕಸಿದ ಲಾಕ್‌ಡೌನ್, ಅಂಗವೈಕಲ್ಯದಿಂದ ಹುಟ್ಟಿದಾರಭ್ಯ ಪರಾವಲಂಬಿಯಾದ ಮಗಳ ಕಾರಣಕ್ಕೆ ಕೂಲಿಗೆ ಹೋಗಲಾಗದ ಅಸಹಾಯಕತೆ..

ಹೊತ್ತಿನ ಗಂಜಿಗೆ ಆಸರೆಯಾಗಿದ್ದ ಅಂಗವಿಕಲ ಮಗಳ ಮಾಸಾಶನ ಕಳೆದ ಆರು ತಿಂಗಳಿಂದ ಸಿಗದೆ ಕಂಗಾಲಾಗಿರುವ ನಗರದ ಕೆಳಗಿನತೋಟದ ತಿಪ್ಪರೆಡ್ಡಿ ಬಡಾವಣೆಯ ಹಿಂಬದಿ ರಸ್ತೆ ನಿವಾಸಿ ಬಾಬನ್‌ಬಿ ಅವರ ಕುಟುಂಬದ ಕರುಣಾಜನಕ ಕಥೆ ಇದು.

ಬಾಬನ್‌ಬಿ, ಬಾಬುಸಾಬ್‌ ದಂಪತಿಗೆ ಮೂರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಈ ಪೈಕಿ ಅಂಗವಿಕಲೆಯಾದ ಪರ್ವಿನ್ ತಾಜ್ ಹೊರತುಪಡಿಸಿದರೆ ಉಳಿದೆಲ್ಲ ಮಕ್ಕಳ ಮದುವೆಯಾಗಿದೆ. ಕೂಲಿ ಮಾಡಿ ಹೊಟ್ಟೆ ಹೊರೆಯುವ ಈ ಕುಟುಂಬಕ್ಕೆ ಅಂಗವಿಕಲ ಮಗಳಿಗೆ ತಿಂಗಳಿಗೆ ಸಿಗುವ ₹1,400 ಮಾಸಾಶನವೂ ಜೀವನಾಧಾರವಾಗಿದೆ.

ತನ್ನ ಇಚ್ಛೆಗೆ ಎದ್ದು ಕುಳಿತುಕೊಳ್ಳಲಾಗದ, ಸಾಮಾನ್ಯರಂತೆ ಎದ್ದು ನಡೆದಾಡದ, ಮಾತನಾಡಲೂ ಬಾರದ ಪರ್ವಿನ್ ತಾಜ್ ಅವರ ಸ್ಥಿತಿ ಮರುಕ ಹುಟ್ಟಿಸುತ್ತದೆ. ಸ್ವಾಧೀನವೇ ಇಲ್ಲದ ಮಗಳಿಗೆ ತಾಯಿಬಾಬನ್‌ಬಿ ಅವರು ಸದಾ ಬೆನ್ನೆಲುಬಾಗಿದ್ದು, ದೈನಂದಿನ ನಿತ್ಯಕರ್ಮಗಳು ಸೇರಿದಂತೆ ಪ್ರತಿಯೊಂದರಲ್ಲೂ ಸಹಾಯ ಮಾಡಬೇಕಾದ ಸ್ಥಿತಿ ಇದೆ.

ಕೂಲಿನಾಲಿ ಮಾಡಿ ಬದುಕು ಸಾಗಿಸುತ್ತಿದ್ದ ಬಾಬುಸಾಬ್‌ ಅವರು ಕೂಡ ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ದುಡಿಮೆಗೆ ಹೋಗಲಾದ ಸ್ಥಿತಿಯಲ್ಲಿದ್ದಾರೆ. ಆಟೊ ಓಡಿಸಿ, ಹಾಸಿಗೆ ಹೊಲಿದು ಹೊಟ್ಟೆ ಹೊರೆಯುವ ಮಗನಿಗೂ ಲಾಕ್‌ಡೌನ್‌ ಕಾರಣಕ್ಕೆ ಎರಡು ತಿಂಗಳಿಂದ ಆದಾಯವೇ ಇಲ್ಲದಂತಾಗಿದೆ.

ಪ್ರತಿ ತಿಂಗಳು ಮಗಳಿಗೆ ಸಿಗುವ ಮಾಸಾಶನದಿಂದಲಾದರೂ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳೋಣ ಎಂದು ಹಂಬಲಿಸುತ್ತಿರುವ ಈ ಬಡ ಕುಟುಂಬಕ್ಕೆ ಕಳೆದ ಆರು ತಿಂಗಳಿಂದ ಅದೂ ಸಿಗದೆ ದಿಕ್ಕು ತೋಚದಂತಾಗಿದೆ. ಪಿಂಚಣಿಗಾಗಿ ಚಾತಕಪಕ್ಷಿಯಂತೆ ಪೋಸ್ಟ್‌ಮೆನ್‌ ದಾರಿ ಕಾಯ್ದ ಕುಟುಂಬ ಕಣ್ಣೀರು ಹಾಕುತ್ತಿದೆ.

ಮಗಳ ಮಾಸಾಶನದ ವಿಚಾರವಾಗಿ ಅಂಚೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿಗೆ ಅಲೆದ ತಂದೆಗೆ ಯಾವೊಬ್ಬ ಅಧಿಕಾರಿ ಕ್ಯಾರೆ ಎನ್ನಲಿಲ್ಲ, ನೋವಿಗೆ ಸ್ಪಂದಿಸಿಲ್ಲ. ಮುಂದೇನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಈ ಅನಕ್ಷರಸ್ಥ ಬಡ ದಂಪತಿ.

ಕೂರಿಸಿದಲ್ಲಿಯೇ ನೆಲದ ಮೇಲೆ ಒರಗುವ 25ರ ಹರೆಯದ ಪರ್ವಿನ್ ತಾಜ್ ಅವರು ಇಂದಿಗೂ ಪುಟ್ಟ ಮಕ್ಕಳಂತೆ ಪ್ರತಿಯೊಂದಕ್ಕೂ ತಾಯಿಯನ್ನೇ ಆಶ್ರಯಿಸಿದ ಜೀವ. ಒಂದೆಡೆ ಬೆಳೆಯುತ್ತಿರುವ ಮಗಳು, ಇನ್ನೊಂದೆಡೆ ಕುಂದುತ್ತಿರುವ ಶಕ್ತಿ ಪರಿಣಾಮ ಮಗಳ ಆರೈಕೆಗೆ ಒಬ್ಬರಲ್ಲ ಇಬ್ಬರ ಸಹಾಯ ಬೇಕಾಗುತ್ತಿದೆ.

ದುಡಿಯಲಾರದೆ ತುಂಬದ ಹೊಟ್ಟೆ, ಕೂಲಿನಾಲಿಗೆ ಹೋಗದಂತೆ ಕಟ್ಟಿ ಹಾಕುತ್ತಿರುವ ಮಗಳ ದೈಹಿಕ ನ್ಯೂನತೆ ವೃದ್ಧ ದಂಪತಿಯ ನಿದ್ದೆಗೆಡಿಸಿದೆ. ಮಗಳ ಹೆಸರಿನಲ್ಲಿ ಸಿಗುವ ಮಾಸಾಶನದಿಂದಲಾದರೂ ಸಂಸಾರ ಸರಿದೂಗಿಸೋಣ ಎಂದುಕೊಂಡರೆ ಅದು ಕೂಡ ಸಕಾಲಕ್ಕೆ ಸಿಗದಂತಾಗದ ವ್ಯವಸ್ಥೆಯಿಂದ ಹತಾಶೆಗೊಂಡಿದ್ದಾರೆ.

’ಕಳೆದ ಆರು ತಿಂಗಳಿಂದ ಮಗಳ ಮಾಸಾಶನ ಬಂದಿಲ್ಲ. ಮನೆ ಬಳಿ ಬರುವ ಪೋಸ್ಟ್‌ಮೆನ್‌ ವಿಚಾರಿಸಿದರೆ ಇನ್ನೂ ಬಂದಿಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ವಿಚಾರಿಸಲು ಬಿ.ಬಿ.ರಸ್ತೆಯಲ್ಲಿರುವ ಅಂಚೆ ಕಚೇರಿ, ಡಿಸಿ ಆಫೀಸ್‌, ತಾಲ್ಲೂಕು ಕಚೇರಿ ಎಲ್ಲಾ ಕಡೆ ಎರಡ್ಮೂರು ಬಾರಿ ಅಲೆದರೂ ಪ್ರಯೋಜನವಾಗಲಿಲ್ಲ. ಸುಮ್ಮನಾಗಿಬಿಟ್ಟೆ‘ ಎಂದು ಬಾಬುಸಾಬ್‌ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರದ ಬಿ.ಬಿ.ರಸ್ತೆಯಲ್ಲಿರುವ ಅಂಚೆ ಪ್ರಧಾನ ಕಚೇರಿ ಸಂಪರ್ಕಿಸಲಾಯಿತು. ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT