ಸೋಮವಾರ, ಏಪ್ರಿಲ್ 19, 2021
33 °C

ಒತ್ತುವರಿ ತೆರವುಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಜಮೀನು ಒತ್ತುವರಿಯಿಂದಾಗಿ ನಗರದ 12, 17, 15 ಮತ್ತು 24ನೇ ವಾರ್ಡ್‌ಗಳ ಜನರು ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಬೋದಗೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಈ ಬಗ್ಗೆ ಸ್ಥಳ ಪರಿಶೀಲನೆ ನಡೆದಿಲ್ಲ ಎಂದು ನಗರಸಭಾ ಸದಸ್ಯ ಅಫ್ಸರ್ ಪಾಷ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನ ಕಸಬಾ ಹೋಬಳಿ ಸರ್ವೆ ನಂ 29 ರಿಂದ 37 ಮತ್ತು 77 ರಿಂದ 85 ರವರೆಗೆ ಹಾಗೂ ಇದ್ಲೂಡು ಗ್ರಾಮಸರ್ವೆ ನಂ 26 ರಿಂದ 28 ಮತ್ತು 36 ರಿಂದ 38 ರವರೆಗೆ, 41 ರಿಂದ 45 ರವರೆಗೆ ಮತ್ತು ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂ 5 ರಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಇದೆ. ಈ ಭಾಗದಲ್ಲಿ ಜಮೀನುದಾರರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಗರದ 12, 17, 15 ಮತ್ತು 24ನೇ ವಾರ್ಡ್‌ಗಳ ಜನರು ಓಡಾಡಲು ಆಗದೇ, ಸರಕು ಸಾಗಣೆ ಮಾಡಲು ಕಷ್ಟವಾಗಿದೆ. ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ತಹಶೀಲ್ದಾರ್ ಅವರು ಕಚೇರಿಯಲ್ಲಿ ಇರುವುದಿಲ್ಲ. ಸರ್ವೇ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು ಹಣ ನೀಡಿದರೆ ಮಾತ್ರ ಕೆಲಸ ಎಂಬಂತಾಗಿದೆ. ಕೂಡಲೆ ಜಿಲ್ಲಾಧಿಕಾರಿ ಕ್ರಮ ಜರುಗಿಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ನಗರಸಭಾ ಸದಸ್ಯ ಮೌಲಾ ಮಾತನಾಡಿ, ನಗರದ ವಾರ್ಡ್ 12 ರಲ್ಲಿನ 3ನೇ ಕಾರ್ಮಿಕ ನಗರ, ಗಾಂಧಿನಗರ ಮತ್ತು ರಹಮತ್ ನಗರ ತೀರಾ ಹಿಂದುಳಿದಿವೆ. ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಇಲ್ಲಿ ಸರ್ಕಾರಿ ಖರಾಬಿ 20 ಗುಂಟೆ ಜಮೀನನ್ನು ಉದ್ಯಮಿ ಬಿ.ನಾರಾಯಣಸ್ವಾಮಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ಸರ್ಕಾರಿ ಜಮೀನನ್ನು ಲಪಟಾಯಿಸಿ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲು ಮುಂದಾಗಿದ್ದಾರೆ. ನಗರಸಭೆಯ ಚರಂಡಿಯನ್ನು ಒಡೆದು ನೀರನ್ನು ಶೇಖರಿಸಿ ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ದುರ್ವಾಸನೆಯಿಂದ ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮುಖಂಡರಾದ ರಮೇಶ್, ಮಂಜುನಾಥ್, ಅನ್ಸರ್ ಪಾಷ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು