ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ್ ಬಿಡುಗಡೆಗೆ ಚರ್ಚ್‌ನಲ್ಲಿ ಪ್ರಾರ್ಥನೆ

Last Updated 8 ಸೆಪ್ಟೆಂಬರ್ 2019, 13:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಸಕ ಡಿ.ಕೆ.ಶಿವಕುಮಾರ್ ಅವರು ಬೇಗ ಬಂಧನದಿಂದ ಮುಕ್ತರಾಗಬೇಕು ಎಂದು ಕಾಂಗ್ರೆಸ್ ಮುಖಂಡರು ಭಾನುವಾರ ನಗರದ ಸಿಎಸ್‌ಐ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ‘ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಕರ್ನಾಟಕದಲ್ಲಿ ಆಶ್ರಯ ಕೊಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರ ಐಟಿ, ಇಡಿ ದುರ್ಬಳಕೆ ಮಾಡಿಕೊಂಡು ಶಿವಕುಮಾರ್ ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಅವರು ತಪ್ಪು ಮಾಡಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ತನಿಖಾ ಸಂಸ್ಥೆಗಳನ್ನು ದ್ವೇಷ ಸಾಧನೆಗೆ ದುರುಪಯೋಗ ಮಾಡುತ್ತಿರುವುದು ಖಂಡನಾರ್ಹ’ ಎಂದು ಹೇಳಿದರು.

‘ಶಿವಕುಮಾರ್ ಅವರನ್ನು ಬಂಧಿಸುವಂತಹ ಕೆಟ್ಟ ಕೆಲಸಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಇಳಿಯುತ್ತದೆ ಎನ್ನುವುದು ಅವರ ವರ್ತನೆಯಿಂದ ನಮಗೆ ತಿಳಿದಿತ್ತು. ರಾಜಕೀಯ ಪ್ರೇರಿತವಾದ ಈ ಬಂಧನವನ್ನು ನಾವು ಖಂಡಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಶಿವಕುಮಾರ್ ಅವರ ಜತೆಗೆ ನಿಲ್ಲುತ್ತದೆ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ, ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಐಟಿ, ಇಡಿ, ಸಿಬಿಐ ಸೇರಿದಂತೆ ದೇಶದ ಹಲವು ಸಂಸ್ಥೆಗಳನ್ನು, ತಮ್ಮ ಪಕ್ಷದ ಸಂಘಟನೆಗಳಂತೆ ಬಳಕೆ ಮಾಡಿಕೊಂಡಿದ್ದಾರೆ. ಐಟಿ, ಇಡಿ ಇಲಾಖೆಗಳು ತಮ್ಮ ಸ್ವಾಯತ್ತತೆ ಕಳೆದುಕೊಂಡು ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಆಪರೇಷನ್ ಕಮಲಕ್ಕಾಗಿ ಬಿಜೆಪಿ ನಾಯಕರು ನೂರಾರು ಕೋಟಿ ಹಣ ಖರ್ಚು ಮಾಡಿದ್ದಾರೆ. ಇದನ್ನು ಸದನದ ಒಳಗೂ, ಹೊರಗೂ ಪ್ರಶ್ನಿಸಿ, ತನಿಖೆಗೆ ನಮ್ಮ ನಾಯಕರು ಒತ್ತಾಯಿಸಿದರು. ಆದರೆ, ಆಪರೇಷನ್ ಕಮಲ ರೂವಾರಿಗಳಾದ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಸೇರಿದಂತೆ ಇತರರ ಮನೆ ಮೇಲೆ ಯಾವುದೇ ದಾಳಿ ನಡೆದಿಲ್ಲ ಏಕೆ? ಇದು ಬಿಜೆಪಿಯ ಸರ್ವಾಧಿಕಾರವನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.

ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಅಮಾನುಲ್ಲಾ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಮುಖಂಡರಾದ ಹೆನ್ರಿ, ವಿಜಯೇಂದ್ರ ಬಾಬು, ಮರಸನಹಳ್ಳಿ ಪ್ರಕಾಶ್, ಬಾಬಾಜಾನ್, ವೆಂಕಟೇಶ್, ಶಬಿತ್ ಅಲೆಕ್ಸಾಂಡರ್, ಕೇಶವಾರ ವೆಂಕಟೇಶ್, ಹಮೀಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT