ಮಂಗಳವಾರ, ಅಕ್ಟೋಬರ್ 15, 2019
28 °C
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಿ.ಟಿ.ರವಿ ಭರವಸೆ

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ರಾಜಧಾನಿ ಬೆಂಗಳೂರು ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಹತ್ತಿರವಿರುವ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಭಯ ಇಲಾಖೆಗಳ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ 319 ಪ್ರವಾಸಿ ಕೇಂದ್ರಗಳಿವೆ. ರಾಜ್ಯಮಟ್ಟದಲ್ಲಿ ಚಿಕ್ಕಬಳ್ಳಾಪುರದ 13 ಪ್ರವಾಸೋದ್ಯಮ ತಾಣಗಳನ್ನು ಗುರುತಿಸಲಾಗಿದೆ. ಜತೆಗೆ ಜಿಲ್ಲಾಡಳಿತ ಕೂಡ ಸ್ಥಳೀಯವಾಗಿ 50 ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅವುಗಳ ಅಭಿವೃದ್ಧಿಗೆ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಪ್ರವಾಸೋದ್ಯಮದ ಜತೆಗೆ ಸಂಸ್ಕೃತಿಯನ್ನು ಜೋಡಿಸಿ ಹೊಸ ಪ್ರವಾಸಿ ನೀತಿ ತರುವ ಚಿಂತನೆ ಇದೆ. ಪ್ರವಾಸಿಗರ ಸಂಖ್ಯೆಯಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಿಸಲು ಯೋಚಿಸಿದ್ದೇವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಆದಾಯ ವೃದ್ಧಿಸಲಿದೆ. ರಾಜ್ಯದಲ್ಲಿ 41 ಪ್ರವಾಸಿ ಸರ್ಕಿಟ್‌ಗಳನ್ನು ಗುರುತಿಸಿದ್ದೇವೆ. ಅದರ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಕೂಡ ಅಧಿಕಾರಿಗಳು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಬೇಕು. ಪ್ರವಾಸಿ ತಾಣಗಳನ್ನು ಪರಿಚಯಿಸುವಂತಹ ವಿಡಿಯೊಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬೇಕು. ಪ್ರವಾಸಿ ತಾಣಗಳ ಮಾಹಿತಿ ನೀಡುವ ಕೈಪಿಡಿ, ಕಾಫಿ ಟೇಬಲ್ ಪುಸ್ತಕ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ಪ್ರತಿ ಗ್ರಾಮದ ಚರಿತ್ರೆ ಕಲೆ ಹಾಕುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾಹಿತಿ ಕಲೆ ಹಾಕಲು ಕ್ಷೇತ್ರ ಅಧ್ಯಯನಕ್ಕೆ ಕಳುಹಿಸಬೇಕು. ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳು ಗ್ರಾಮಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಆಯಾ ಗ್ರಾಮಸ್ಥರ ಗಮನಕ್ಕೆ ತಂದು ತಪ್ಪುಗಳನ್ನು ಸರಿಪಡಿಸಿ ಅಂತಿಮವಾಗಿ ವಿಕಿಪೀಡಿಯಾದಲ್ಲಿ ಸೇರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಅಧಿಕಾರಿಗಳು ಕರ್ನಾಟಕ ದರ್ಶನ ಪ್ರವಾಸದ ಬಗ್ಗೆ ಮಾಹಿತಿ ನೀಡುವಾಗ ಸಚಿವರು, ‘ಇದು ಮಹಾತ್ಮಾ ಗಾಂಧೀಜಿ ಅವರ 150 ಜನ್ಮ ವರ್ಷಾಚರಣೆ ಆಗಿರುವ ಕಾರಣ ಈ ಬಾರಿಯ ಕರ್ನಾಟಕ ದರ್ಶನ ಪ್ರವಾಸದಲ್ಲಿ ವಿದ್ಯಾರ್ಥಿಗಳನ್ನು ಜಿಲ್ಲೆಯಲ್ಲಿ ಗಾಂಧೀಜಿ ಅವರು ಭೇಟಿ ನೀಡಿದ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಅವರಿಂದ ಗಾಂಧೀಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿಸಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರನ್ನು ಕುರಿತು ರವಿ ಅವರು, ‘ಜಯಂತಿ ಆಚರಣೆಗಳು ಇವತ್ತು ಜಾತಿಗಳಿಗೆ ಸೀಮಿತವಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದ್ದರಿಂದ ಶೀಘ್ರದಲ್ಲಿಯೇ ಚಿಂತಕರು, ಸಾಹಿತಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಅವರಿಂದ ಜಯಂತಿಗಳ ಆಚರಣೆಗಳ ಸ್ವರೂಪ ಹೇಗಿರಬೇಕು ಎಂಬ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು’ ಎಂದು ಸೂಚನೆ ನೀಡಿದರು.

ವಿಧಾನಸಭೆ ಉಪಸಭಾಧ್ಯಕ್ಷ ಎಂ.ಕೃಷ್ಣರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ಪ್ರವಾಸೋದ್ಯಮ ಇಲಾಖೆ ಹಂಗಾಮಿ ಉಪ ನಿರ್ದೇಶಕ ಷರೀಫ್‌ ಸಭೆಯಲ್ಲಿ ಹಾಜರಿದ್ದರು.

Post Comments (+)