7
ಪೆರೇಸಂದ್ರದ ಶಾಂತಾ ವಸತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಕಾರ್ಯಕ್ರಮ

ಉತ್ತಮ ನಾಯಕರು ಹುಟ್ಟುವುದಿಲ್ಲ, ರೂಪುಗೊಳ್ಳುತ್ತಾರೆ

Published:
Updated:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು

ಚಿಕ್ಕಬಳ್ಳಾಪುರ: ‘ಯಾರು ಕೂಡ ಉತ್ತಮ ನಾಯಕರಾಗಿ ಹುಟ್ಟುವುದಿಲ್ಲ. ವ್ಯಕ್ತಿ ಬೆಳೆಯುವ ಹಂತದಲ್ಲಿ ತನ್ನ ಪರಿಶ್ರಮದಿಂದಾಗಿ ನಾಯಕನಾಗಿ ರೂಪುಗೊಳ್ಳುತ್ತಾ ಹೋಗುತ್ತಾನೆ’ ಎಂದು ತಾಲ್ಲೂಕಿನ ಪೆರೇಸಂದ್ರದಲ್ಲಿ ಶಾಂತಾ ವಸತಿ ವಿದ್ಯಾಸಂಸ್ಥೆ ಶೈಕ್ಷಣಿಕ ಸಲಹೆಗಾರ ಪ್ರೋ.ಕೋಡಿರಂಗಪ್ಪ ಹೇಳಿದರು.

ಶಾಂತಾ ವಸತಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ನಾಯಕರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಮಗುವಿನಲ್ಲಿ ನಾಯಕತ್ವ ಗುಣವಿರುತ್ತದೆ. ಅದನ್ನು ಶಿಕ್ಷಕರು ಹೊರತರುವ ಕೆಲಸ ಮಾಡಬೇಕಷ್ಟೇ. ಒಂದು ದೊಡ್ಡ ದೇಶ ಕಟ್ಟಬೇಕಾದರೆ ದೂರದೃಷ್ಟಿವುಳ್ಳ ದೊಡ್ಡ ನಾಯಕರು ಬೇಕಾಗುತ್ತಾರೆ. ಯಾವ ದೇಶದಲ್ಲಿ ದೊಡ್ಡ ನಾಯಕರು ಇರುತ್ತಾರೋ ಅಂತಹ ದೇಶಗಳು ಅಭಿವೃದ್ಧಿ ಹೊಂದುತ್ತವೆ’ ಎಂದು ತಿಳಿಸಿದರು.

‘ನಾಯಕತ್ವ ಬರೀ ರಾಜಕೀಯಕ್ಕೆ ಮಾತ್ರವಲ್ಲ, ಮನೆ, ತರಗತಿಯಿಂದ ಹಿಡಿದು ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಅಗತ್ಯವಿದೆ. ಶಿಕ್ಷಣದ ಮೂಲಕ ಅದರ ಸಾಮರ್ಥ್ಯವನ್ನು ಕಲಿತುಕೊಳ್ಳಬೇಕು. ಹೋರಾಟದ ಮನೋಭಾವ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಗೌರವ ನೀಡುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದರು.

‘ನಾಯಕರು ಸದಾ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಾರೆ. ಸೋಲನ್ನು ಅವಕಾಶವನ್ನಾಗಿ ಪರಿವರ್ತಿಸುತ್ತಾರೆ. ಇವತ್ತಿನ ಕಾಲಕ್ಕೆ ನಮಗೆ ಹೆಚ್ಚು ನಾಯಕರ ಅಗತ್ಯವಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ನಾಯಕರಾಗಿ ಬೆಳೆದರೆ ಸಮಾಜಕ್ಕೆ ಹೆಚ್ಚು ಲಾಭವಾಗುತ್ತದೆ. ಈ ದೇಶಕ್ಕೆ ಅಂತಹ ನಾಯಕರನ್ನು ಕೊಡುವ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಇಲ್ಲಿ ಓದುವವರೆಲ್ಲರೂ ನಾಯಕರಾಗಿ ಬೆಳೆಯಬೇಕು’ ಎಂದು ಹೇಳಿದರು.

‘ಈ ಜಿಲ್ಲೆಯಲ್ಲಿ ಕೂಡ ಸರ್.ಎಂ.ವಿಶ್ವೇಶ್ವರಯ್ಯ, ಎನ್.ನರಸಿಂಹಯ್ಯ, ಸಿ.ಆರ್.ರಾವ್ ಅವರಂತಹ ಮಹನೀಯರು ತಮ್ಮ ಬೌದ್ಧಿಕತೆಯಿಂದಾಗಿ ನಾಯಕರಾಗಿ ಬೆಳೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಮ್ಮ ವಿದ್ಯಾರ್ಥಿಗಳು ಸಹ ಅವರ ದಾರಿ ತುಳಿದು ದೊಡ್ಡ ವ್ಯಕ್ತಿಗಳಾಗಿ ಬೆಳೆಯಬೇಕು’ ಎಂದು ತಿಳಿಸಿದರು.

ಪ್ರಾಂಶುಪಾಲ ಎಸ್. ಆರ್. ಶೇಖರ್ ಮಾತನಾಡಿ, ‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದ ಗುಣವಿರುತ್ತದೆ. ಅದನ್ನು ಹೊರಗೆ ತೆಗೆದು ತೋರುವ ಪ್ರಯತ್ನ ಮಾಡಬೇಕು. ಸತ್ಯ, ಪ್ರಾಮಾಣಿಕತೆ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ ಎಂದರು. ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಎಸ್. ಎಚ್. ಪ್ರೀತಿ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !