ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಅಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಸೂಚನೆ
Last Updated 25 ಆಗಸ್ಟ್ 2021, 9:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆ, ಸೌಲಭ್ಯಗಳನ್ನು ಅವರಿಗೆ ಸಮರ್ಪಕವಾಗಿ ಒದಗಿಸಬೇಕು. ಅವರನ್ನು ಮಾನವೀಯತೆಯಿಂದ ನೋಡಬೇಕು. ಈ ಸಂಬಂಧ ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಪೌರಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಅಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರ ಬದುಕನ್ನು ಸರಿಪಡಿಸಿ ಅವರೂ ಗೌರವವಾಗಿ ಬದುಕು ಕಟ್ಟಿಕೊಳ್ಳಲು ಪುನರ್ವಸತಿಯ ಅಗತ್ಯ ಮನಗಂಡು ವಿಶೇಷ ಯೋಜನೆಗಳನ್ನು ಸರ್ಕಾರಗಳು ಜಾರಿಗೊಳಿಸಿವೆ. ಅಧಿಕಾರಿಗಳು ಯೋಜನೆಗಳನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಪೌರಕಾರ್ಮಿಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಬೇಕು. ಅವರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ನೀತಿ, ನಿಯಮಗಳ ಅರಿವು ಮೂಡಿಸಬೇಕು. ಅಧಿಕಾರಿಗಳು ಕಾಯ್ದೆಯನ್ನು ಹಗುರವಾಗಿ ತೆಗೆದುಕೊಳ್ಳದೆ ಪೌರಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ತಲುಪಿಸಬೇಕು ಎಂದರು.

ಪೌರ ಕಾರ್ಮಿಕರಿಗೆ ಸಮವಸ್ತ್ರ, ಕೈಕವಚ, ಹೆಡ್‌ಕ್ಯಾಪ್, ಗಮ್‌ಬೂಟು, ಇನ್ನಿತರೆ ಗುಣಮಟ್ಟದ ಸುರಕ್ಷಾ ಸಾಧನಗಳನ್ನು ನೀಡಬೇಕು. ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು. ಮನೆ ಇಲ್ಲದವರಿಗೆ ಮನೆ, ನಿವೇಶನದ ಜಾಗ ಗುರುತಿಸಿ ಅವಶ್ಯ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪೌರಕಾರ್ಮಿಕರು ಕೆಲಸ ಮಾಡುವ ಕಡೆ ಇಎಸ್‌ಐ ಹಾಗೂ ಪಿ.ಎಫ್ ವಂತಿಕೆಗಳನ್ನು ಕಡ್ಡಾಯವಾಗಿ ನೌಕರರ ಖಾತೆಗೆ ಜಮೆ ಮಾಡಬೇಕು. ಪೌರಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಆಗುತ್ತಿರುವ ಬಗ್ಗೆ ಕಾರ್ಮಿಕ ಅಧಿಕಾರಿಗಳು ಪರಿಶೀಲಿಸಬೇಕು. ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನಿಗದಿತ ಕನಿಷ್ಠ ವೇತನ ಕಡ್ಡಾಯವಾಗಿ ಪಾವತಿಸಬೇಕು ಎಂದು ಅವರು
ತಾಕೀತು ಮಾಡಿದರು.

ಪೌರಕಾರ್ಮಿಕರ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರಬಾರದು. ಸ್ಕ್ಯಾವೆಂಜಿಂಗ್ ನಡೆಸಲು ಒತ್ತಾಯ ಮಾಡುವಂತಿಲ್ಲ. ಪೌರಕಾರ್ಮಿಕರಿಗೆ ಕಾನೂನು ಪ್ರಕಾರ ವಿಮೆ, ವೈದ್ಯಕೀಯ ಸೌಲಭ್ಯ ನೀಡಬೇಕು ಎಂದರು.

ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಆರು ತಾಲ್ಲೂಕುಗಳ ಪೌರಕಾರ್ಮಿಕರ ಜತೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ ಅಧ್ಯಕ್ಷರು ನಗರದ ಕಂದವಾರದ ಬಳಿಯಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ನಿರಾಶ್ರಿತರಿಗೆ ನಿರ್ಮಿಸಿರುವ
ಮನೆಗಳನ್ನು ವೀಕ್ಷಿಸಿದರು. ನಂತರ ಜೈಭೀಮ್ ನಗರಕ್ಕೆ ಭೇಟಿ ನೀಡಿ, ಅಲ್ಲಿ ಪರಿಶಿಷ್ಟರ ಕಾಲೊನಿಯಲ್ಲಿ ಸ್ವಚ್ಛತೆ, ವಸತಿ, ನಿವೇಶನ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT