ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಖಾತೆ ಕಿರಿಕಿರಿಗೆ ನಾಗರಿಕರು ಹೈರಾಣು

‘ಹೊಂದಾಣಿಕೆ’ಯಾಗದೆ ವರ್ಗವಾದರೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರು?
Last Updated 26 ಜುಲೈ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಖಾತೆ ಕಿರಿಕಿರಿ ನಾಗರಿಕರನ್ನು ಹೈರಾಣು ಮಾಡುತ್ತಿದೆ. ಅಷ್ಟೇ ಅಲ್ಲದೆ ನಗರಸಭೆಯ ಆಡಳಿತ ಮತ್ತು ಅಧಿಕಾರಿಗಳ ವಿರುದ್ಧ ಜನರಲ್ಲಿ ಆಕ್ರೋಶ ಮಡುಗಟ್ಟುತ್ತಿದೆ.ಖಾತೆಯಾಗದ ಕಾರಣ ನಾಗರಿಕರು ಆಸ್ತಿ ಮಾರಾಟ, ಮನೆ ನಿರ್ಮಾಣಕ್ಕೆ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಇಂದಲ್ಲಾ ನಾಳೆ ಕ್ರಯದ ಖಾತೆ ಆಗುತ್ತದೆ ಎಂದು ಕೆಲವರು ವರ್ಷಗಳನ್ನೇ ಕಳೆದಿದ್ದಾರೆ.ಈ ನಡುವೆ ನಗರಸಭೆ ಆಯುಕ್ತರಾಗಿದ್ದ ಮಹಾಂತೇಶ್ ಅವರು ವರ್ಗಾವಣೆಯಾಗಿದ್ದು ಇದು ಜನರಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಮಹಾಂತೇಶ್ನಗರಸಭೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ 8ರಿಂದ 9 ತಿಂಗಳಷ್ಟೇ ಆಗಿತ್ತು. ಕಡಿಮೆ ಅವಧಿಯಲ್ಲಿ ಉತ್ತಮವಾದ ಹೆಸರನ್ನು ಪಡೆಯುವ ಹೆಜ್ಜೆಯಲ್ಲಿ ಇದ್ದರು. ಈ ನಡುವೆಯೇ ಅವರ ವರ್ಗಾವಣೆ ಆಗಿದೆ. ಮಹಾಂತೇಶ್ ಅವರೇ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ನಗರಸಭೆ ಮೂಲಗಳು ಹೇಳುತ್ತವೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಚಿಕ್ಕಬಳ್ಳಾಪುರ ರಾಜಕಾರಣದ ಜತೆ ‘ಹೊಂದಾಣಿಕೆ’ಯಾಗದೆ ಮತ್ತು ಇಲ್ಲಿನ ಖಾತೆ ಕಿರಿಕಿರಿಯನ್ನು ತಾಳದೆ ವರ್ಗವಾದರೆ ಆಯುಕ್ತರು? ಎನ್ನುವ ಅನುಮಾನ ಮತ್ತು ಚರ್ಚೆ ನಾಗರಿಕರಲ್ಲಿ ಮೂಡಿದೆ. ಖುದ್ದು ನಗರಸಭೆ ಸದಸ್ಯರೇ ಈ ಮಾತುಗಳನ್ನಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯು ಕೆಲವು ವರ್ಷಗಳಿಂದ ಕ್ರಯದ ಖಾತೆಗಳನ್ನು ಮಾಡಿಕೊಡುತ್ತಿಲ್ಲ. ಇದರಿಂದ ನಾಗರಿಕರಿಗೆ ಸಮಸ್ಯೆ ಎದುರಾಗಿದೆ. ಕ್ರಯದ ಖಾತೆಗಳನ್ನು ಮಾಡಿಕೊಡುವಂತೆ ಆಗ್ರಹಿಸಿ ಸಾಮಾನ್ಯಸಭೆಗಳಲ್ಲಿ ಆಡಳಿತ ಪಕ್ಷದ ಸದಸ್ಯರೇ ಧ್ವನಿ ಎತ್ತಿದ್ದಾರೆ.ಕಾಂಗ್ರೆಸ್ ಸದಸ್ಯರುನಗರಸಭೆ ಮುಂಭಾಗದಲ್ಲಿಯೇ ಧರಣಿ ಸಹ ನಡೆಸಿದ್ದಾರೆ.

2021ರ ಆಗಸ್ಟ್‌ನಲ್ಲಿಪ್ರಗತಿಪರ ಸಂಘಟನೆಗಳ ಒಕ್ಕೂಟವು ಕ್ರಯದ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿತ್ತು. ಆದರೆ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಮತ್ತು ಅಧ್ಯಕ್ಷರು ಭರವಸೆ ನೀಡಿದ್ದರು. ಆದರೆ ಆ ಭರವಸೆ ವರ್ಷವಾದರೂ ಈಡೇರಿಯೇ ಇಲ್ಲ.

ನಗರಸಭೆಯ ಖಾತೆ ವಿಭಾಗದಲ್ಲಿ ಕಾಯಂ ಸಿಬ್ಬಂದಿ ಇಲ್ಲ. ಗುತ್ತಿಗೆ ಆಧಾರಿತ ಸಿಬ್ಬಂದಿ ಇದ್ದಾರೆ. ಇವರು ಖಾತೆ ವಿಚಾರಗಳಲ್ಲಿ ತಪ್ಪುಗಳನ್ನು ಎಸಗಿದರೆ ಅವರ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣವೇ ಖಾತೆ ವಿಭಾಗಕ್ಕೆ ಕಾಯಂ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದರು.ಹೀಗೆ ಖಾತೆಗಳ ವಿಚಾರವು ಚಿಕ್ಕಬಳ್ಳಾಪುರ ನಾಗರಿಕರಲ್ಲಿ ನಗರಸಭೆಯ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿದೆ.

***

‘ನಗರಸಭೆ ಎದುರು ಹೋರಾಟ’

ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಕಳೆದ ವರ್ಷ ನಗರಸಭೆ ಮುಂದೆ ಧರಣಿ ನಡೆಸಲು ಮುಂದಾದಾಗ ಎರಡು ತಿಂಗಳು ಸಮಯ ಕೊಡಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಅಧಿಕಾರಿಗಳು ಮತ್ತು ನಗರಸಭೆ ಆಡಳಿತ ಮಂಡಳಿ ತಿಳಿಸಿತ್ತು. ಆದರೆ ಒಂದು ವರ್ಷವಾದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೋರಾಟಗಾರ್ತಿ ಸುಷ್ಮಾ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸುವರು.

ಸಮಸ್ಯೆ ಪರಿಹಾರದ ವಿಚಾರವಾಗಿ ಪೌರಾಡಳಿತ ನಿರ್ದೇಶಕರ ಜತೆ ಚರ್ಚಿಸಲು ನಿಮ್ಮನ್ನೂ ಕರೆದುಕೊಂಡು ಹೋಗುತ್ತೇವೆ ಎಂದಿದ್ದರು. ಖಾತೆ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೂ ಈಡೇರಿಲ್ಲ. ಹೋರಾಟಗಾರರ ನಡುವೆಯೇ ಒಡಕು ಉಂಟು ಮಾಡುವ ಕೆಲಸಗಳು ನಡೆದವು. ಈಗ ಮತ್ತೆ ಈ ಬಗ್ಗೆ ಚರ್ಚಿಸಿ ಹೋರಾಟವನ್ನು ರೂಪಿಸುತ್ತೇವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒತ್ತಡದಿಂದ ಕೆಲಸ ಮಾಡಲು ಆಗುವುದಿಲ್ಲ’

ನಗರಸಭೆ ಆಯುಕ್ತರ ವರ್ಗಾವಣೆ ಆಗಿದೆ. ಪಿಡಿ ಅವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಯಾವುದೇ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡಲು ಆಗುವುದಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ಮುಕ್ತವಾಗಿ ಬಿಟ್ಟರೆ ಕೆಲಸಗಳು ಆಗುತ್ತವೆ. ಬಹಳ ವರ್ಷಗಳಿಂದಲೂ ಕ್ರಯದ ಖಾತೆಗಳನ್ನು ನಗರಸಭೆಯಲ್ಲಿ ಮಾಡಿಕೊಡುತ್ತಿಲ್ಲ. ಜನರು ಸದಸ್ಯರನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ನಗರಸಭೆ ಸದಸ್ಯ ನರಸಿಂಹಮೂರ್ತಿ ತಿಳಿಸಿದರು.

ನಗರಸಭೆಯಲ್ಲಿ ಸಕಾಲದ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಸಕಾಲದ ಕೌಂಟರ್ ಸಹ ಇಲ್ಲ. ಸಕಾಲದ ಅಡಿಯಲ್ಲಿ ಅರ್ಜಿ ನೀಡಿದವರಿಗೆ ಸ್ವೀಕೃತಿ ಪತ್ರ ನೀಡಬೇಕು. ಆದರೆ ಇಲ್ಲಿ ಸಕಾಲದ ಅರ್ಜಿ ವಿಲೇವಾರಿ ಆದ ಮೇಲೆ ಅಪ್‌ಲೋಡ್ ಮಾಡುವರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT