ಭಾನುವಾರ, ಫೆಬ್ರವರಿ 28, 2021
20 °C
ಬಾಗೇಪಲ್ಲಿ ಜಲಮೂಲಗಳಲ್ಲಿ ಕಸ–ಕಡ್ಡಿ, ಅಕ್ರಮ ಚಟುವಟಿಕೆ; ಗ್ರಾಮಸ್ಥರ ದೂರಿಗೂ ಸ್ಪಂದನೆ ಇಲ್ಲ

ಬಾಗೇಪಲ್ಲಿ: ಕಲ್ಯಾಣಿಗಳ ರಕ್ಷಣೆ, ಸ್ವಚ್ಛತೆಗೆ ನಿರ್ಲಕ್ಷ್ಯ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ಆಚೇಪಲ್ಲಿ, ಗುಮ್ಮನಾಯಕಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಲ್ಯಾಣಿಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಹಾಗೂ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಅಂತರ್ಜಲ ಹೆಚ್ಚಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬಯಲುಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಲು ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಚೆಕ್ ಡ್ಯಾಂ, ಕಲ್ಯಾಣಿಗಳನ್ನು ಸ್ವಚ್ಛ ಮಾಡಲು ಆದೇಶ ನೀಡಿದ್ದರು. ಆಯಾಯ ತಾಲ್ಲೂಕು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರೊಂದಿಗೆ ತಾಲ್ಲೂಕಿನ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿದ್ದರು. ಆದರೆ ಇದೀಗ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡಿಸಿಲ್ಲ. ಕಲ್ಯಾಣಿಗಳಲ್ಲಿ ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿದೆ. ಕಸ-ಕಡ್ಡಿಗಳನ್ನು ಹಾಕಲಾಗಿದೆ. ಮದ್ಯದ ಬಾಟಲಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಸುರಿಸಲಾಗಿದೆ. ಕಲ್ಯಾಣಿಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ.

ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಶಾಶ್ವತವಾದ ಜಲಮೂಲಗಳು ಇಲ್ಲ. ಕೇವಲ ಮಳೆಯಾಧಾರಿತ ಪ್ರದೇಶ ಆಗಿದೆ. ರೈತರು ಮಳೆಯನ್ನೇ ನಂಬಿಕೊಂಡು ತರಕಾರಿ ಹಾಗೂ ಧಾನ್ಯಗಳನ್ನು ಬೆಳೆಯಬೇಕಾಗಿದೆ. ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಮಳೆ ಆಗದೇ ರೈತರು ತಮ್ಮ ಹೊಲ-ಗದ್ದೆಗಳನ್ನು ಬಂಜರುಗೊಳಿಸಿದ್ದಾರೆ. ಕೃಷಿ ಚಟುವಟಿಕೆಗಳನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿ, ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆ ಇಲ್ಲ. ಕೆಲ ಕಡೆ ತರಕಾರಿ ಹಾಗೂ ಬೆಳೆಗಳನ್ನು ಬೆಳೆಯಲು ನೀರಿಲ್ಲ. ಕೃಷಿಗೆ ಯೋಗ್ಯವಾದಷ್ಟು ನೀರಿನ ಕೊರತೆ ಇದೆ. ತಾಲ್ಲೂಕಿನಲ್ಲಿ ತಾಲ್ಲೂಕಿನ ಚಿತ್ರಾವತಿ, ವಂಡಮಾನ್ ಸೇರಿದಂತೆ ಉಳಿದಂತೆ ಕೆರೆ-ಕಟ್ಟೆ, ಚೆಕ್ ಡ್ಯಾಂ, ಗುಂಡಿಗಳಲ್ಲಿ ನೀರಿನ ಶೇಖರಣೆ ಇಲ್ಲ. ಅಂರ್ತಜಲ ಕುಸಿತವಾಗಿದೆ. ಕೆಲ ಕಡೆ ಜನ ಹಾಗೂ ಜಾನುವಾರುಗಳಿಗೂ ನೀರಿನ ಕೊರತೆ ಇದೆ. ತಾಲ್ಲೂಕಿನ ಗೂಳೂರು ಹೋಬಳಿಯ ಬಹುತೇಕವಾಗಿ ರೈತರು ಪಟ್ಟಣ ಪ್ರದೇಶಕ್ಕೆ ಸಿಮೆಂಟ್, ಗಾರೆ ಹಾಗೂ ಮರಕೆಲಸಗಳಿಗೆ ಬಂದು ಕೂಲಿಕಾಮರ್ಿಕರಾಗಿ ದುಡಿಯುತ್ತಿದ್ದಾರೆ. ದಿನದ ಕೂಲಿ ಹಣ ಪಡೆದು ಜೀವನ ಸಾಗಿಸುವಂತಾಗಿದೆ.

560 ವರ್ಷಗಳಷ್ಟು ಕಾಲ ಪಾಳೇಗಾರರು ಆಳ್ವಿಕೆ ಮಾಡಿದ್ದಾರೆ. ತಾಲ್ಲೂಕಿನ ಐತಿಹಾಸಿಕ ಗುಮ್ಮನಾಯಕಪಾಳ್ಯದ ಗ್ರಾಮದ ಮುಖ್ಯದ್ವಾರದಲ್ಲಿ ಪಾಳೇಗಾರರು ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಇದೇ ಮಾದರಿಯಲ್ಲಿ ಆಚೇಪಲ್ಲಿ ಕ್ರಾಸ್ ನಿಂದ ಪಾತಪಾಳ್ಯಕ್ಕೆ ಸಂಚರಿಸುವ ಮಾರ್ಗದಲ್ಲಿ ಕಲ್ಯಾಣಿ ಇದೆ. ಹೀಗೆ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಕಲ್ಯಾಣಿಗಳು ಇವೆ. ಇವುಗಳನ್ನು ಸ್ವಚ್ಛಗೊಳಿಸಿ, ಹೂಳು ತೆಗೆದು ಮಳೆಯ ನೀರನ್ನು ಶೇಖರಣೆ ಮಾಡಬೇಕಾಗಿದೆ. ಇದರಿಂದ ಜಲಪೂರಣ ಮಾಡಿದಂತಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಾಚೀನ ಕಟ್ಟೆಗಳ ರಕ್ಷಣೆಗೆ ಒತ್ತಾಯ
‘ತಾಲ್ಲೂಕಿನಲ್ಲಿ ಮಳೆ ಬರುವ ಮುನ್ನವೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಗೋಡು ಚಿತ್ರಾವತಿ, ವಂಡಮಾನ್ ಸೇರಿದಂತೆ ಕೆರೆ-ಕಟ್ಟೆ, ಚೆಕ್ ಡ್ಯಾಂಗಳು ಹಾಗೂ ಕಲ್ಯಾಣಿಗಳನ್ನು ಸ್ವಚ್ಛತೆ ಆಗಬೇಕು. ಕಲ್ಲುಕಟ್ಟಡವನ್ನು ಸಮರ್ಪಕವಾಗಿ ಮಾಡಬೇಕು. ಮಳೆಯ ನೀರನ್ನು ಶೇಖರಣೆ ಮಾಡಿದರೆ ಅಂತರ್ಜಲ ಹೆಚ್ಚಿಸುತ್ತದೆ. ಜನ-ಜಾನುವಾರುಗಳಿಗೆ ನೀರು ಸಿಗುತ್ತದೆ. ತಾಲ್ಲೂಕಿನ ಕಲ್ಯಾಣಿಗಳನ್ನು ಪಂಚಾಮಾಡಿಸಬೇಕು. ನೀರನ್ನು ಶೇಖರಣೆ ಮಾಡುವಂತೆ ಮಳೆ ಆಗುವ ಸಂದರ್ಭದಲ್ಲಿ ಚೆಕ್ ಡ್ಯಾಂ ಬರದೇ ನೀರು ಸಿಗದಂತೆ ಆ ಸರ್ಕಾರ ಹಾಗೂ ಜನರು ಕೆರೆ-ಕಟ್ಟೆ, ಚೆಕ್ ಡ್ಯಾಂಗಳನ್ನು ಹಾಗೂ ಹಳೇ ಕಾಲದ ಕಲ್ಯಾಣಿಗಳನ್ನು ಉಳಿಸಿ ಬೆಳಿಸಬೇಕಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮಣರೆಡ್ಡಿ ತಿಳಿಸಿದರು.

‘ತಾಲ್ಲೂಕಿನ ಗುಮ್ಮನಾಯಕನಪಾಳ್ಯದಲ್ಲಿ ಪಾಳೇಗಾರರು ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಇದೀಗ ಕಲ್ಯಾಣಿಯಲ್ಲಿ ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿದೆ. ಮಳೆಯ ನೀರನ್ನು ಶೇಖರಣೆ ಮಾಡುವ ಕೆರೆ-ಕಟ್ಟೆಗಳು, ಚೆಕ್ ಡ್ಯಾಂಗಳು ಹಾಗು ರಾಜಕಾಲುವೆಗಳು ಸೇರಿದಂತೆ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಬೇಕಾಗಿದೆ. ಕೂಡಲೇ ಕಲ್ಯಾಣಿಯನ್ನು ಅಧಿಕಾರಿಗಳು ಸ್ವಚ್ಛತೆ ಮಾಡಿಸಬೇಕು’ ಎಂದು ಗುಮ್ಮನಾಯಕನಪಾಳ್ಯದ ಶ್ರೀರಾಮ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.