ತಾಲ್ಲೂಕು ಕಚೇರಿ ಮುಂದೆ ಸ್ವಾತಂತ್ರ್ಯೋತ್ಸವ ಸತ್ಯಾಗ್ರಹ

7
ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಜತೆಗೆ ಸೇವಾ ಭದ್ರತೆ ಒದಗಿಸುವಂತೆ ಸಿಐಟಿಯು ಕಾರ್ಯರ್ತರ ಆಗ್ರಹ

ತಾಲ್ಲೂಕು ಕಚೇರಿ ಮುಂದೆ ಸ್ವಾತಂತ್ರ್ಯೋತ್ಸವ ಸತ್ಯಾಗ್ರಹ

Published:
Updated:
Deccan Herald

ಚಿಕ್ಕಬಳ್ಳಾಪುರ: ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ, ಸ್ವತಂತ್ರ ಹೋರಾಟದ ಪರಂಪರೆ ಮತ್ತು ಆಶಯಗಳ ಉಳಿವಿಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಕಾರ್ಯಕರ್ತರು ಮಂಗಳವಾರ ರಾತ್ರಿ ತಾಲ್ಲೂಕು ಕಚೇರಿ ಎದುರು ‘ಸ್ವಾತಂತ್ರ್ಯೋತ್ಸವ ಸತ್ಯಾಗ್ರಹ’ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ‘ಇವತ್ತು ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಬಡವರ ಭೂಮಿ ಕಿತ್ತುಕೊಂಡು ಕಾರ್ಪೊರೇಟ್‌ ಕಂಪೆನಿಗಳಿಗೆ ನೀಡುವ ಮೂಲಕ ಬಡವರನ್ನು ಬೀದಿಪಾಲು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳ ಸಿಇಒ ರೀತಿ ವರ್ತಿಸುತ್ತ, ರೈತರು, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ವಿವಿಧ ರಾಜ್ಯಗಳು ರೈತರ ಸಾಲ ಮನ್ನಾ ಮಾಡಿದರೆ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತದೆ ಎಂದು ನಿರಾಕರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆ ಪೂರ್ವದಲ್ಲಿ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ, ಅಧಿಕಾರ ಸಿಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಕೃಷಿ ಉತ್ಪನ್ನಗಳಿಗೆ ಒಟ್ಟು ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭಾಂಶ ನಿಗದಿಪಡಿಸುವ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ರೈತರು ಕೂಲಿಕಾರರ ಸಾಲ ಮನ್ನಾ ಮಾಡಬೇಕು ಮತ್ತು ಕೇರಳದ ಮಾದರಿಯಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು. ಎಲ್ಲಾ ಬಡವರಿಗೆ ಹಿತ್ತಲು ಸಹಿತ ಉಚಿತ ಮನೆ ಕಟ್ಟಿಕೊಡಬೇಕು. ವ್ಯವಸಾಯ ಮಾಡಲು ಇಚ್ಛಿಸುವ ಬಡವರಿಗೆ ತಲಾ 5 ಎಕರೆ ಭೂಮಿ ಒದಗಿಸಬೇಕು. ಉದ್ಯೋಗ ಖಾತರಿ ಕೆಲಸವನ್ನು 100 ದಿನಗಳ ಕಾಲ ಕಡ್ಡಾಯವಾಗಿ ಒದಗಿಸಬೇಕು. ಕೂಲಿ ಹೆಚ್ಚಿಸಬೇಕು’ ಎಂದು ತಿಳಿಸಿದರು.

‘ರೈತರು, ಕೂಲಿಕಾರರಿಗೆ ಮಾಸಿಕ ತಲಾ ₹ 5 ಸಾವಿರ ಪಿಂಚಣಿ ನೀಡಬೇಕು. ಎಲ್ಲಾ ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ₹ 18 ಸಾವಿರ ಮಾಸಿಕ ವೇತನ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ, ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಪದಾಧಿಕಾರಿಗಳಾದ ಮಂಜುಳಾ, ನಾರಾಯಣಮ್ಮ, ಉಮಾ, ಶೀಲಾ, ಜಯಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !