ಶನಿವಾರ, ಸೆಪ್ಟೆಂಬರ್ 25, 2021
29 °C

ಬ್ಯಾಂಕ್ ಸಿಬ್ಬಂದಿ ವಿರುದ್ಧ ಕರವೇ ಸಿಂಹಸೇನೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಕರ್ನಾಟಕ ಬ್ಯಾಂಕ್ ಶಾಖೆಯ ಕ್ಯಾಷಿಯರ್ ಮತ್ತು ಭದ್ರತಾ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸಿಂಹಸೇನೆ ಕಾರ್ಯಕರ್ತರು ಮಂಗಳವಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬ್ಯಾಂಕಿನ ಕ್ಯಾಷಿಯರ್ ಉದ್ದೇಶಪೂರ್ವಕವಾಗಿ ನಿಧಾನಗತಿಯಲ್ಲಿ ವ್ಯವಹಾರ ನಡೆಸುತ್ತಾರೆ. ಗ್ರಾಹಕರೊಡನೆ ಅನುಚಿತವಾಗಿ ವರ್ತಿಸುವುದು, ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರುತ್ತಾರೆ. ಶಾಖೆಗೆ ಬರುವ ಗ್ರಾಹಕರು ದಿನವೆಲ್ಲ ಬ್ಯಾಂಕಿನಲ್ಲೇ ಕಳೆಯುವಂತಾಗಿದೆ. ಗ್ರಾಹಕರು ಹಾಗೂ ಕ್ಯಾಷಿಯರ್ ನಡುವೆ ಹಲವು ಬಾರಿ ವಾಗ್ವಾದ ನಡೆದಿದ್ದರೂ ಅವರು ತಮ್ಮ ಕೆಲಸದ ವೈಖರಿಯನ್ನು ಬದಲಾವಣೆ ಮಾಡಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಗ್ರಾಹಕರಿಂದ ಬರುವ ಹರಿದ ಮತ್ತು ಹಳೆಯ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ. ಗ್ರಾಹಕರು ಮತ್ತೆ ತಮ್ಮ ಮನೆ ಅಥವಾ ಕಚೇರಿಗೆ ತೆರಳಿ ಹಣವನ್ನು ತಂದು ಮತ್ತೆ ಸರತಿ ಸಾಲಿನಲ್ಲಿ ನಿಂತು ಹಣ ಪಾವತಿಸಬೇಕಾದರೆ ಒಂದು ದಿನ ಕಳೆಯುತ್ತದೆ ಎಂದು ಆರೋಪಿಸಿದರು.

ನಗರದಲ್ಲಿ ಕರ್ನಾಟಕ ಬ್ಯಾಂಕ್ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಕ್ಯಾಷಿಯರ್‌ನ ಬೇಜವಾಬ್ದಾರಿಯ ವರ್ತನೆ ಹಾಗೂ ನಿಧಾನಗತಿಯಿಂದ ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ಅವರ ಸ್ಥಳದಲ್ಲಿ ಬೇರೊಬ್ಬರನ್ನು ನೇಮಿಸಬೇಕು. ಬ್ಯಾಂಕಿನ ಸಿಬ್ಬಂದಿ ಹೆಚ್ಚಾಗಿ ತೆಲುಗು ಭಾಷೆ ಬಳಸುತ್ತಾರೆ. ಕನ್ನಡವೇ ಆಡಳಿತ ಭಾಷೆಯಾಗಿರುವುದರಿಂದ ಕನ್ನಡವನ್ನೇ ಬಳಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬ್ಯಾಂಕಿನ ಭದ್ರತಾ ಸಿಬ್ಬಂದಿ ಸಹ ಗ್ರಾಹಕರಿಗೆ ಅನಗತ್ಯ ಕಿರುಕುಳ ನೀಡುತ್ತಾರೆ. ಗ್ರಾಹಕರನ್ನು ಹೊರಗಡೆಯೇ ತಡೆದು ತೊಂದರೆ ನೀಡುತ್ತಾರೆ. ಶಾಖೆಯ ಗ್ರಾಹಕರಿಂದಲೇ ಬ್ಯಾಂಕಿನ ವ್ಯವಹಾರ ನಡೆಯುವುದು, ಸಿಬ್ಬಂದಿಯು ವೇತನ ಪಡೆಯುವುದು ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು.
ಗ್ರಾಹಕರ ಸಮಸ್ಯೆ ಅರಿತು ಬದಲಾವಣೆ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಬೇಡಿಕೆಗಳ ಮನವಿ ಪತ್ರವನ್ನು ಬ್ಯಾಂಕಿನ ವ್ಯವಸ್ಥಾಪಕರಿಗೆ
ಸಲ್ಲಿಸಿದರು.

ಸಿಂಹಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೃಷ್ಣೋಜಿರಾವ್, ಸಂಚಾಲಕ ಪ್ರದೀಪ್, ತಾಲ್ಲೂಕು
ಘಟಕದ ಅಧ್ಯಕ್ಷ ಆಸಿಫ್, ಉಪಾಧ್ಯಕ್ಷ ನಾಗಾರ್ಜುನ್, ಮುಖಂಡರಾದ ಬೀರೇಗೌಡ, ಕಾರ್ತಿಕ್, ಅರ್ಚನಾ, ಕೈವಾರ ಸಾಧಿಕ್, ಪೈಜಲ್ ಖಾದರ್, ಸುಧಾ, ಸುರೇಂದ್ರ, ರಾಜು, ಸುರೇಶ್, ನಾರಾಯಣಸ್ವಾಮಿ,
ಮುರಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು