ಸೋಮವಾರ, ಸೆಪ್ಟೆಂಬರ್ 20, 2021
24 °C
ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ರೈತ ಸಂಘದ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಚಿಕ್ಕಬಳ್ಳಾಪುರ: ವ್ಯವಸಾಯದಿಂದ ಒಕ್ಕಲೆಬ್ಬಿಸಲು ಕುತಂತ್ರ- ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ‍್ರತಿಭಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನಿಲುವು ತಾಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯ ನೀರಾವರಿಗೆ ನದಿ, ನಾಲೆಯ ಮೂಲಗಳು ಇಲ್ಲ. ಬಯಲುಸೀಮೆಯ ಜಿಲ್ಲೆಗಳಲ್ಲಿ 1,500 ಅಡಿಗಳ ಆಳದವರೆಗೆ ಕೊಳವೆ ಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ದೊರೆಯುವ ಅಲ್ಪಸ್ವಲ್ಪ ನೀರಿನಲ್ಲಿಯೇ ವ್ಯವಸಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಕಡಿಮೆ ನೀರಿನಲ್ಲಿ ಹಣ್ಣು, ರೇಷ್ಮೆ, ತರಕಾರಿ ಬೆಳೆಯಲಾಗುತ್ತಿದೆ. ರೈತರ ಉತ್ಪನ್ನಗಳಿಗೆ ಕೊರೊನಾ ಸಂದರ್ಭದಲ್ಲಿ ಸರಿಯಾದ ಬೆಲೆಯೂ ದೊರೆಯಲಿಲ್ಲ. ಇದರಿಂದ ನಷ್ಟ ಅನುಭವಿಸಿದರು. ಆತ್ಮಹತ್ಯೆಯ ದಾರಿ ಹಿಡಿದರು. ಆದರೆ ಈಗ ಗಾಯದ ಮೇಲೆ ಬರೆ ಎನ್ನುವಂತೆ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸಲು ಸರ್ಕಾರ ಮುಂದಾಗಿದೆ. ಇದರಿಂದ ಮುಂಗಡವಾಗಿ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರ ರೈತರನ್ನು ವ್ಯವಸಾಯ
ದಿಂದ ಒಕ್ಕಲೆಬ್ಬಿಸುವ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುತ್ತಿವೆ. ಈ ಮೂಲಕ ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಹರಣ ಮಾಡುತ್ತಿವೆ ಎಂದು ಕಿಡಿಕಾರಿದರು. 

ಗಾಂಧೀಜಿ ಅವರ ನೇತೃತ್ವದಲ್ಲಿ ದೇಶದ ಜನರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ನಡೆಸಿದ್ದರು. ಈಗ ಕೇಂದ್ರ ಸರ್ಕಾರವೇ ವಿದೇಶಿ ಕಂಪನಿಗಳನ್ನು ವ್ಯಾಪಾರಕ್ಕೆ ಆಹ್ವಾನಿಸುತ್ತಿದೆ. ಅವರ ಕೈಗೆ ನಮ್ಮ ಉದ್ದಿಮೆಗಳನ್ನು ನೀಡುತ್ತಿದೆ. ರೈತರು, ಕಾರ್ಮಿಕರ ಸ್ವತಂತ್ರ್ಯಕ್ಕೆ ಕುತ್ತು ತರುವ ಮತ್ತು ಅವರ ಹಿತಕ್ಕೆ ಮಾರಕವಾಗುವ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ ಎಂದು ದೂರಿದರು.

ನವದೆಹಲಿಯಲ್ಲಿ 8 ತಿಂಗಳು ರೈತರು ಅಹೋರಾತ್ರಿ ಚಳವಳಿ ನಡೆಸಿದರೂ ಕೇಂದ್ರ ಸರ್ಕಾರ ಕಿವುಡಾಗಿದೆ. ಸುಪ್ರೀಂಕೋರ್ಟ್ 18 ತಿಂಗಳವರೆಗೆ ಯಾವುದೇ ಕಾಯ್ದೆಗಳನ್ನು ಜಾರಿಗೊಳಿಸಬಾರದು ಎಂದು ಹೇಳಿದೆ. ಹೀಗಿದ್ದರೂ ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ವಿದ್ಯುತ್ ಮಸೂದೆಯನ್ನು ಮಂಡಿಸುತ್ತಿದೆ. ಇದು ಅಕ್ಷಮ್ಯ ಎಂದು ಹೇಳಿದರು.

ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಹಿತವಾಗುವ ರೀತಿಯಲ್ಲಿ ನೀತಿಗಳನ್ನು ರೂಪಿಸುತ್ತಿವೆ. ಸಾಮಾನ್ಯರು, ರೈತರ, ಕೂಲಿಕಾರರ ಬದುಕನ್ನು ಹಿಸುಕುತ್ತಿವೆ ಎಂದು ಹೇಳಿದರು.

ಮಹಿಳಾ ಘಟಕದ ರಾಜ್ಯ ಸಂಚಾಲಕಿ ಉಮಾ ಮಾತನಾಡಿ, ‘ಸರ್ಕಾರಗಳು ಮೊದಲು ಕಾರ್ಪೊರೇಟ್ ಹಿತಕಾಯುವುದನ್ನು ಬಿಟ್ಟು ರೈತರು, ಕಾರ್ಮಿಕರ ಪರವಾದ ನಿಲುವುಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್‌.ಪಿ.ರಾಮನಾಥ್, ಪ್ರಧಾನ ಕಾರ್ಯದರ್ಶಿ ವಿ.ವೇಣುಗೋಪಾಲ್, ಲಕ್ಷ್ಮಣರೆಡ್ಡಿ, ಸಿ.ವಿ.ಶ್ರೀನಿವಾಸ್, ವೆಂಕಟರಾಮಯ್ಯ, ಬಿ.ನಾರಾಯಣಸ್ವಾಮಿ, ರಮಣಾರೆಡ್ಡಿ, ಈಶ್ವರರೆಡ್ಡಿ, ರಾಮಾಂಜನಪ್ಪ, ತಾದೂರು ಮಂಜುನಾಥ್, ಮಾಳಪ್ಪ, ಮುರುಳಿ, ಬೈಯ್ಯಾರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು