ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹಶಾಸಕ ಡಾ.ಸುಧಾಕರ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಹಾರೊಬಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂತಪ್ಪನಹಳ್ಳಿ ವೆಂಕಟೇಶ್‌ ಅವರ ಸಹೋದರನಿಗೆ ಬೆದರಿಕೆ ಹಾಕಿದ ಆರೋಪ, ಠಾಣೆ ಎದುರು ಕಾಂಗ್ರೆಸ್ ಪ್ರತಿಭಟನೆ
Last Updated 30 ಅಕ್ಟೋಬರ್ 2019, 13:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಕಾರ್ಯಕರ್ತ, ಹಾರೊಬಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂತಪ್ಪನಹಳ್ಳಿ ವೆಂಕಟೇಶ್‌ ಹಾಗೂಅವರ ಸಹೋದರನಿಗೆ ಪ್ರಾಣ ಬೆದರಿಕೆ ಹಾಕಿದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಮುಖಂಡರಾದ ನಂದಿ ಎಂ.ಆಂಜಿನಪ್ಪ, ಕೆ.ವಿ.ನವೀನ್ ಕಿರಣ್, ಲಾಯರ್ ನಾರಾಯಣಸ್ವಾಮಿ, ಮುನೇಗೌಡ, ಕಣಿತಹಳ್ಳಿ ವೆಂಕಟೇಶ್ ಅವರ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣವೇ ಸುಧಾಕರ್ ಅವರ ವಿರುದ್ಧ ಜೀವ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧದ ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಧರಣಿ ನಡೆಸಿದರು.

ಈ ವೇಳೆ ಡಿವೈಎಸ್ಪಿ ಪ್ರಭುಶಂಕರ್, ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ, ‘ಇದು ಸೈಬರ್‌ ಅಪರಾಧ ಪ್ರಕರಣವಾದ್ದರಿಂದ ತಕ್ಷಣ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ತನಿಖೆ ನಡೆಸಿದ ಬಳಿಕವಷ್ಟೇ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ತಿಳಿಸಿದರು.

ಇದರಿಂದ ಕೆರಳಿದ ಪ್ರತಿಭಟನಾಕಾರರು ಪ್ರಕರಣ ದಾಖಲಿಸಲೇ ಬೇಕು ಎಂದು ಪಟ್ಟು ಹಿಡಿದ ಪರಿಣಾಮ ಕೆಲ ಹೊತ್ತು ಠಾಣೆಯಲ್ಲಿ ಉದ್ವಿಗ್ನ ವಾತಾವರಣ ಮನೆ ಮಾಡಿತ್ತು. ಕೆಲ ದಲಿತ ಮುಖಂಡರು, ‘ಸುಧಾಕರ್ ವಿರುದ್ಧ ಅಟ್ರಾಸಿಟಿ ದಾಖಲಿಸಲು ಏಕೆ ಬರುವುದಿಲ್ಲ? ಅದೇ ಒಬ್ಬ ದಲಿತ ಈ ರೀತಿ ಮಾಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಿರಿ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಡಿವೈಎಸ್ಪಿ ಪ್ರಭುಶಂಕರ್ ಅವರು ಎಸ್ಪಿ ಅವರು ಬೆಂಗಳೂರಿಗೆ ತೆರಳಿದ್ದಾರೆ. ಅವರು ವಾಪಾಸ್ ಬಂದ ಬಳಿಕ ಅವರೊಂದಿಗೆ ಚರ್ಚಿಸಿ, ಮೇಲಾಧಿಕಾರಿಗಳ ಜತೆಗೆ ಮಾತನಾಡಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ಅದಕ್ಕೆ ಎರಡು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಾರೊಬಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂತಪ್ಪನಹಳ್ಳಿ ವೆಂಕಟೇಶ್‌, ‘ಸುಧಾಕರ್ ಅವರು ನನ್ನನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ನನ್ನ ತಮ್ಮನಿಗೆ ಕರೆ ಮಾಡಿ ಕಾಲು ಮುರಿಯುತ್ತೇನೆ. ಹುಷಾರಾಗಿ ಇರಲು ಹೇಳು. ನನ್ನ ಎರಡನೇ ಮುಖ ನೋಡಿಲ್ಲ. ಮುಂದೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದರು.

‘ಸುಧಾಕರ್ ಅವರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದರೂ ಪೊಲೀಸರು ಎಫ್ಐಆರ್ ಹಾಕುತ್ತಿಲ್ಲ. ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಸುಧಾಕರ್ ಅವರು ಎಷ್ಟು ಸುಳ್ಳುಗಾರ ಎಂದು ಎಲ್ಲರಿಗೂ ಗೊತ್ತಿದೆ. ಅಷ್ಟೊಂದು ಮಾತನಾಡಿ ನಾನು ಬೈದಿಲ್ಲ ಎಂದರೆ, ಅದು ನನ್ನ ಧ್ವನಿ ಅಲ್ಲ ಎಂದರೆ ನಂಬುತ್ತೀರಾ’ ಎಂದು ಪ್ರಶ್ನಿಸಿದರು.

ಮುಖಂಡ ಲಾಯರ್ ನಾರಾಯಣಸ್ವಾಮಿ ಮಾತನಾಡಿ, ‘ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಕೈಕಾಲು ಕತ್ತರಿಸುತ್ತೇನೆ ಎಂದು ಸುಧಾಕರ್ ಅವರು ಬೆದರಿಕೆ ಹಾಕಿದ್ದರೂ ಪೊಲೀಸರು ಸುಧಾಕರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅನರ್ಹ ಶಾಸಕ ಸುಧಾಕರ್ ಅವರು ಹೇಳಿದ್ದನ್ನೇ ಗಣನೆಗೆ ತೆಗೆದುಕೊಳ್ಳುತ್ತಾರೆ. ಪಕ್ಷಪಾತ ಮಾಡುತ್ತಾರೆ. ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ವ್ಯವಸ್ಥೆ ಕೆಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಕೆ.ವಿ.ನವೀನ್ ಕಿರಣ್ ಮಾತನಾಡಿ, ‘ಸಣ್ಣ ಸಣ್ಣ ವಿಚಾರಗಳಿಗೆ ಪೊಲೀಸರು ಪ್ರಕರಣ ದಾಖಲಿಸಿ ಜನರನ್ನು ಬಂಧಿಸುತ್ತಾರೆ. ಆದರೆ ಸುಧಾಕರ್ ಅವರು ನೇರವಾಗಿ ಕೈಕಾಲು ಮುರಿಸುತ್ತೇನೆ ಎಂದು ಬೆದರಿಕೆ ಹಾಕಿದರೂ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ’ ಎಂದು ಆರೋಪಿಸಿದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಮುಖಂಡರಾದ ಅಡ್ಡಗಲ್ ಶ್ರೀಧರ್, ಎಸ್‌.ಪಿ.ಶ್ರೀನಿವಾಸ್, ಸುನಿಲ್, ಕಣಿತಹಳ್ಳಿ ವೆಂಕಟೇಶ್, ವೆಂಕಟರಮಣಪ್ಪ, ಅಚ್ಯುತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT