ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಖಾಸಗಿ ಶಾಲೆಗಳ ಶಿಕ್ಷಕರು, ವಾಹನ ಚಾಲಕರು ಹಾಗೂ ಸಿಬ್ಬಂದಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ
Last Updated 4 ಡಿಸೆಂಬರ್ 2020, 8:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗೌರವಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ‘ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ, ಶಿಕ್ಷಕಿ ಹಾಗೂ ಸಿಬ್ಬಂದಿ ವರ್ಗದವರಿಗೆ ಕಳೆದ 9 ತಿಂಗಳಿಂದ ಸರ್ಕಾರ ಗೌರವಧನ ಬಿಡುಗಡೆ ಮಾಡಿಲ್ಲ. ಇದರಿಂದ ಬದುಕು ದುರ್ಬರವಾಗಿದೆ’ ಎಂದು ಹೇಳಿದರು.

‘ಕೋವಿಡ್‌ನಿಂದಾಗಿ ಶಾಲೆಗಳು ಕಾರ್ಯನಿರ್ವಹಿಸದ ಕಾರಣಕ್ಕೆ ಪೋಷಕರು ಶುಲ್ಕ ಪಾವತಿಸುತ್ತಿಲ್ಲ. ಅದರಿಂದಾಗಿ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು, ವಾಹನ ಚಾಲಕರು, ಸಿಬ್ಬಂದಿಗೆ ವೇತನ ನೀಡಲು ಆಡಳಿತ ಮಂಡಳಿಗಳಿಗೆ ಆರ್ಥಿಕ ಶಕ್ತಿ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸಹ ಶಿಕ್ಷಕರ ಪರಿಸ್ಥಿತಿ ಕುರಿತು ಚಿಂತನೆ ನಡೆಸಬೇಕಿದೆ’ ಎಂದು ತಿಳಿಸಿದರು.

‘ಶಾಲಾ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳುವ ಪೋಷಕರ ಪರವಾಗಿಯೇ ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಾರೆ. ಹಾಗೆಯೇ ಖಾಸಗಿ ಶಾಲೆ ನಡೆಸಲು ಪರವಾನಿಗೆ ನವೀಕರಣ ಸಂಬಂಧ ಹಲವು ನಿಯಮಗಳನ್ನು ವಿಧಿಸಿದ್ದಾರೆ. ಹಲವು ಇಲಾಖೆಗಳ ನಿರಾಪೇಕ್ಷಣಾ ಪತ್ರಗಳನ್ನು ಪಡೆಯಲು ಪರದಾಡುವ ಸ್ಥಿತಿ ನಿರ್ಮಿಸಲಾಗಿದೆ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಶಾಲೆಗಳನ್ನು ಪುನರಾರಂಭಿಸುವ ವಿಚಾರದಲ್ಲಿ ಶಿಕ್ಷಣ ಸಚಿವರಿಂದ ದ್ವಂದ್ವ ಹೇಳಿಕೆಗಳು ಕೇಳಿಬರುತ್ತಿದೆ. ಸರ್ಕಾರ ಶಾಲೆಗಳ ವಿಚಾರದಲ್ಲಿ ಮಲತಾಯಿ ಧೋರಣೆ ಬಿಡಬೇಕು. ಖಾಸಗಿ ಶಿಕ್ಷಕರ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಶಿಕ್ಷಕ ಸಮುದಾಯದ ಹಿತ ಕಾಯಬೇಕು. ಸರ್ಕಾರಿ ಶಾಲೆಗೊಂದು ನಿಯಮ, ಖಾಸಗಿ ಶಾಲೆಗೊಂದು ನಿಯಮ ವಿಧಿಸಿರುವುದನ್ನು ಕೂಡಲೇ ಕೈಬಿಡಬೇಕು’ ಎಂದು
ಆಗ್ರಹಿಸಿದರು.

‘ಕೋವಿಡ್ ನೆಪವೊಡ್ಡಿ ಶಾಲೆಗಳ ಮಾನ್ಯತೆ ನವೀಕರಿಸಲು ನಿರಾಕರಿಸಲಾಗುತ್ತಿದೆ. ಇದರಿಂದ ಸಾವಿರಾರು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನ ಕೆಲವು ಆದೇಶಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಸರ್ಕಾರದ ಇಂತಹ ನಿರ್ಧಾರಗಳಿಂದ ಸುಮಾರು 10 ಸಾವಿರ ಶಾಲೆಗಳು, ಲಕ್ಷಾಂತರ ಶಿಕ್ಷಕರು ಬೀದಿ ಪಾಲಾಗಬೇಕಾಗಿದೆ’ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮೂಹದ ಜಿಲ್ಲಾ ಕಾರ್ಯದರ್ಶಿ ಹೆನ್ರಿ ಪ್ರಸನ್ನ ಕುಮಾರ್, ಖಜಾಂಚಿ ವೈವಿ ಆನಂದ್, ಮೋಹನ್ ಕುಮಾರ್, ಗೌರಿಬಿದನೂರು ಅಧ್ಯಕ್ಷ ವರಹಮೂರ್ತಿ, ಕಾರ್ಯದರ್ಶಿ ಚಂದ್ರಮೌಳಿ, ಬಾಗೇಪಲ್ಲಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಪೃಥ್ವಿರಾಜ್ ಶಿಡ್ಲಗಟ್ಟ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ತಮೀಮ್ ಅನ್ಸಾರಿ ಚಿಂತಾಮಣಿ ಅಧ್ಯಕ್ಷ ವೇಮನಾರಾಯಣ ಕಾರ್ಯದರ್ಶಿ ಮಾಲತಿ ಮತ್ತಿತರರು ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT