ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವಿರೋಧಿ ಧೋರಣೆ ಆರೋಪ: ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಧರಣಿ

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಕ್ರೋಶ
Last Updated 15 ಆಗಸ್ಟ್ 2018, 10:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ದಲಿತರ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ನಗರದಲ್ಲಿ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಸಂಚಾಲಕ ಬಿ.ಎನ್.ಗಂಗಾಧರಪ್ಪ, ‘ಈ ದೇಶದಲ್ಲಿ ದಲಿತರನ್ನು ಹೊರತುಪಡಿಸಿ ಎಲ್ಲರಿಗೂ ಸ್ವತಂತ್ರ್ಯ ಬಂದಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ಕುರಿತು ಪ್ರತಿಪಾದಿಸಿದ್ದಾರೆ. ಆದರೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಈವರೆಗೆ ನಮಗೆ ಯಾವುದೇ ಹಕ್ಕು ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ದಲಿತರು ವಾಸಿಸಲು ಸರಿಯಾದ ಮನೆಗಳಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ಅನೇಕ ಬಾರಿ ಸಮಸ್ಯೆಗಳ ಪಟ್ಟಿ ಸಲ್ಲಿಸಿ, ಬಗೆಹರಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಸಭೆ ನಡೆಸುತ್ತಾರೆ ವಿನಾ ಈವರೆಗೆ ಯಾವುದೇ ಸಮಸ್ಯೆ ಬಗೆಹರಿಸಿಲ್ಲ’ ಎಂದು ಆರೋಪಿಸಿದರು.

‘ಇತ್ತೀಚೆಗೆ ಜಿಲ್ಲೆಯಲ್ಲಿ ನ್ಯಾಯ ಕೇಳಲು ಹೋಗುವ ದಲಿತರ ಮೇಲೆ ಪೊಲೀಸ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ರೌಡಿ ಶೀಟರ್ ಪಟ್ಟಿಗೆ ಹೆಸರು ಸೇರಿಸಿ ನಮ್ಮ ಹೋರಾಟ ದಮನ ಮಾಡಲು ಮುಂದಾಗುತ್ತಿದ್ದಾರೆ. ದಲಿತ ಹೋರಾಟಗಾರರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಕೇಂದ್ರ ವಿಸ್ತರಣೆಗಾಗಿ ಕೂಡಲೇ ಭೂಪರಿವರ್ತನೆಗೆ ಅವಕಾಶ ನೀಡಬೇಕು. ಪರಿಶಿಷ್ಟ ಸಮುದಾಯದವರಿಂದ ಕಂದಾಯ ಬಾಕಿ ಕಟ್ಟಿಸಿಕೊಂಡು ಸರ್ಕಾರಿ ಪಡ ಜಮೀನು ಮರು ಮಂಜೂರು ಮಾಡಿಸಿಕೊಳ್ಳಲು ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು. ಪರಿಶಿಷ್ಟ ಸಮುದಾಯದ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಹಾಕಿಕೊಳ್ಳಲು ಅವಕಾಶ ಮಾಡಿಕೊಡಬೇಕು. ದಲಿತರಿಗೆ ನಿವೇಶನ, ಮನೆ ನೀಡುವ ಜತೆಗೆ ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ದಲಿತರಿಗೆ ಆದ್ಯತೆ ಮೆರೆಗೆ ಕೆಲಸ ಒದಗಿಸಿ ಕೊಡಬೇಕು. ಒತ್ತುವರಿಗೆ ಒಳಗಾಗಿರುವ ಜಲಮೂಲಗಳನ್ನು ತೆರವುಗೊಳಿಸಬೇಕು’ ಎಂದು ಹೇಳಿದರು.

‘ಸರ್ಕಾರದ ಆದೇಶದಂತೆ ನಿಗದಿತ ಸಮಯಕ್ಕೆ ದಲಿತರ ಕುಂದುಕೊರತೆ ಸಭೆಗಳನ್ನು ಏರ್ಪಡಿಸಬೇಕು. ವಿವಿಧ ಇಲಾಖೆಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ದುರ್ಬಳಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕಡುಬಡವರಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಸಂಚಾಲಕ ಡಿ.ಎಂ.ನರಸಿಂಹಯ್ಯ, ಸಂಘಟನಾ ಸಂಚಾಲಕ ಜಿ.ಸಿ.ವೆಂಕಟೇಶ್, ಮುಖಂಡರಾದ ಸಿ.ಕೆ.ಮಲ್ಲಪ್ಪ, ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ನವಚೇತನ್, ಕಣಿತಹಳ್ಳಿ ಗಂಗಾಧರ್, ಶ್ರೀರಾಂಪುರ ಜಯರಾಮಪ್ಪ, ಕೊಳವನಹಳ್ಳಿ ನಾಗೇಶ್, ನಾಗರಾಜು, ಸಿ.ಡಿ.ಮಂಜುನಾಥ್, ಸಬ್ಬೇನಹಳ್ಳಿ ರಾಜಣ್ಣ, ಆರ್.ಡಿ.ನಾಗರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT