ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಸಿಎಲ್ ಸಮಗ್ರ ತಿದ್ದುಪಡಿಗೆ ಆಗ್ರಹ

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಪ್ರತಿಭಟನೆಗೆ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರ ಸಾಥ್
Last Updated 9 ಸೆಪ್ಟೆಂಬರ್ 2019, 12:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ರಾಜ್ಯ ಸರ್ಕಾರ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಪ್ರತಿಭಟನೆಗೆ ಸೋಮವಾರ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರಯಾಣ ಬೆಳೆಸಿದರು.


ಪ್ರಯಾಣಕ್ಕೂ ಮುನ್ನ ನಗರದಲ್ಲಿ ಎಂ.ಜಿ ರಸ್ತೆಯಲ್ಲಿರುವ ಜೈ ಭೀಮ್ ಹಾಸ್ಟೆಲ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಸಿ.ವೆಂಕಟರವಣಪ್ಪ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ದಲಿತರಿಗೆ ಇನ್ನೂ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.


‘ಶೋಷಿತ ಸಮುದಾಯಗಳಿಗೆ ಇಂದಿಗೂ ಭೂಮಿ ಗಗನಕುಸುಮವಾಗಿದೆ. ದಲಿತರ ಬಳಿ ಇರುವ ಅಲ್ಪ ಸ್ವಲ್ಪ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ಪಿಟಿಸಿಎಲ್ ಕಾಯ್ದೆಯ ಚಾರಿತ್ರಿಕ ಮಹತ್ವ ಮತ್ತು ಅವಶ್ಯಕತೆಗಳನ್ನು ಅರಿತು ವ್ಯಾಖ್ಯಾನಿಸುವಲ್ಲಿ ಈ ದೇಶದ ಉನ್ನತ ನ್ಯಾಯಾಲಯಗಳು ಸಹ ವಿಫಲವಾಗುತ್ತಿರುವುದರಿಂದ ದಲಿತರ ಭೂಮಿ ರಕ್ಷಣೆಗೆ ಚ್ಯುತಿ ಬಂದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.


‘ಇವತ್ತು ತುರ್ತಾಗಿ ಪಿಟಿಸಿಎಲ್ ಕಾಯ್ದೆಯ 1978 ಮತ್ತು 1979 ರ ನಿಯಾಮಾವಳಿಗಳಿಗೆ ಸಮಗ್ರ ತಿದ್ದುಪಡಿ ತರಬೇಕಾಗಿದೆ. ಈ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಬೇಕು. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕರು ಪಿಟಿಸಿಎಲ್ ಕಾಯ್ದೆ ಮತ್ತು ನಿಯಮಗಳಿಗೆ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಆಗ್ರಹಿಸಿದರು.


‘ನಿವೃತ್ತ ಐಎಎಸ್ ಅಧಿಕಾರಿ ಇ.ವೆಂಕಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕಾಯ್ದೆಗೆ ತಿದ್ದುಪಡಿ ಕರಡನ್ನು ರಚಿಸಬೇಕು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ತಿದ್ದುಪಡಿ ಕಾಯ್ದೆ ಅನುಮೋದನೆಗೊಳ್ಳಬೇಕು’ ಎಂದು ಒತ್ತಾಯಿಸಿದರು.


ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ನರಸಿಂಹಪ್ಪ ಮಾತನಾಡಿ, ‘ಬಲಾಢ್ಯರ ಶೋಷಣೆ, ದಬ್ಬಾಳಿಕೆಗಳಿಗೆ ಒಳಗಾಗಿರುವ ದಲಿತರು ಶಿಕ್ಷಣ, ಆರೋಗ್ಯ, ವಸತಿ ಮತ್ತಿತರರ ಪ್ರಮುಖ ಸಂಪನ್ಮೂಲಗಳಿಂದ ವಂಚಿತರಾಗಿದ್ದಾರೆ. ದಲಿತರ ಭೂಮಿ ರಕ್ಷಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.


ಸಮತಾ ಸೈನಿಕ ದಳ ಪ್ರಧಾನ ಕಾರ್ಯದರ್ಶಿ ಅಶ್ವಥಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಪಿಳ್ಳ ಆಂಜಿನಪ್ಪ, ವಿದ್ಯಾರ್ಥಿ ಒಕ್ಕೂಟ ಹರಿಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮ್ಮ, ಮುಖಂಡರಾದ ಬಿ.ಆರ್.ಮುನಿರಾಜು, ಎಂ.ಮಹೇಶ್, ನರಸಿಂಹಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT