ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರ ಪುನರ್ವಸತಿಗೆ ಆಗ್ರಹ

ರೈತಸಂಘದ ಪದಾಧಿಕಾರಿಗಳಿಂದ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ
Last Updated 26 ಆಗಸ್ಟ್ 2019, 9:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನೆರೆ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ನೀಡುವ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಬೇಜವಾಬ್ದಾರಿಯಿಂದ ಜಲಾಶಯಗಳ ನೀರು ಹರಿಸಿ ಅನಾಹುತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರೈತಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದರು.


ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಜಲಾಶಯಗಳ ನಿರ್ವಹಣೆ ಹೊಣೆ ಹೊತ್ತವರ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕದ 4,500 ಹಳ್ಳಿಗಳು ನೆಲ ಕಚ್ಚಿವೆ. 15 ಲಕ್ಷ ಹೆಕ್ಟರ್ ಭೂಮಿ ಕಳೆದುಕೊಂಡಿದ್ದಾರೆ. ರೈತರು ಕಾರ್ಮಿಕರಾಗುವ ಸ್ಥಿತಿ ತಲುಪಿದ್ದಾರೆ. ದನಕರುಗಳಿಗೆ ಮೇವಿಲ್ಲ. ಮಹಿಳೆಯರು, ಮಕ್ಕಳ ಸ್ಥಿತಿ ಗಂಭೀರವಾಗಿದೆ’ ಎಂದು ಹೇಳಿದರು.


‘ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಕೀಯ ಜಂಜಾಟದಲ್ಲಿ ಮುಳುಗಿ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಸಾವಿರಾರು ಕೋಟಿ ಪರಿಹಾರ ಕೊಟ್ಟ ಕೇಂದ್ರ ನಮಗೆ ಮಾತ್ರ ಅವೈಜ್ಞಾನಿಕ ಪರಿಹಾರ ನೀಡಿ ಕೈತೊಳೆದುಕೊಂಡಿದೆ’ ಎಂದು ಆರೋಪಿಸಿದರು.


‘ಇವತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿದೆ. ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ರಾಜ್ಯ ಸರ್ಕಾರ ಸಹಾಯಕ್ಕೆ ಮುಂದಾಗಬೇಕು. ಮೇವಿನ ಕೊರತೆ ನೀಗಲು ಕ್ರಮಕೈಗೊಳ್ಳಬೇಕು. ನೀರಿನ ವಿಚಾರದಲ್ಲಿ ಮಲತಾಯಿ ಧೋರಣೆ ಬಿಟ್ಟು, ಜಿಲ್ಲೆಯ ಗಡಿಭಾಗ ತಲುಪಿರುವ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನೀರನ್ನು ಜಿಲ್ಲೆಗೆ ಹರಿಸಲು ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.


‘ರಾಜ್ಯದಾದ್ಯಂತ ಶಾಶ್ವತವಾದ ನೆರೆ ಮತ್ತು ಬರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು. ಜಲಾಶಯಗಳು ಮತ್ತು ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಸಿ ಪ್ರವಾಹಗಳು ಉಂಟಾದ ಸಮಯದಲ್ಲಿ ಅನಾಹುತಗಳು ಆಗದಂತೆ ಕ್ರಮವಹಿಸಬೇಕು’ ಎಂದು ಹೇಳಿದರು.


‘ಹಾಲಿನ ದರ ಒಂದು ಲೀಟರ್‌ಗೆ ಕನಿಷ್ಠ ₹40, ರೇಷ್ಮೆಗೂಡಿನ ಬೆಲೆಯನ್ನು ಒಂದು ಕೆ.ಜಿಗೆ ಕನಿಷ್ಠ ₹450 ನಿಗದಿಪಡಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಮೇವು ವಿತರಣಾ ಘಟಕ ತೆರೆಯಬೇಕು. ಜಿಲ್ಲೆಗೆ ಎಚ್‌.ಎನ್.ವ್ಯಾಲಿ ನೀರನ್ನು ತ್ವರಿತಗತಿಯಲ್ಲಿ ಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.


ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥ್, ಕಾರ್ಯದರ್ಶಿ ಮಂಡಿಕಲ್ಲು ವೇಣು, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಉಮಾ, ಪದಾಧಿಕಾರಿಗಳಾದ ರಾಮಾಂಜಿನಪ್ಪ, ರಮಣಾರೆಡ್ಡಿ, ತಾದೂರು ಮಂಜುನಾಥ್, ಲಕ್ಷ್ಮಣ್ ರೆಡ್ಡಿ, ಮುರುಳಿ ದಪ್ಪರ್ತಿ, ಮಾಳಪ್ಪ, ಬಿ.ಎಂ.ಬೈಯ್ಯಪ್ಪ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT