ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ಸಿಪಲ್ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ

ಖಾಲಿ ಕೊಡಗಳನ್ನು ಹಿಡಿದು ರಸ್ತೆಗಿಳಿದು ಪ್ರತಿಭಟಿಸಿದ ಮಹಿಳೆಯರು, ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹ
Last Updated 10 ಸೆಪ್ಟೆಂಬರ್ 2019, 10:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ 6ನೇ ವಾರ್ಡ್ ವ್ಯಾಪ್ತಿಯ ಮುನ್ಸಿಪಲ್ ಬಡಾವಣೆಯ ಮಹಿಳೆಯರು ಕುಡಿಯುವ ನೀರಿಗೆ ಆಗ್ರಹಿಸಿ ಮಂಗಳವಾರ ಬಡಾವಣೆಯ ಸಾಯಿಬಾಬಾ ದೇವಸ್ಥಾನದ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಶಿವಕುಮಾರ್, ‘ಕಳೆದ ಮೂರು ತಿಂಗಳಿಂದ ನಮ್ಮ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಸದ್ಯ ನಮಗೆ ಜಕ್ಕಲಮಡಗು ಜಲಾಶಯದ ನೀರು ಬರುತ್ತಿಲ್ಲ. ಕೊಳವೆಬಾವಿ ನೀರು ಸಹ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಡಾವಣೆಯಲ್ಲಿ ಪ್ರಸ್ತುತ ಆರು ಕೊಳವೆ ಬಾವಿಗಳಿವೆ. ಅವುಗಳಲ್ಲಿ ನೀರು ಕೂಡ ಇದೆ. ಆದರೆ ಆ ಕೊಳವೆ ಬಾವಿಗಳಿಗೆ ಅಳವಡಿಸಿದ ಮೋಟಾರ್ ಸೇರಿದಂತೆ ವಿವಿಧ ಉಪಕರಣಗಳನ್ನು ಕೆಲವರು ಮಾರಾಟ ಮಾಡಿ ಹಣ ಮಾಡಲು ಹೊರಟಿದ್ದಾರೆ. ಈ ಹಿಂದೆ ಅಳವಡಿಸಿದ್ದ ಪರಿಕರಗಳು ಏನಾದವು ಎಂಬುದರ ಬಗ್ಗೆ ನಗರಸಭೆ ಅಧಿಕಾರಿಗಳು ಉತ್ತರ ನೀಡಬೇಕು. ಅಧಿಕಾರಿಗಳು ಕೂಡ ಹೊಸ ಪರಿಕರಿಗಳ ಖರೀದಿ ನೆಪದಲ್ಲಿ ಹಣ ಮಾಡುವ ಕೆಲಸದಲ್ಲಿ ಶಾಮೀಲಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸದ್ಯ ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ನಮಗೆ ನಗರಸಭೆ ಸದಸ್ಯರಾಗಲಿ, ಶಾಸಕರಾಗಲಿ ಇಲ್ಲ. ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರೂ ಉಪಯೋಗವಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ಬಂದೊದಗಿದೆ. ಇಲ್ಲಿನ ನೀರುಗಂಟಿ ಹೆಣ್ಣು ಮಕ್ಕಳ ಕುರಿತು ಹಗುರವಾಗಿ ಮಾತನಾಡುತ್ತಾನೆ. ಅವರನ್ನು ಕೂಡಲೇ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಕೆಲವರು ಕೂಲಿ ಮಾಡಿ ಸಂಪಾದಿಸಿದ ಹಣದಲ್ಲಿ ನೀರು ಕೊಂಡು ಕುಡಿಯುತ್ತಿದ್ದಾರೆ. ಕಡುಬಡವರು ಟ್ಯಾಂಕರ್‌ ನೀರು ಖರೀದಿಸುವವರ ಬಳಿ ಜೀವಜಲಕ್ಕಾಗಿ ಅಂಗಲಾಚುವಂತಾಗಿದೆ. ಕಳೆದ ಮೂರು ತಿಂಗಳಿಂದ ಇಲ್ಲಿನ ಜನರು ಖರೀದಿಸಿದ ನೀರನ್ನು ಅಡುಗೆ, ಕುಡಿಯಲು, ಸ್ನಾನಕ್ಕೆ, ಶೌಚಾಲಯಕ್ಕೆ, ಬಟ್ಟೆ ತೊಳೆಯಲು ಅಡುಗೆ ಎಣ್ಣೆಯಂತೆ ಲೆಕ್ಕ ಹಾಕಿ ಬಳಸುವ ಸ್ಥಿತಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT