ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಗಳ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ: ಡಾ.ರವಿಶಂಕರ್

‘ಡೆಂಗಿ ವಿರೋಧಿ ಮಾಸಾಚರಣೆ-’ ಪ್ರಯುಕ್ತ ನಗರದಲ್ಲಿ ಡೆಂಗಿ ತಡೆ ಕುರಿತ ಅರಿವು ಜಾಥಾ
Last Updated 31 ಆಗಸ್ಟ್ 2018, 12:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಡೆಂಗಿ ಮತ್ತು ಮಲೇರಿಯಾ ಜ್ವರಗಳು ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ತಿಳಿಸಿದರು.

‘ಡೆಂಗಿ ವಿರೋಧಿ ಮಾಸಾಚರಣೆ’ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಗಿ ತಡೆ ಕುರಿತ ಅರಿವು ಜಾಥಾಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮದ ಮುಖ್ಯ ಭಾಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಈ ವರ್ಷದಲ್ಲಿ ಈವರೆಗೆ ಸಾಂಕ್ರಾಮಿಕ ರೋಗಗಳ 16 ಪ್ರಕರಣಗಳು ಖಚಿತಗೊಂಡಿವೆ. ಈ ಎಲ್ಲಾ ಪ್ರಕರಣಗಳನ್ನು ಇಲಾಖೆ ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಜ್ವರ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿರುವ ಜತೆಗೆ ಮಲೇರಿಯಾ ತಡೆಯಲು ಅರಿವು ಮೂಡಿಸಿದೆ. ಯಾವುದೇ ಪ್ರಕರಣಗಳಲ್ಲಿ ಸಾವು ಸಂಭವಿಸಿಲ್ಲ’ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಮಾತನಾಡಿ, ‘ಡೆಂಗಿ, ಮಲೇರಿಯಾ ಇನ್ನಿತರ ಜ್ವರಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಬದ್ಧವಾಗಿದೆ. ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ರಕ್ತ ಮಾದರಿ ಸಂಗ್ರಹ, ಪರೀಕ್ಷೆ ಸೌಲಭ್ಯ ಪಡೆಯಬಹುದು. ಒಂದು ವೇಳೆ ಯಾವುದೇ ಜ್ವರ ಖಚಿತಗೊಂಡಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಕಾಶ್ ಮಾತನಾಡಿ, ‘ಸೊಳ್ಳೆಗಳ ನಿಯಂತ್ರಣವೇ ಡೆಂಗಿ, ಮಲೇರಿಯಾ ರೋಗಗಳ ಹತೋಟಿಗೆ ಕೈಗೊಳ್ಳಬೇಕಾದ ಮೊದಲ ಕ್ರಮ. ಆದ್ದರಿಂದ ತೆರೆದ ನೀರಿನ ತೊಟ್ಟಿ, ಡ್ರಮ್‌, ಬ್ಯಾರಲ್, ಏರ್‌ ಕೂಲರ್‌ಗಳನ್ನು ವಾರಕ್ಕೊಮ್ಮೆ ತಪ್ಪದೇ ಖಾಲಿ ಮಾಡಿ ನಂತರ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು. ಚರಂಡಿ, ಮಣ್ಣಿನ ಮಡಿಕೆ, ಟೈರ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು’ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಆರೋಗ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಿದರು. ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ಆರ್‌ಸಿಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ತರಬೇತಿ ಕೇಂದ್ರದ ಪ್ರಾಚಾರ್ಯೆ ಶಾಂತಾ ಹಾಜರಿದ್ದರು.


ಈ ವರ್ಷದಲ್ಲಿ ಜುಲೈ ಅಂತ್ಯಕ್ಕೆ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳು

16 –ಮಲೇರಿಯಾ
4 –ಡೆಂಗಿ
9 –ಚಿಕುನ್ ಗುನ್ಯಾ
6 –ಫಿಲೇರಿಯಾ

2015 ರಿಂದ ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳು

299 –ಡೆಂಗಿ
148 –ಚಿಕುನ್ ಗುನ್ಯಾ
34 –ಮಲೇರಿಯಾ
6 –ಫಿಲೇರಿಯಾ

ಜಿಲ್ಲೆಯಲ್ಲಿ ರಕ್ತ ಮಾದರಿ ಸಂಗ್ರಹ ವಿವರ

2,73,315 –2017ರಲ್ಲಿ ಸಂಗ್ರಹಿಸಿದ ರಕ್ತ ಮಾದರಿಗಳು
5 –ಖಚಿತಗೊಂಡ ಮಲೇರಿಯಾ ಪ್ರಕರಣಗಳು
1,71,034 –2018ರಲ್ಲಿ ಸಂಗ್ರಹಿಸಿದ ರಕ್ತ ಮಾದರಿಗಳು
16 –ಖಚಿತಗೊಂಡ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT