ಭಾನುವಾರ, ನವೆಂಬರ್ 27, 2022
21 °C
ಶಿಡ್ಲಘಟ್ಟದ ಮೂಲಕ ಸಾದಲಿ ಕಡೆಗೆ ಕುಮಾರಸ್ವಾಮಿ ರೋಡ್‌ ಶೋ

ಯಾತ್ರೆಗೆ ಪೂರ್ಣಕುಂಭ ಸ್ವಾಗತ, ಹೂಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಜೆಸಿಬಿ, ಮಾಳಿಗೆಗಳ ಮೇಲೆಲ್ಲಾ ನಿಂತ ಜನರಿಂದ ಹೂಮಳೆ, ಪೂರ್ಣಕುಂಭ ಸ್ವಾಗತ. ಕ್ರೇನ್‌ಗಳಲ್ಲಿ ದೊಡ್ಡ ಗಾತ್ರದ ಹೂವಿನ ಮತ್ತು ಸೇಬಿನ ಮಾಲಾರ್ಪಣೆ, ರೇಷ್ಮೆ ಗೂಡಿನ ಹಾರ, ಜೊತೆಗೆ ರೋಡ್‌ ಶೋ ಹಾಗೂ ಸಾರ್ವಜನಿಕ ಸಭೆ...

ಇದೆಲ್ಲಾ ಚುನಾವಣಾ ಪೂರ್ವಭಾವಿಯಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜೆಡಿಎಸ್‌ನ ಪಂಚರತ್ನ ಯಾತ್ರೆಯ ಝಲಕ್. 

ಹುಣಸೇನಹಳ್ಳಿ ಸ್ಟೇಷನ್ ಬಳಿ ವಿಶೇಷ ಪೂಜೆ ಮೂಲಕ ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯಲ್ಲಿ ಪಂಚರತ್ನ ರಥಕ್ಕೆ ಚಾಲನೆ ನೀಡಲಾಯಿತು. ಪಂಚರತ್ನ ಯೋಜನೆ ಕುರಿತು ಕಿರು ನಾಟಕವನ್ನೂ ಪ್ರದರ್ಶಿಸಲಾಯಿತು. ದೇವರಮಳ್ಳೂರು ಪಂಚಾಯಿತಿ ವ್ಯಾಪ್ತಿಯಿಂದ ನಗರದ ಮಯೂರ ವೃತ್ತದ ಮುಖಾಂತರ ಬಸ್ ನಿಲ್ದಾಣದ ಬಳಿಯ ವೆಂಕಟರಾಯಪ್ಪ ಕಾರ್ಖಾನೆ ಮುಂಭಾಗದಿಂದ ನಗರದ ಟಿ.ಬಿ. ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಹೋದಲೆಲ್ಲಾ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿ ಪುಷ್ಪಾರ್ಚನೆ ಮಾಡಿದರು.

ಜನರನ್ನುದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ‘ಬಡ ಮಕ್ಕಳಿಗೆ ಉಚಿತ ಗುಣಮಟ್ಟ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನಿರುದ್ಯೋಗ ಯುವಕ–ಯುವತಿಯರಿಗೆ ಕೌಶಲ ತರಬೇತಿ ನೀಡಿ ಸಾಲ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

ಮಹಿಳೆಯರಿಗೆ ಸರ್ಕಾರದಿಂದ ತರಬೇತಿ ಶಿಬಿರ ನಡೆಸಿ, ಹಳ್ಳಿಗಾಡಿನಲ್ಲೇ ಎಂಟತ್ತು ಮಂದಿಗೆ ಉದ್ಯೋಗ ಕೊಡುವ ಶಕ್ತಿ ತುಂಬುತ್ತೇನೆ ಎಂದು ನುಡಿದರು.

ಶಿಡ್ಲಘಟ್ಟ ಕ್ಷೇತದ ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್. ರವಿಕುಮಾರ್, ಜೆಡಿಎಸ್ ಯುವ ಘಟಕ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ರಮೇಶಗೌಡ, ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಸಿ.ಎಂ.ಆರ್. ಶ್ರೀನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಹಾಜರಿದ್ದರು.

 

ಕಾಂಗ್ರೆಸ್ ಬಿಜೆಪಿಯ ‘ಬಿ’ ಟೀಮ್

ಶಿಡ್ಲಘಟ್ಟ: ‘ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಿದ್ದರು. ಆದರೆ, ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಲ್ಲ. ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಆಗಿದೆ. ಇದನ್ನು ಮುಸ್ಲಿಂ ಬಾಂಧವರು ಅರ್ಥ ಮಾಡಿಕೊಳ್ಳಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. 

ನಗರದ ಬಸ್ ನಿಲ್ದಾಣದ ಬಳಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಆದರೆ ಅದನ್ನು ಒಡೆಯುವ ಕೆಲಸ ನಡೆಯುತ್ತಿದೆ. ನಿಮ್ಮ ಜೀವನದ ಉತ್ತಮ ಭವಿಷ್ಯ ಬೆಳಗಬೇಕು. ರೈತ, ಮುಸ್ಲಿಂ, ಹಿಂದೂಗಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಉತ್ತಮ ಆಗಬೇಕು. ಅದನ್ನು ಜೆಡಿಎಸ್‌ಗೆ ಮತ ನೀಡುವ ಮೂಲಕ ಕಾರ್ಯಗತಗೊಳಿಸಲು ಸಹಕಾರ ನೀಡಿ’ ಎಂದರು.

‘ಎಲ್ಲ ಸಮಸ್ಯೆಗಳು ಬಗೆಹರಿಸಬೇಕು ಎಂಬುದೇ ನಮ್ಮ ಪಕ್ಷದ ಉದ್ದೇಶ. 2018ರಲ್ಲಿ ಸಾಲ ಮನ್ನಾ ಮಾಡಿದೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮರೆಯಾಗುತ್ತಿದೆ. ಇಂದು ಶಿಡ್ಲಘಟ್ಟದಲ್ಲಿ ಹಬ್ಬದ ವಾತಾವರಣ ಮೂಡಿದೆ. ಪಂಚರತ್ನ ಯೋಜನೆ ಐದು ವರ್ಷಗಳಲ್ಲಿ ಮಾಡದಿದ್ದರೆ, ನಿಮ್ಮ ಬಳಿ ಬಂದು ಮತ್ತೆ ಮತ ಕೇಳಲ್ಲ. ಸಾಲಮನ್ನಾ ಮಾಡಬಾರದು ಎಂದು ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದರು’ ಎಂದು ದೂರಿದರು. ರೈತ ವರ್ಗಕ್ಕೆ ದೇವೇಗೌಡರ ಕೊಡುಗೆ ಅಪಾರ ಎಂದು ಸ್ಮರಿಸಿದರು. 

ಅಧಿಕಾರಕ್ಕೆ ಬಂದರೆ ಕೆಂಪೇಗೌಡರ ಪುತ್ಥಳಿ ವಿಧಾನಸೌಧದ ಮುಂಭಾಗ ಮತ್ತು ಕೆಂಪೇಗೌಡ ವಿವಿ ಹಾಗೂ ಟಿಪ್ಪು ವಿವಿ ಮಾಡುತ್ತೇವೆ. ಈ ಮೂಲಕ ಶಾಂತಿಯ ತೋಟ ಮಾಡುತ್ತೇವೆ ಎಂದರು. 

ಸಾಬ್ರು, ಗೌಡ್ರು, ದಲಿತರ ಹೆಸರು ಮತದಾರರ ಪಟ್ಟಿಯಿಂದ ತೆಗೆಯುತ್ತಿದ್ದಾರೆ. 23 ಲಕ್ಷ ಮತದಾರರ ಹೆಸರು ತೆಗೆದು ಹಾಕಿದ್ದಾರೆ ಎಂದು ಸಿ.ಎಂ. ಇಬ್ರಾಹಿಂ ಅವರು ಆರೋಪಿಸಿದರು.

 

‘ರವಿಗೆ ಸಿ ಫಾರಂ, ತಪ್ಪು ಮಾಡಿದೆ’

‘ನನ್ನ ಆರೋಗ್ಯ ಲೆಕ್ಕಿಸದೆ ಹೋರಾಡುತ್ತಿದ್ದೇನೆ. ಪಂಚರತ್ನ ಯೋಜನೆ ನಾಡಿನ ಜನರಿಗೆ ತಲುಪಿಸಬೇಕು. ಕಳೆದ ಬಾರಿ ನನ್ನಿಂದ ತಪ್ಪಾಗಿದೆ. 2018ರ ಚುನಾವಣೆಯಲ್ಲಿ ಮೇಲೂರು ಬಿ.ಎನ್. ರವಿಕುಮಾರ್ ಅವರಿಗೆ ಬಿ.ಫಾರಂ ಕೊಡದೆ ನಾನು ತಪ್ಪು ಮಾಡಿದೆ. ದೇವೇಗೌಡರು ಅವರಿಗೆ ಸಿ.ಫಾರಂ ಕೊಟ್ಟರು. ನಾನಾ ಕಾರಣದಿಂದ ರವಿಕುಮಾರ್ ನೊಂದಿದ್ದಾರೆ. ಆದರೂ ಜೆಡಿಎಸ್ ಕುಟುಂಬದ ಮಗನಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು
ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮೇಲೂರು ಬಿ.ಎನ್. ರವಿಕುಮಾರ್ ನಿಮ್ಮ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕು. ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ. ನಾಡಿನಾದ್ಯಂತ ಜೆಡಿಎಸ್ ಅಲೆ ಆರಂಭವಾಗಿದೆ ಎಂದರು. 

ರೈತರಿಗೆ ನೆರವು

ಸಂಕಷ್ಟ ಕಾಲದಲ್ಲಿ ಕುಮಾರಸ್ವಾಮಿ ಅವರು ರೈತರ ನೆರವಿಗೆ ಬರುತ್ತಾರೆ. ₹50 ಸಾವಿರ ಪರಿಹಾರ ಕೊಡುವ ಮೂಲಕ ಸಾಂತ್ವನ ಹೇಳಿದ್ದರು. 14 ತಿಂಗಳು ಅಧಿಕಾರದಲ್ಲಿ ಇದ್ದಾಗ ₹23 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು.

ವಿಧಾನಸೌಧದಲ್ಲೂ ಜೆಡಿಎಸ್ ಧ್ವಜ ಹಾರಿಸುವಂತೆ ನಮಗೆ ಶಕ್ತಿ ತುಂಬುವ ಕೆಲಸ ಮಾಡಬೇಕು

ಪ್ರಜ್ವಲ್ ರೇವಣ್ಣ, ಸಂಸದ

 

ಕಾಂಗ್ರೆಸ್, ಬಿಜೆಪಿ ಏನೂ ಮಾಡಿಲ್ಲ

ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಜನರಿಗಾಗಿ ಏನೂ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಹೀಗಾಗಿ, ರಾಜ್ಯದಲ್ಲಿ ಇಂದು ನಡೆಯುತ್ತಿರುವ  ಇಂದು ಹಲಾಲ್, ಹಿಜಾಬ್, ಆಜಾನ್ ಅಂದು ಗಲಾಟೆ, ಶೇ 40 ಕಮಿಷನ್ ಆರೋಪಕ್ಕೆ ಕಾರಣವಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ, ಜೆಡಿಸ್ ಯುವ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.