ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಹಿತಕ್ಕಾಗಿ ಸುಧಾಕರ್‌ ಎಷ್ಟು ಪತ್ರ ಬರೆದಿದ್ದರು ಪ್ರಶ್ನಿಸಿ: ಎಚ್‌ಡಿಕೆ

ಜೆಡಿಎಸ್ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
Last Updated 18 ನವೆಂಬರ್ 2019, 15:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಕ್ರಮವಾಗಿ ಸಂಪಾದಿಸಿದ ಹಣದಿಂದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಜನರನ್ನು ಕೊಂಡುಕೊಳ್ಳಬಹುದು ಎಂಬ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರ ದುರಹಂಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಬಲಗೈ ಬಂಟನಾಗಿದ್ದ ಸುಧಾಕರ್ ಅವರು ಚಿಕ್ಕಬಳ್ಳಾಪುರ ಅಭಿವೃದ್ಧಿ ಮಾಡಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಬಂದು ಕ್ಷೇತ್ರದ ಅಭಿವೃದ್ಧಿ ಕುರಿತು ಎಷ್ಟು ಬಾರಿ ಚರ್ಚಿಸಿದ್ದಾರೆ ಎಂಬುದನ್ನು ಜನತೆ ಪ್ರಶ್ನಿಸಬೇಕು. ಅವರು ಸಿದ್ದರಾಮಯ್ಯ ಮತ್ತು ನನಗೂ ಟೋಪಿ ಹಾಕಿದರು. ಯಾರಿಗೆಲ್ಲ ಟೋಪಿ ಹಾಕಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಪ್ರಸ್ತಾಪಿಸುವೆ’ ಎಂದು ತಿಳಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಸುಧಾಕರ್ ಅವರು ನನ್ನನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿ ಎಂದು ಒಂದೇ ಒಂದು ಪತ್ರ ಬರೆದಿದ್ದರು. ಮಂಡಳಿಗೆ ನನ್ನನ್ನು ಅಧ್ಯಕ್ಷನ್ನಾಗಿ ಮಾಡಿದರೆ ಜೆಡಿಎಸ್ ಸೇರುತ್ತೇನೆ. ಚಿಕ್ಕಬಳ್ಳಾಪುರ ಉಸ್ತುವಾರಿ ನಾನೇ ನೋಡಿಕೊಳ್ಳುತ್ತೇನೆ ಎಂದು ಕಥೆ ಕಟ್ಟಿದ್ದರು. ಆದರೆ ನಾನು ಅವರ ನಾಟಕೀಯ ಮಾತಿಗೆ ಮರುಳಾಗಲಿಲ್ಲ’ ಎಂದರು.

‘ಸುಧಾಕರ್ ಅವರು ಒಮ್ಮೆ ನಮ್ಮ ಮನೆಗೆ ಬಂದು ನಾನು ನಿಮ್ಮ ನೆಂಟ ಎಂದಿದ್ದರು. ಇನ್ನೊಂದು ಕಡೆ ಅದೇ ನೆಂಟನಿಗೆ ವಿಷ ಹಾಕಿದರು. ಭೂಮಿ ಮೇಲೆ ತಾನೊಬ್ಬನೇ ಬುದ್ಧಿವಂತ ಎಂದು ತಿಳಿದುಕೊಂಡಿರುವವರು ಯಾವೆಲ್ಲ ಸಂದರ್ಭಗಳಲ್ಲಿ ಯಾರಿಗೆಲ್ಲ ಟೋಪಿ ಹಾಕಿದ್ದಾರೆ ಎಂಬುದು ಗೊತ್ತಿದೆ. ನಮ್ಮ ತಂದೆ ಕಾಲದಿಂದ ಬಚ್ಚೇಗೌಡ ಅವರ ತಂದೆ ಪಿಳ್ಳಪ್ಪನವರ ಕುಟುಂಬ ನಮಗೆ ಹೆಗಲು ಕೊಟ್ಟು ರಾಜಕೀಯ ಮಾಡಿದೆ. ಅವರು ಹಣ ಗಳಿಸಲಿಲ್ಲ. ಜನರ ವಿಶ್ವಾಸ ಗಳಿಸಿದ್ದಾರೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಚಿಕ್ಕಬಳ್ಳಾಪುರಕ್ಕೆ ಬಂದು ಮೂರು ದಿನ ಇಲ್ಲೇ ತಂಗಿ, ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಸುಧಾಕರ್ ಅವರು ಲೂಟಿ ಮಾಡಿದ ಅಕ್ರಮ ಸಂಪಾದನೆ ಹಣವನ್ನು ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ಮತದಾರರು ಅವರ ಉಡುಗೊರೆಗೆ ಮಾರು ಹೋಗಬಾರದು. ನಿಮ್ಮ ಮತವನ್ನು ಖರೀದಿ ಮಾಡಲು ಬಂದಿರುವ ವ್ಯಕ್ತಿ ಈ ಸಮಾಜಕ್ಕೆ ಮಾರಕ’ ಎಂದರು.

‘ಸುಧಾಕರ್ ಅವರು ಚಿಕ್ಕಬಳ್ಳಾಪುರದವರಿಗೆ ಅನುಕೂಲವಾಗಲಿ ಎಂಬುದಕ್ಕಿಂತಲೂ ಹೆಚ್ಚಾಗಿ ಕಮಿಷನ್ ಹೊಡೆಯಲು ವೈದ್ಯಕೀಯ ಕಾಲೇಜು ನಿರ್ಮಿಸಲು ಹೊರಟಿದ್ದಾರೆ. ನಿಟ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಆ ಕಾಲೇಜಿನಲ್ಲಿ ಸೀಟುಗಳು ದೊರೆಯುತ್ತವೆಯೇ ವಿನಾ ಇಲ್ಲಿನ ರೈತರ ಮಕ್ಕಳಿಗಲ್ಲ. ಇಲ್ಲಿನ ಜನರಿಗೆ ವೈದ್ಯಕೀಯ ಕಾಲೇಜಿಗಿಂತಲೂ ಉತ್ತಮ ಆಸ್ಪತ್ರೆಗಳ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನನಗೆ ಹಲವು ರೀತಿಯಲ್ಲಿ ಅವಮಾನಿಸಿ, ಕಿರುಕುಳ ಕೊಟ್ಟಿದ್ದಾರೆ. ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಾನು ಬಡವರು ಮತ್ತು ರೈತರ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಇವತ್ತು ದೇಶದಲ್ಲಿ ಆರ್ಥಿಕತೆ ಹದಗೆಟ್ಟು, ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರ ಗೋಳು ಕೇಳುವವರಿಲ್ಲದಂತಾಗಿದೆ. ಸಂತ್ರಸ್ತರ ನೆರವಿಗೆ ಬಾರದವರ ಜತೆ ಕೈಜೋಡಿಸುವವರನ್ನು ಸೋಲಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT