ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷೆ ಬೇಡಿದ ಗುತ್ತಿಗೆ ಪೌರಕಾರ್ಮಿಕರು

ಬಂಕಾಪುರ: ಪೌರಕಾರ್ಮಿಕರ ವೇತನ ವಿಳಂಬ ನೀತಿ ಖಂಡಿಸಿ ಪ್ರತಿಭಟನೆ
Last Updated 25 ಮೇ 2018, 9:15 IST
ಅಕ್ಷರ ಗಾತ್ರ

ಶಿಗ್ಗಾವಿ: ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಬಂಕಾಪುರ ಪುರಸಭೆ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೀರು ಸರಬುರಾಜು ಕಾರ್ಮಿಕರ ಗುರುವಾರ ಮನೆ–ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದರು.

ಬಂಕಾಪುರ ಪಟ್ಟಣದ ಅಂಬೇಡ್ಕರ್ ನಗರದ ಮಾದಾರ ಚನ್ನಯ್ಯ, ಹರಳಯ್ಯ ದೇವಸ್ಥಾನದಿಂದ ಮೆರವಣಿಯಲ್ಲಿ ಹೊರಟರು. ಎಂಇಎಸ್‌ ಶಾಲೆ ರಸ್ತೆ, ರೇಣುಕಾಚಾರ್ಯ ಬ್ಯಾಂಕ್‌ ರಸ್ತೆ, ನಾಡ ಕಚೇರಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ನಡೆಸಿದರು. ಭಿಕ್ಷೆ ಕೋರುತ್ತಲೇ  ಪುರಸಭೆ ಕಚೇರಿಗೆ ತಲುಪಿ, ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ 10ತಿಂಗಳಿಂದ ವೇತನ ನೀಡಿಲ್ಲ. ಅದರಿಂದ ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ಸಾಕಷ್ಟು ಸಾಲ ಮಾಡಲಾಗಿದೆ. ಸಾಲ ನೀಡಿದವರು ಮರಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆ ಬಾಡಿಗೆ, ಮಕ್ಕಳ ಶಾಲೆ ಶುಲ್ಕ ತುಂಬಲು ಹಣ ಇಲ್ಲದಾಗಿದೆ. ಅಲ್ಲದೆ ಕುಟುಂಬದ ಬಂಡಿ ಸಾಗಿಸುವುದೂ ಕಷ್ಟವಾಗಿದೆ’ ಎಂದು ಗುತ್ತಿಗೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ನಾಗಪ್ಪ ಕೂಡಲ ಅಳಲು ತೋಡಿಕೊಂಡರು.

‘ಈ ಸಮಸ್ಯೆ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಇಡೀ ಪಟ್ಟಣವನ್ನು ಸ್ವಚ್ಛ ಮಾಡುವವರ ಬದುಕು ಬೀದಿ ಪಾಲಾಗುತ್ತಿದೆ. ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ, ‘ಪೌರಕಾರ್ಮಿಕರ ವೇತನದಲ್ಲಿ ಪಿ.ಎಫ್‌, ಇಎಸ್‌ಐ ಕಡಿತ ಮಾಡುತ್ತಿಲ್ಲ. ಪ್ರತಿ ತಿಂಗಳ ಸರಿಯಾಗಿ ವೇತನ ನೀಡಬೇಕು. ನೀರು ಸರಬುರಾಜು ಮಾಡುವ ಕಾರ್ಮಿಕರಿಗೆ ₹12 ಸಾವಿರ ವೇತನ ಕೊಡಬೇಕು. ಆದರೆ ಸುಮಾರು ನಾಲ್ಕೈದು ವರ್ಷಗಳಿಂದ ಬರೀ ₹3 ಸಾವಿರ ವೇತನ ನೀಡುತ್ತಾ ಬರಲಾಗಿದೆ. ಅದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ತಕ್ಷಣ ಗುತ್ತಿಗೆ ಕಾರ್ಮಿಕರ ವೇತನ ನೀಡಬೇಕು, ನೀರು ಸರಬುರಾಜು ಕಾರ್ಮಿಕರ ವೇತನ ಹೆಚ್ಚಿಸಬೇಕು. ಅಲ್ಲಿಯ ವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಗಪ್ಪ ಮಾದರ, ಮಾಲತೇಶ ರಾಮಗೇರಿ, ಬಸವರಾಜ ಸಣ್ಣಪ್ಪನವರ, ನೀಲಪ್ಪ ಮಾದರ, ನಾಗಪ್ಪ ಹರಿಜನ, ಗುಡ್ಡಪ್ಪ ಮಾದರ, ಗುಡ್ಡಪ್ಪ ಕಟ್ಟಿಮನಿ, ಸಿದ್ದಪ್ಪ ಕಟ್ಟಿಮನಿ, ರೇಣವ್ವ ಮಾದರ, ಚನ್ನವ್ವ ಮಾದರ, ಹನುಮವ್ವ ಮಾದರ ದುರ್ಗವ್ವ ಮಾದರ ಪಾಲ್ಗೊಂಡಿದ್ದರು.

ಹಣವಿಲ್ಲ...

ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪುರಸಭೆ ಅಧ್ಯಕ್ಷೆ ಶಾಬಿರಾಭಿ ಯಲಗಚ್ಚ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.

‘ಕಳೆದ ಒಂದು ತಿಂಗಳ ಹಿಂದೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಒಂದೂವರೆ ತಿಂಗಳ ₹7.50 ಲಕ್ಷ ವೇತನ ನೀಡಲಾಗಿದೆ. ಪಟ್ಟಣದಲ್ಲಿನ ಮನೆ ಕರ ವಸೂಲಿಯಾದ ಹಣದಲ್ಲಿ ಅಥವಾ ಸರ್ಕಾರದಿಂದ ಹಣ ಮಂಜೂರಾದ ತಕ್ಷಣ 10 ತಿಂಗಳ ವೇತನ ಬಿಡುಗಡೆ ಮಾಡುತ್ತೇನೆ’ ಎಂದು ಮನವರಿಕೆ ಮಾಡಿದರು.

‘ಪುರಸಭೆಯ ಯಾವುದೇ ಖಾತೆಯಲ್ಲಿ ಸದ್ಯ ಹಣವಿಲ್ಲ. ಹೀಗಾಗಿ ವೇತನ ನೀಡುವಲ್ಲಿ ವಿಳಂಬವಾಗಿದೆ. ಈ ಕುರಿತು ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾರ್ಮಿಕರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT