ಶನಿವಾರ, ಅಕ್ಟೋಬರ್ 19, 2019
27 °C
ಎರಡನೇ ದಿನವೂ ಮುಂದುವರಿದ ಐಟಿ ದಾಳಿ, ಜಿ.ಎಚ್.ನಾಗರಾಜ್ ಮನೆಯೆಲ್ಲ ಜಾಲಾಡಿ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ

36 ಗಂಟೆಗಳಾದರೂ ಮುಗಿಯದ ಐಟಿ ದಾಳಿ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಪ್ರಶಾಂತ್ ನಗರದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜ್ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಬಿಡುಬಿಟ್ಟಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ಶುಕ್ರವಾರ ರಾತ್ರಿಯಾದರೂ ತಮ್ಮ ಕಾರ್ಯಾಚರಣೆ ನಿಲ್ಲಿಸಿರಲಿಲ್ಲ.

ಗುರುವಾರ ಬೆಳಿಗ್ಗೆ 8 ರಿಂದ ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿರುವ ನಾಗರಾಜ್ ಅವರ ಹಣಕಾಸು ವ್ಯವಹಾರ, ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುವ ಕಾರ್ಯ 36 ಗಂಟೆಗಳಾದರೂ ಮುಂದುವರಿದಿತ್ತು. ಏತನ್ಮಧ್ಯ ಶುಕ್ರವಾರ ಸಂಜೆ ಕೆಲ ಅಧಿಕಾರಿಗಳು ನಾಗರಾಜ್ ಅವರನ್ನು ತಮ್ಮ ಒಂದು ವಾಹನದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಕೋಲಾರಕ್ಕೆ ಕರೆದೊಯ್ದರು ಎಂದು ತಿಳಿದುಬಂದಿದೆ.

ಐಟಿ ಅಧಿಕಾರಿಗಳ ದಾಳಿ ವೇಳೆ ಮನೆಯಲ್ಲಿ ನಾಗರಾಜ್ ಮತ್ತು ಅವರ ಪತ್ನಿ ಹೇಮಾವತಿ ಅವರು ಮಾತ್ರ ಇದ್ದರು ಎಂದು ತಿಳಿದು ಬಂದಿದೆ. ಗುರುವಾರ ದಿನವೀಡಿ ಈ ಇಬ್ಬರನ್ನು ಅಧಿಕಾರಿಗಳು ಮನೆಯಿಂದ ಹೊರಗೆ ಬಿಡದೆ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದರು.

ಶುಕ್ರವಾರ ಬೆಳಿಗ್ಗೆ ಕೆಲ ನಿಮಿಷ ಮನೆಯಿಂದ ಹೊರಗೆ ಬಂದ ನಾಗರಾಜ್ ಅವರು ಮನೆಯ ಕಾಂಪೌಂಡ್ ಆಚೆ ನಿಂತಿದ್ದ ತಮ್ಮ ಹಿತೈಷಿಗಳತ್ತ ಕೈ ಬಿಸುತ್ತ, ‘ನನ್ನ ವ್ಯವಹಾರವೆಲ್ಲ ಪಾರದರ್ಶಕವಾಗಿದೆ. ಅಧಿಕಾರಿಗಳಿಗೆ ನಾವು ಸಹಕಾರ ನೀಡುತ್ತಿದ್ದೇವೆ. ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು ಎನ್ನಲಾಗಿದೆ.

ಅದಾಗಿ ಕೆಲ ಹೊತ್ತಿನಲ್ಲಿಯೇ ಹೇಮಾವತಿ ಅವರು ದೇವಸ್ಥಾನ ಮತ್ತು ಆರೋಗ್ಯ ತಪಾಸಣೆಗಾಗಿ ಕೆಲ ಹೊತ್ತು ಅಧಿಕಾರಿಗಳ ಅನುಮತಿ ಮೆರೆಗೆ ಮನೆಯಿಂದ ಹೊರಟು ಕೆಲ ಗಂಟೆಗಳ ಬಳಿಕ ಮನೆಗೆ ವಾಪಾಸಾದರು. ಶುಕ್ರವಾರ ತಡರಾತ್ರಿಯೂ ಅಧಿಕಾರಿಗಳು ಮನೆಯಲ್ಲಿಯೇ ಇದ್ದರು.

ಬೆಂಗಳೂರಿನಲ್ಲಿರುವ ನಾಗರಾಜ್ ಅವರ ಪುತ್ರ ವಿನಯ್ ಅವರ ನಿವಾಸ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 2015ರಲ್ಲಿ ಸಹ ನಾಗರಾಜ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

Post Comments (+)