ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ಗ್ರಾಮಗಳಲ್ಲಿ ಹಿಂದೆ ಬಿದ್ದ ಕಾಂಗ್ರೆಸ್‌

ಕಾಂಗ್ರೆಸ್‌ ಪ್ರಾಬಲ್ಯವಿದೆ ಎಂದೇ ಭಾವಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದೆಲ್ಲೆಡೆ ಬೀಸಿದ ಜೆಡಿಎಸ್‌ ಪರ ಅಲೆ
Last Updated 17 ಮೇ 2018, 6:12 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸದ್ದಡಗಿಸಿದ ಜೆಡಿಎಸ್‌ನ ಜಿ.ಟಿ.ದೇವೇಗೌಡ ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲೂ ಮೇಲುಗೈ ಪಡೆದಿರುವುದು ವಿಶೇಷ.

ಕಾಂಗ್ರೆಸ್‌ ಪ್ರಾಬಲ್ಯವಿದೆ ಎಂದೇ ಭಾವಿಸಲಾಗಿದ್ದ ಗ್ರಾಮಗಳಲ್ಲೂ ಜೆಡಿಎಸ್‌ ಸಾಕಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಒಟ್ಟಾರೆ ಇಡೀ ಕ್ಷೇತ್ರದಲ್ಲಿ ಬೀಸಿದ ಕಾಂಗ್ರೆಸ್‌ ವಿರೋಧಿ ಅಲೆ ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದೆ.

ಜಿ.ಟಿ.ದೇವೇಗೌಡ 1,21,325 ಮತ ಪಡೆದಿದ್ದರೆ, ಸಿದ್ದರಾಮಯ್ಯ 85,282 ಮತ ಗಳಿಸಿದ್ದರು. 36,042 ಮತಗಳಿಂದ ಜೆಡಿಎಸ್‌ ಗೆಲುವು ಸಾಧಿಸಿತ್ತು.

ಸಿದ್ದರಾಮಯ್ಯ ಚುನಾವಣೆ ದಿನಾಂಕ ಘೋಷಣೆಯಾದ ಎರಡೇ ದಿನಕ್ಕೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಧುಮುಕಿದ್ದರು. ರೋಡ್‌ ಷೋ ಮತ್ತು ಬಹಿರಂಗ ಸಭೆಯನ್ನು ರಮ್ಮನಹಳ್ಳಿಯಿಂದ ಆರಂಭಿಸಿದ್ದರು. ಪ್ರಚಾರಕ್ಕೆ ಮೊದಲು ಕಾಲಿಟ್ಟ ರಮ್ಮನಹಳ್ಳಿಯ ಮತದಾರರೇ ಅವರ ವಿರುದ್ಧ ತೀರ್ಪು ನೀಡಿದ್ದಾರೆ. ಇಲ್ಲಿನ ಮತಗಟ್ಟೆಗಳಲ್ಲಿ ದೇವೇಗೌಡ ಅವರಿಗೆ 3,164 ಮತಗಳು ದೊರೆತರೆ, ಕಾಂಗ್ರೆಸ್‌ ಪರ ಬಿದ್ದದ್ದು 1,103 ಮತಗಳು ಮಾತ್ರ.

ಕೂರ್ಗಳ್ಳಿ, ಇಲವಾಲ, ಹೂಟಗಳ್ಳಿ, ಬೋಗಾದಿ. ಹಿನಕಲ್‌ನಲ್ಲಿ ಮತದಾರರು ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಅದರಲ್ಲೂ ಕೂರ್ಗಳ್ಳಿಯ ಕೆಲವು ಮತಗಟ್ಟೆಗಳಲ್ಲಿ ಶೇ 60ರಿಂದ 70ರಷ್ಟು ಮತಗಳು ಜೆಡಿಎಸ್‌ ಪಾಲಾಗಿವೆ. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕಡಕೊಳದಲ್ಲಿ ಜೆಡಿಎಸ್‌ಗೆ 1,439– 1367 ಮತಗಳ ಮೇಲುಗೈ ದೊರೆತಿದೆ.

ನಾಗನಹಳ್ಳಿಯಲ್ಲಿ ಜೆಡಿಎಸ್‌ 1793– 671 ಮತಗಳಿಂದ ಮುನ್ನಡೆ ಪಡೆದಿದೆ. ಇಲ್ಲಿ ನಟ ದರ್ಶನ್‌ ಅವರು ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದನ್ನು ಜೆಡಿಎಸ್‌ ಕಾರ್ಯಕರ್ತರು ವಿರೋಧಿಸಿದ್ದರು. ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆಯೂ ನಡೆದಿತ್ತು.

ಕುರುಬ ಸಮು ದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ ಗಳಲ್ಲಿ ಸಿದ್ದರಾಮಯ್ಯ ಮೇಲುಗೈ ಪಡೆದಿದ್ದಾರೆ. ಕಾಳಿಸಿದ್ದನಹುಂಡಿಯಲ್ಲಿ ಅವರಿಗೆ 1,323 ಮತಗಳು ದೊರೆತರೆ, ಎದುರಾಳಿಗೆ ದೊರೆತದ್ದು 36 ಮತಗಳು. ಮಾರ್ಬಳ್ಳಿಹುಂಡಿಯಲ್ಲಿ 1011–312 ಮತಗಳ ಮೇಲುಗೈ ಸಾಧಿಸಿದ್ದಾರೆ. ಈ ಗ್ರಾಮದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಬಂದಿದ್ದ ವೇಳೆ ಕೆಲವರು ಕಾಂಗ್ರೆಸ್‌ ಬಾವುಟ ಪ್ರದರ್ಶಿಸಿದ್ದರು.

ಹುಯಿಲಾಳು ಗ್ರಾಮದಲ್ಲಿ ಸಿದ್ದರಾಮಯ್ಯ 1269–270 ಮತಗಳಿಂದ, ಡಿ.ಸಾಲುಂಡಿ ಗ್ರಾಮದಲ್ಲಿ 1890–205 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT