ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಳೆ ತಂದಿತು ಮೋಹಕತೆ

ಸಮೃದ್ಧ ಮಳೆ: ಜಲಾಶಯ, ಕೆರೆ ಕಟ್ಟೆಗಳು ಭರ್ತಿ
Last Updated 26 ಜುಲೈ 2021, 4:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಿಸಿಲು, ಬರದಿಂದ ಬಸವಳಿದಿದ್ದ ಜಿಲ್ಲೆಗೆ ಈ ಬಾರಿಯ ಮುಂಗಾರು ಮಳೆ ಮೋಹಕತೆಯನ್ನು ತಂದಿದೆ. ರೈತರು, ನಾಗರಿಕರು ನವೋಲ್ಲಾಸದಲ್ಲಿ ಹರ್ಷಗೊಂಡಿದ್ದಾರೆ.

ಮುಂಗಾರು ಚಟುವಟಿಕೆಗಳಿಗೆ ಮಳೆ ಆಶಾದಾಯಕವಾಗಿ ಬಂದಿದ್ದು ಕಾರಣವಾದರೆ ಮತ್ತೊಂದು ಪ್ರಮುಖ ಕಾರಣ ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳು ನೀರಿನಿಂದ ತುಂಬಿರುವುದು. ಅಷ್ಟೇ ಅಲ್ಲ ಜಿಲ್ಲೆಯಲ್ಲಿನ ಜಲಾಶಯಗಳಿಗೂ ಉತ್ತಮವಾಗಿ ಒಳಹರಿವು ಸಹ ಬಂದಿದೆ. ಒಮ್ಮೆ ಜಿಲ್ಲೆಯ ‌ಗ್ರಾಮೀಣ ಭಾಗಗಳನ್ನು ಸುತ್ತಿದರೆ ಮಳೆ ಮೂಡಿಸಿದ ಚಿತ್ರಗಳು ಕಣ್ಣಿಗೆ ಕಟ್ಟುತ್ತವೆ.

ಚಿಕ್ಕಬಳ್ಳಾಪುರ ಜನರ ಜೀವಸೆಲೆಯಾದ ಜಕ್ಕಲಮಡುಗು ಜಲಾಶಯ 2017ರಲ್ಲಿ ಕೋಡಿಹರಿದಿತ್ತು. ಆ ನಂತರ ಈ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಮಳೆ ನೀರು ತುಂಬಿರಲಿಲ್ಲ. ಆದರೆ ಈ ಬಾರಿ 7 ಅಡಿ ಮಳೆ ನೀರು ತುಂಬಿದೆ. ಜಲಾಶಯ ಭರ್ತಿಗೆ ಮೂರೂವರೆ ಅಡಿ ಬಾಕಿ ಇದೆ. ಜಲಾಶಯಕ್ಕೆ ನೀರು ಹರಿದು ಹೋಗುವ ಮೂಲಗಳಲ್ಲಿ ಇಂದಿಗೂ ನೀರು ತುಂಬಿಕೊಂಡಿವೆ. ಮತ್ತೊಮ್ಮೆ ಒಳ್ಳೆಯ ಮಳೆ ಸುರಿದರೆ ಜಕ್ಕಲಮಡುಗು ಮತ್ತಷ್ಟು ಮೈದುಂಬುವುದು ಖಚಿತ.

ಜಕ್ಕಲಮಡುಗು ತುಂಬುವುದು ಚಿಕ್ಕಬಳ್ಳಾಪುರ ನಾಗರಿಕರಿಗೂ ಸಂತಸಕ್ಕೆ ಕಾರಣವಾಗುತ್ತದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಮೂಲವೇ ಈ ಜಲಾಶಯ. ಅಂತರ್ಜಲ ಅಭಿವೃದ್ಧಿಯ ಕಾರಣ ಚಿತ್ರಾವತಿ ಜಲಾಶಯ ನೂರಾರು ಹಳ್ಳಿಗಳ ಜನರಲ್ಲಿ ಬದುಕಿನ ಭರವಸೆ ಮೂಡಿಸಿವೆ.

ಜಿಲ್ಲೆಯಲ್ಲಿ ಜಲಪಾತಗಳು ಹೆಚ್ಚಿನ ಸಂಖ್ಯೆಯಲ್ಲಿಯೇನೂ ಇಲ್ಲ. ಚನ್ನಗಿರಿಯಲ್ಲಿನ ದೊಡ್ಡ ಜರ್ತಿ, ಕೇತೇನಹಳ್ಳಿ ಜಲಪಾತಗಳು ಪ್ರಮುಖವಾಗಿವೆ. ಬಹಳ ವರ್ಷಗಳ ನಂತರ ಈ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ದೊಡ್ಡ ಜರ್ತಿ, ಕೇತೇನಹಳ್ಳಿ ಜಲಪಾತಗಳು ಹರಿದು ವರ್ಷಗಳೇ ಆಗಿತ್ತು. ಜಲಪಾತಗಳಲ್ಲಿ ನೀರು ಹರಿಯುತ್ತಿರುವುದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ, ಕಟ್ಟೆಗಳಲ್ಲಿ ನೀರು ತುಂಬಿದೆ. ಹಳ್ಳಗಳು, ತೊರೆಗಳಲ್ಲಿ ಸಮೃದ್ಧವಾಗಿ ನೀರು ಹರಿಯುತ್ತಲೇ ಇದೆ. ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಹೊಂಡಗಳು ಮೈದುಂಬಿವೆ.

ತುಂಬಿದ ಚಿತ್ರಾವತಿ ಕಣಜ
ಬಾಗೇಪಲ್ಲಿ:
ಪಟ್ಟಣದ ಹೊರವಲಯದ ಚಿತ್ರಾವತಿ ಒಡ್ಡಿನಲ್ಲಿ ‌ಬಿದ್ದ ಮಳೆಯಿಂದ ಮೇಲ್ಸೇತುವೆ ಮೂಲಕ ಚಿತ್ರಾವತಿ ಕಣಜ ತುಂಬಿದೆ. ಪೋಷಕ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ.

ಪಟ್ಟಣದ ಹೊರವಲಯದಲ್ಲಿ ಚಿತ್ರಾವತಿ ಒಡ್ಡು ಇದೆ. ತುಂಬಿ ಹರಿದ ನೀರು ಸಂತೇಮೈದಾನ, ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಹರಿದು ಕಣಜಕ್ಕೆ ಸೇರುತ್ತದೆ. ಚಿತ್ರಾವತಿ ನದಿಯಲ್ಲಿ ಆಂಗ್ಲರು ಕಣಜ ನಿರ್ಮಿಸಿದ್ದಾರೆ. ಪಟ್ಟಣದ ಐತಿಹಾಸಿಕ ಭೈರವೇಶ್ವರ ದೇವಾಲಯದ ಮುಂದೆ ಇರುವ ಚಿತ್ರಾವತಿ ನದಿಯಲ್ಲಿ 1883ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಚೆಮ್ ಕೆನ್ ಸಿಂಗ್ ಟನ್ ಎಂಬ ಎಂಜಿನಿಯರ್ ಚಿತ್ರಾವತಿ ಕಣಜ ನಿರ್ಮಿಸಿದ್ದಾರೆ.

ಚಿತ್ರಾವತಿ ಕಣಜ ತುಂಬಿ ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ನೀರು ಸೇರಲಿದೆ. ಕಣಜ ತುಂಬಿದ ನೀರು ವ್ಯರ್ಥವಾಗದಂತೆ ಪೋಷಕ ಕಾಲುವೆಗಳ ಮೂಲಕ ಕೆರೆಗಳಿಗೆ ಹರಿಸಲಾಗಿದೆ. ಕಳೆದ 10 ದಿನಗಳಿಂದ ಬೀಳುತ್ತಿರುವ ಮಳೆಗೆ ಚಿತ್ರಾವತಿ ಕಣಜದಲ್ಲಿ ನೀರು ಸಂಗ್ರಹ ಆಗಿದೆ. ಇದರಿಂದ ಅಂರ್ತಲ ಮರುಪೂರಣ ಆಗಿದೆ. ಅಂತರ್ಜಲ ವೃದ್ಧಿ ಆಗಿ ತೆರೆದಬಾವಿ ಹಾಗೂ ಕೊಳವೆಬಾವಿಗಳಲ್ಲಿ ಜಲಮರುಪೂರಣ ಆಗಿದೆ.

‘ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚುವರಿ ಮಳೆ ಆಗಿದೆ. ಚಿತ್ರಾವತಿ ಕಣಜ, ಮೇಲ್ಸೇತುವೆ ಹರಿಯುತ್ತಿರುವುದರಿಂದ ಸದ್ಯಕ್ಕೆ ರೈತರಿಗೆ ಉಪಯೋಗ ಇಲ್ಲ. ಕಣಜ ಹಾಗೂ ಪೋಷಕ ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು. ಸಣ್ಣನೀರಾವರಿ ಇಲಾಖೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿ, ಚಿತ್ರಾವತಿ ನದಿಯ ಇಕ್ಕೆಲಗಳಲ್ಲಿ ಒತ್ತುವರಿ ತೆರವುಗೊಳಿಸಿ, ಸ್ವಚ್ಛತೆ ಮಾಡಬೇಕು’ ಎಂದು ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ರಘುನಾಥರೆಡ್ಡಿ ತಿಳಿಸಿದರು.

ಮೈದುಂಬಿದ ಪಿನಾಕಿನಿ
ಗೌರಿಬಿದನೂರು:
ದಶಕಗಳ ಬಳಿಕ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕೆರೆ, ಕುಂಟೆ, ನದಿ, ಹಳ್ಳಕೊಳ್ಳಗಳು ಮಳೆ ನೀರಿನಿಂತ ಆವೃತವಾಗಿವೆ. ಒಂದೂವರೆ ದಶಕದಿಂದ ತುಂಬಿ‌ಹರಿಯದ ತಾಲ್ಲೂಕಿನ ಜೀವನಾಡಿಯಾಗಿದ್ದ ಉತ್ತರ ಪಿನಾಕಿನಿ ನದಿಯಲ್ಲಿ ನೀರು ಹರಿದಿದೆ.

ಗೋಕುಂಟೆ, ಚೆಕ್ ಡ್ಯಾಂ ಸೇರಿದಂತೆ ಇನ್ನಿತರ ಜಲಮೂಲಗಳು ಭರ್ತಿಯಾಗಿವೆ. ಆರಂಭದ ದಿನಗಳಲ್ಲೆ ಉಳುಮೆ ಮಾಡಿ ಭೂಮಿಯನ್ನು ಹಸನು ಮಾಡಿಕೊಂಡಿದ್ದ ರೈತರು ಇತ್ತೀಚಿಗೆ ಬಿದ್ದ ಉತ್ತಮ‌ ಮಳೆ ಪರಿಣಾಮವಾಗಿ ಬಿತ್ತನೆ ಮುಗಿಸಿದ್ದಾರೆ. ದಶಕಗಳಿಂದ ಬತ್ತಿ ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ಹೊಸ ನೀರು ಬರುತ್ತಿದೆ.

ದಶಕಗಳ ಬಳಿಕ ಪಿನಾಕಿನಿ ನದಿಯಲ್ಲಿ ನೀರು ಹರಿದ ಕಾರಣ ನಗರದ ಸಮೀಪದಲ್ಲಿನ ಕಿಂಡಿ ಅಣೆಕಟ್ಟು ಬಳಿ ನೀರು ತಲುಪಿದೆ. ಜನರು ತಂಡೋಪತಂಡವಾಗಿ ಭೇಟಿ ಮಾಡಿ ವೀಕ್ಷಿಸುತ್ತಿದ್ದಾರೆ. ನಗರದ ಜನರ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬ ವಿಶ್ವಾಸವಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಕೆರೆ ಕುಂಟೆಗಳು ತುಂಬಿ ಕೋಡಿ ಹರಿದಿವೆ.

ದಶಕಗಳ ಬಳಿಕ ಉತ್ತರ ಪಿನಾಕಿನಿ ನದಿ ತುಂಬಿ ಹರಿದಿರುವುದನ್ನು ಕಂಡು ಸಂತೋಷವಾಗಿದೆ. ಆದರೆ ನದಿಯಲ್ಲಿ ಮಳೆ ನೀರಿನ ಹರಿವು ಒಂದೇ ದಿನಕ್ಕೆ ಸೀಮಿತವಾಗಿದೆ. ಆದರೂ ಈ ಭಾಗದಲ್ಲಿ ನದಿ ಪಾತ್ರದಲ್ಲಿನ ಕೊಳವೆ ಬಾವಿಗಳಿಗೆ ಮರುಜೀವ ಬಂದು ಅಂತರ್ಜಲದ ಮಟ್ಟ ಹಂತಹಂತವಾಗಿ ‌ವೃದ್ಧಿ ಆಗುತ್ತವೆ ಎಂದು ನಂದಿಗಾನಹಳ್ಳಿ ರೈತ ರವಿಕುಮಾರ್ ಹೇಳಿದರು.

ಬೇಸಿಗೆಯಲ್ಲಿ ಸಮಸ್ಯೆ ಎದುರಾಗದು
ಶಿಡ್ಲಘಟ್ಟ:
ತಾಲ್ಲೂಕಿನಲ್ಲಿ ಕುಂಟೆಗಳು, ಚೆಕ್ ಡ್ಯಾಂಗಳು, ಕೆರೆಗಳು ತುಂಬಿವೆ. ಹಲವಾರು ಗೋಕುಂಟೆಗಳ ಹೂಳು ತೆಗೆದಿರುವುದರಿಂದಾಗಿ ಅದರಲ್ಲಿ ಈಗ ನೀರು ನಿಂತಿದೆ. ಅಂತರ್ಜಲ ವೃದ್ಧಿಗೆ ಅನುಕೂಲವಾಗಿದೆ.

ಎಫ್.ಇ.ಎಸ್ ಸಂಸ್ಥೆಯಿಂದ ಹಲವೆಡೆ ಗ್ರಾಮ ಪರಿಸರ ಸಮಿತಿ ರಚಿಸಿಕೊಂಡು ಕುಂಟೆಗಳು ಹಾಗೂ ಚೆಕ್‌ಡ್ಯಾಂ ಗಳಲ್ಲಿನ ಹೂಳೆತ್ತುವ ಕಾರ್ಯ ನಡೆದಿತ್ತು. ಅದರ ಫಲವಾಗಿ ಅವುಗಳಲ್ಲಿ ನೀರು ತುಂಬಿದೆ. ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತೇಕಹಳ್ಳಿಯಲ್ಲಿ ಎರಡು ಗೋಕುಂಟೆಗಳು, ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಬೂದಾಳ, ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಸುಗಟೂರು, ಅಬ್ಲೂಡು ಗ್ರಾಮ ಪಂಚಾಯಿತಿಯ ತಾತಹಳ್ಳಿ, ಚಾಗೆ, ಆನೂರು ಗ್ರಾಮ ಪಂಚಾಯಿತಿಯ ಹಿತ್ತಲಹಳ್ಳಿಯಲ್ಲಿ ಎರಡು ಗೋಕುಂಟೆಗಳು, ಎ.ಹುಣಸೇನಹಳ್ಳಿ, ಹೊಸಪೇಟೆ ಗ್ರಾಮ ಪಂಚಾಯಿತಿಯ ಸುಂಡ್ರಹಳ್ಳಿ, ಕಲ್ಯಾಪುರ, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಅಂಬಿಗಾನಹಳ್ಳಿಯಲ್ಲಿ ಎರಡು ಗೋಕುಂಟೆಗಳು, ಅಮರಾವತಿ, ಗಂಭೀರನಹಳ್ಳಿ, ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕದಾಸೇನಹಳ್ಳಿ ಸೇರಿದಂತೆ ಹಲವೆಡೆ ಗೋಕುಂಟೆಗಳಲ್ಲಿ ನೀರು ತುಂಬಿಕೊಂಡಿವೆ ಎನ್ನುತ್ತಾರೆ ಎಫ್.ಇ.ಎಸ್.ಸಂಸ್ಥೆಯ ರಮೇಶ್.

ನರೇಗಾ ಯೋಜನೆಯಡಿ ರೂಪುಗೊಂಡ ಚೆಕ್‌ಡ್ಯಾಂಗಳು, ಕಲ್ಯಾಣಿಗಳು, ಕುಂಟೆಗಳು ಸಹ ನೀರಿನಿಂದ ತುಂಬಿವೆ. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಾಧಿಸದು ಎನ್ನುವುದು ರೈತರ ನುಡಿ.

ಮಳೆಯ ಆರ್ಭಟ ಕಮ್ಮಿ
ಚಿಂತಾಮಣಿ:
ಜಿಲ್ಲೆಯಲ್ಲಿ ಬಿರುಸು ಮಳೆಯಾಗುತ್ತಿದ್ದರೂ ತಾಲ್ಲೂಕಿನಲ್ಲಿ ಸಾಧಾರಣ ಮಳೆ ಆಗುತ್ತಿದೆ. ರೈತರ ಕೃಷಿ ಕೆಲಸಗಳಿಗೆ, ಬಿತ್ತನೆಗೆ ಅನುಕೂಲವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮುಂಗಾರು ಹಂಗಾಮಿನ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂಗಾರಿನಲ್ಲಿ ತಾಲ್ಲೂಕಿನ ಯಾವ ಕೆರೆ ಕುಂಟೆಗಳಿಗೂ ನೀರು ಬಾರದಿರುವುದು ಆತಂಕ ಮೂಡಿಸಿದೆ. ಕಳೆದ ವರ್ಷವೂ ಕೆರೆಗಳಿಗೆ ನೀರು ಬಂದಿರಲಿಲ್ಲ. ಈಗಲೂ ಕುಡಿಯು ನೀರಿನ ಆತಂಕ ಕಾಡುತಿದೆ. ನಗರದಲ್ಲಿ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಡಲಾಗುತ್ತಿದೆ. ಅನೇಕ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಈ ವರ್ಷವೂ ನೀರಿನ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ.

ಭಕ್ತರಹಳ್ಳಿ-ಅರಸೀಕೆರೆ ಹೊರತುಪಡಿಸಿ ತಾಲ್ಲೂಕಿನ ಯಾವ ಕೆರೆಯಲ್ಲೂ ನೀರಿಲ್ಲ. ಎಲ್ಲ ಕೆರೆಗಳು ಬರಿದಾಗಿವೆ. ಚಿಂತಾಮಣಿಗೆ ನೀರು ಪೂರೈಸುವ ಕನಂಪಲ್ಲಿ ಕೆರೆಯಲ್ಲಿ ಕಾಲು ಭಾಗ ನೀರಿದೆ. ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಮೂಲಗಳಿಲ್ಲ. ಅಂತರ್ಜಲ ತೀವ್ರವಾಗಿ ಕುಸಿದಿದೆ. ಪ್ರತಿವರ್ಷ ಮಳೆ ಕೊರತೆ ಕಾಡುತ್ತಿದೆ. ಬಿರುಸು ಮಳೆ ಸುರಿದು ಕೆರೆ ಕುಂಟೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.

_________

ಡಿ.ಎಂ.ಕುರ್ಕೆ ಪ್ರಶಾಂತ್,ಪಿ.ಎಸ್.ರಾಜೇಶ್,ಎ.ಎಸ್.ಜಗನ್ನಾಥ್, ಡಿ.ಜಿ.ಮಲ್ಲಿಕಾರ್ಜುನ್, ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT