ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಶೆಡ್ ಸಹಾಯಧನ: ಅರಿವು ಮೂಡಿಸಿ

ಪಶು ವೈದ್ಯಾಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಸೂಚನೆ
Last Updated 30 ಮೇ 2020, 15:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನರೇಗಾ ಯೋಜನೆ ಅಡಿ ಜಾನುವಾರುಗಳ ಶೆಡ್ ನಿರ್ಮಾಣದ ಸಹಾಯಧನದ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಬಳಸಿಕೊಳ್ಳುವಂತೆ ಪಶು ವೈದ್ಯಾಧಿಕಾರಿಗಳು ಅವರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.‌

ನಗರದ ಅಗಲಗುರ್ಕಿ ತೋಟಗಾರಿಕೆ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನುವಾರುಗಳ ಶೆಡ್ಡುಗಳ ನಿರ್ಮಾಣದ ಬಗ್ಗೆ ಅಧಿಕಾರಿಗಳ ಮೂಲಕ ರೈತರಲ್ಲಿ ಉತ್ತೇಜನ ನೀಡುವ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೊವೀಡ್-19 ಸೋಂಕು ಇರುವ ಕಾರಣ ರೈತರಿಗೆ ನರೇಗಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಲುಪುತ್ತಿಲ್ಲ. ಹಸು, ಮೇಕೆ, ಕುರಿ, ಹಂದಿ ಸೇರಿದಂತೆ ಇತರೆ ಜಾನುವಾರುಗಳಿಗೆ ಶೆಡ್ಡುಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಯೋಜನೆಯನ್ನು ಕೆಲವರು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪಶುವೈದ್ಯಾಧಿಕಾರಿಗಳು ಖುದ್ದು ರೈತರನ್ನು ಭೇಟಿ ಮಾಡಿ, ಯೋಜನೆಯ ಅನುಕೂಲ ಪಡೆದುಕೊಳ್ಳುವಂತೆ ಉತ್ತೇಜಿಸಬೇಕು‘ ಎಂದು ಹೇಳಿದರು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಈ ಯೋಜನೆಗೋಸ್ಕರ ಪ್ರತ್ಯೇಕ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ರೈತರು ಮತ್ತು ಜಾನುವಾರುಗಳಿವೆ. ಅವುಗಳಿಗೆ ಎಷ್ಟು ಶೆಡ್ಡುಗಳ ಅಗತ್ಯವಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು’ ಎಂದು ತಿಳಿಸಿದರು.

‘ಜಾನುವಾಗಳಿಗೆ ಶೆಡ್ಡು ನಿರ್ಮಾಣ ಮಾಡಬೇಕಾದರೆ ಆ ರೈತನ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ, ಅವರು ಫಲಾನುಭವಿಯಾಗಲು ಅರ್ಹನಾದರೆ ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗೂ 45 ದಿನದೊಳಗೆ ಶೆಡ್‌ಗಳ ನಿರ್ಮಾಣ ಮಾಡಬೇಕು’ ಎಂದರು.

‘ಪ್ರತಿ ಗ್ರಾಮಗಳಲ್ಲಿ ಇಂದಿಗೂ ಶೇ 40 ರಷ್ಟು ಮನೆಗಳಲ್ಲಿ ಮಾತ್ರ ಶೆಡ್‌ ಗೋಚರಿಸುತ್ತವೆ. ಉಳಿದಂತೆ ಹೈನುಗಾರಿಕೆ ಇದ್ದರೂ ಶೆಡ್ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ, ಅಧಿಕಾರಿಗಳು ತ್ವರಿತಗತಿಯಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು. ಪ್ರತಿ ತಿಂಗಳಿಗೊಮ್ಮೆ ಪ್ರಗತಿಯ ವರದಿಯನ್ನು ನೀಡಬೇಕು’ ಎಂದು ಹೇಳಿದರು.

‘ಪಶು ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಗ್ರಾಮದಲ್ಲಿರುವ ರೈತರಿಗೆ ನರೇಗಾ ಯೋಜನೆ ಸದ್ಭಳಕೆಯ ಬಗ್ಗೆ ಸ್ಫೂರ್ತಿದಾಯಕ ಮಾತುಗಳೊಂದಿಗೆ ಅವರಲ್ಲಿ ಅರಿವು ಮೂಡಿಸಿ, ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಉತ್ತೇಜಿಸಬೇಕು’ ಎಂದು ತಿಳಿಸಿದರು.

ಪಶು ಪಾಲನಾ ಮತ್ತು ಪಶು ವೈದ್ಯಾದೀಕಾರಿ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಸಿ. ನಾಗರಾಜ್, ಚಿಕ್ಕಬಳ್ಳಾಪುರ ಸಹಾಯಕ ನಿರ್ದೇಶಕ ಡಾ.ಮಧುರನಾಥ ರೆಡ್ಡಿ, ಚಿಂತಾಮಣಿಯ ಸಹಾಯಕ ನಿರ್ದೇಶಕ ಡಾ. ಭೈರಾರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT