ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ರಾಜಭವನ ಚಲೋ

ಕೇಂದ್ರ, ರಾಜ್ಯ ಸರ್ಕಾರದ ನೀತಿ ವಿರುದ್ಧ ಶಾಸಕ ಕೃಷ್ಣ ಬೈರೇಗೌಡ ವಾಗ್ದಾಳಿ
Last Updated 19 ಜನವರಿ 2021, 2:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಿಸಾನ್ ಅಧಿಕಾರ ದಿವಸ್’ ಅಂಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂ ಸುಧಾರಣೆ ವಿದ್ಯುತ್ ಬಿಲ್, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜ. 20ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ವತಿಯಿಂದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ರಾಜಭವನ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ಶ್ರೀಮಂತರು, ಉದ್ಯಮಿಗಳ ಪರ ಕೆಲಸ ಮಾಡುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಬೀದಿಪಾಲು ಮಾಡುತ್ತಿದೆ. ಆಧುನೀಕರಣ ಹೆಸರಲ್ಲಿ ದೇಶವನ್ನೇ ಮಾರಾಟಕ್ಕೆ ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ವ್ಯವಸಾಯ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮಾರಲು ಪ್ರಯತ್ನ ನಡೆಸುತ್ತಿದೆ. ಕೇಂದ್ರದ ಧೋರಣೆ ವಿರುದ್ಧ ದೆಹಲಿಯಲ್ಲಿ ಲಕ್ಷಾಂತರ ರೈತರು ಕೆಚ್ಚಿನಿಂದ ನಡೆಸುತ್ತಿರುವ ಹೋರಾಟವನ್ನು ಹಕ್ಕಿತ್ತುವ ಷಡ್ಯಂತ್ರ ನಡೆಯುತ್ತಲೇ ಇದೆ. ರೈತರ ಹೋರಾಟದಲ್ಲಿ 70 ಜನ ಸತ್ತರೂ ಹೃದಯವಿಲ್ಲದ ಬಿಜೆಪಿಯವರು ಸುಳ್ಳುಗಳ ಮೂಲಕ ಹೋರಾಟಗಾರರ ಮೇಲೆ ಹಲ್ಲೆಗೆ ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಈ ಹಿಂದೆ ಕಾಂಗ್ರೆಸ್‌ ಜಾರಿಗೆ ತಂದ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ರೈತರಿಗೆ ಶೇಕಡ 27 ಹೆಚ್ಚಿಗೆ ಆದಾಯ ದೊರೆತಿದೆ ಎಂದುನೀತಿ ಆಯೋಗವೇ ಹೇಳಿದೆ. ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಸಂಪೂರ್ಣ ಕಾಯ್ದೆಗೆ ತಿದ್ದುಪಡಿ ತಂದು ಎಪಿಎಂಸಿಗಳನ್ನೇ ಇಲ್ಲದಂತೆ ಮಾಡಲು ಭೂಮಿಕೆ ತಯಾರು ಮಾಡಲಾಗುತ್ತಿದೆ’ ಎಂದರು.

‘2020ರಲ್ಲಿ ದೇಶದಲ್ಲಿ 12 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣಪುಟ್ಟ 30ರಷ್ಟು ಕಂಪನಿಗಳು ಮುಚ್ಚಿಹೋಗಿವೆ. ವ್ಯಾಪಾರ-ವಹಿವಾಟು ಬಿದ್ದುಹೋಗಿ, ದೇಶದ ಶೇಕಡ 90ರಷ್ಟು ಜನ ಬಡವರಾಗಿದ್ದಾರೆ. ಆದರೆ, ಅಂಬಾನಿ, ಅದಾನಿ ಅವರ ಆಸ್ತಿಗಳು ಮಾತ್ರ ಏರಿಕೆ ಆಗುತ್ತಿವೆ’ ಎಂದು ಹೇಳಿದರು.

‘ಬಿಜೆಪಿಯವರು ಈಗಾಗಲೇ ಖಾಸಗೀಕರಣದ ಹೆಸರಿನಲ್ಲಿ ದೇಶದಲ್ಲಿ ಎಲ್ಲವನ್ನೂ ಅಂಬಾನಿ, ಅದಾನಿ ಅವರಿಗೆ ಕೊಡುತ್ತ ಅರ್ಥ ವ್ಯವಸ್ಥೆ ಹದಗೆಡಿಸಿದ್ದಾರೆ. ಇದೀಗ ರೈತರ ಜುಟ್ಟನ್ನು ಅವರ ಕೈಗೆ ನೀಡಲು ಹೊರಟಿದ್ದಾರೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ’ ಎಂದು ತಿಳಿಸಿದರು.

‘ಕನಿಕರವಿಲ್ಲದ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಿ, ರೈತರ ಹೋರಾಟ ಬೆಂಬಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ರಾಜಭವನ ಚಲೋ ನಡೆಸುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ರೈತರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಧರ್ಮ. ಮುಖಂಡರು ಎಲ್ಲ ಕ್ಷೇತ್ರಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರು ಚಲೋಗೆ ಬರಲು ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ಶಾಸಕರಾದ ವಿ. ಮುನಿಯಪ್ಪ, ಎನ್‌.ಎಚ್‌. ಶಿವಶಂಕರರೆಡ್ಡಿ, ಎಸ್‌.ಎನ್. ಸುಬ್ಬಾರೆಡ್ಡಿ, ಮಾಜಿ ಶಾಸಕ ಎಸ್‌.ಎಂ. ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT