ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 10 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Last Updated 31 ಅಕ್ಟೋಬರ್ 2019, 12:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪ್ರಸ್ತಕ ಸಾಲಿನ ‘ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಈ ಬಾರಿ 10 ಸಾಧಕರನ್ನು ಜಿಲ್ಲಾಡಳಿತ ಆಯ್ಕೆ ಮಾಡಿದೆ.

ಚಿಕ್ಕಬಳ್ಳಾಪುರ ನಗರದ ಪ್ರಕಾಶ್‌ (ನ್ಯಾಯಾಂಗ ಸೇವೆ), ಬಿ.ಸುಭಾನ್ (ಪರಿಸರ), ಚಿಂತಾಮಣಿ ತಾಲ್ಲೂಕಿನ ಎಸ್‌.ಸಿ.ನರಸಿಂಹಪ್ಪ (ಜಾನಪದ ಕಲೆ), ಎಂ.ಎಸ್.ನಾಗೇಂದ್ರ ಪ್ರಸಾದ್ (ಪತ್ರಿಕೋದ್ಯಮ), ರಾಮಣ್ಣ (ಕಲೆ ಮತ್ತು ಸಂಸ್ಕೃತಿ), ಗೌರಿಬಿದನೂರು ತಾಲ್ಲೂಕಿನ ಎನ್.ವೆಂಕಟೇಶ್‌ ಬಾಬು (ಕ್ರೀಡೆ), ಪ್ರಭಾ ನಾರಾಯಣಗೌಡ (ಸಾಹಿತ್ಯ), ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕೆ.ಸುರೇಶ್‌ (ಕೃಷಿ), ಬಿ.ಆರ್.ಅನಂತಕೃಷ್ಣ (ಸಮಾಜಸೇವೆ) ಮತ್ತು ಬಾಗೇಪಲ್ಲಿ ತಾಲ್ಲೂಕಿನ ವಲಿಬಾಷಾ (ಸಾಹಿತ್ಯ) ಅವರು 2019ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಲಿದ್ದಾರೆ.

ಸರ್ಕಾರಿ ಆಸ್ತಿ ಉಳಿಸಿದ ಪ್ರಕಾಶ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2014ರಿಂದ ಜಿಲ್ಲಾ ಸರ್ಕಾರಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್‌ ಅವರು ಕಳೆದ ಐದು ವರ್ಷಗಳಲ್ಲಿ 50 ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಪ್ರತಿನಿಧಿಸಿ, 48 ಪ್ರಕರಣಗಳಲ್ಲಿ ಗೆಲುವು ಸಾಧಿಸುವ ಮೂಲಕ ಖಾಸಗಿ ವ್ಯಕ್ತಿಗಳಿಂದ ನೂರಾರು ಕೋಟಿ ಮೌಲ್ಯದ ಸುಮಾರು 150ಕ್ಕೂ ಅಧಿಕ ಎಕರೆ ಸರ್ಕಾರಿ ಆಸ್ತಿಯನ್ನು ಉಳಿಸುವಂತಹ ಮಹತ್ವದ ಕೆಲಸ ಮಾಡಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಲ ಖಾಸಗಿ ವ್ಯಕ್ತಿಗಳು ನಗರದಲ್ಲಿರುವ ಬಸ್‌ ನಿಲ್ದಾಣ, ನ್ಯಾಯಾಲಯ, ಹಳೆಯ ಸರ್ಕಾರಿ ಆಸ್ಪತ್ರೆ, ವಲಯ ಅರಣ್ಯ ಅಧಿಕಾರಿ ಕಚೇರಿ, ಬಸಪ್ಪ ಛತ್ರ, ಅಗಲಗುರ್ಕಿ ಸರ್ಕಾರಿ ಗುಂಡುತೋಪು ಆಸ್ತಿ, ಸೂಲಾಲಪ್ಪ ದಿನ್ನೆಯಲ್ಲಿರುವ ಅರಣ್ಯ ಇಲಾಖೆ ಆಸ್ತಿ, ಅಂಗರೇಖನಹಳ್ಳಿ ಅರಣ್ಯ ಜಾಗ ಕಬಳಿಸಲು ಮುಂದಾಗಿದ್ದರು. ಪ್ರಕಾಶ್‌ ಅವರ ಪರಿಶ್ರಮದ ಫಲವಾಗಿ ಇವತ್ತು ಈ ಎಲ್ಲ ಸ್ವತ್ತುಗಳು ಸರ್ಕಾರಿ ಆಸ್ತಿಯಾಗಿ ಉಳಿದಿವೆ.

ಪ್ರಕಾಶ್‌ ಅವರು 2015 ರಿಂದ 2017ರ ವರೆಗೆ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ‘ನನ್ನ ಪ್ರಾಮಾಣಿಕತೆ ಗುರುತಿಸಿದ್ದಕ್ಕೆ, ಈ ಪ್ರಶಸ್ತಿಗೆ ಭಾಜನನಾಗಲು ನನ್ನೊಂದಿಗೆ ಹೆಗಲು ನೀಡಿದ ಎಲ್ಲರಿಗೂ ಧನ್ಯವಾಗಳು’ ಎನ್ನುತ್ತಾರೆ.

ಮಾದರಿ ಪರಿಸರ ಪ್ರೇಮಿ ಸುಭಾನ್

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟದ ನಿವಾಸಿಯಾಗಿರುವ ಸುಭಾನ್ ಅವರು ವೃತ್ತಿಯಲ್ಲಿ ಆಟೊ ಚಾಲಕರಾದರೆ, ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿಯಾಗಿದ್ದಾರೆ.

ಕಳೆದ ಆರು ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವುದನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬರುತ್ತಿರುವ ಸುಭಾನ್, ಈವರೆಗೆ ಸುಮಾರು ಎಂಟು ಸಾವಿರ ಸಸಿಗಳನ್ನು ನೆಟ್ಟು, ಸುಮಾರು ಮೂರು ಸಾವಿರ ಸಸಿಗಳನ್ನು ವಿದ್ಯಾರ್ಥಿಗಳು, ನಾಗರಿಕರು, ಶಾಲಾ, ಕಾಲೇಜುಗಳಿಗೆ ಉಚಿತವಾಗಿ ವಿತರಿಸಿದ್ದಾರೆ.

ಅವಿವಾಹಿತರಾಗಿರುವ ಇವರು ತಮ್ಮ ದುಡಿಮೆಯ ಆದಾಯದ ಶೇ 25 ರಷ್ಟು ಭಾಗವನ್ನು ಪರಿಸರ ಉಳಿವಿಗಾಗಿ ಬಳಸುತ್ತಾರೆ. ವರೆಗೆ ಸುಮಾರು ₹3 ಲಕ್ಷಕ್ಕಿಂತ ಹೆಚ್ಚು ಹಣವನ್ನು ತಮ್ಮ ಪರಿಸರ ಪ್ರೇಮಕ್ಕಾಗಿಯೇ ವ್ಯಯಿಸಿದ್ದಾರೆ.

ನಗರದ ರಸ್ತೆಗಳು, ಬಸ್‌ ನಿಲ್ದಾಣ, ಆಸ್ಪತ್ರೆ, ಮಾರುಕಟ್ಟೆ, ಕ್ರೀಡಾಂಗಣ, ದೇವಸ್ಥಾನಗಳು ಮಾತ್ರವಲ್ಲದೆ ತಾಲ್ಲೂಕಿನ ವಿವಿಧ ಗ್ರಾಮಗಳ ಶಾಲಾ, ಕಾಲೇಜುಗಳ ಆವರಣದಲ್ಲಿ ಸುಭಾನ್ ಗಿಡಗಳನ್ನು ನೆಟ್ಟು, ಮಕ್ಕಳಿಗೆ, ನಾಗರಿಕರಿಗೆ ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ಕಿವಿಮಾತು ಹೇಳಿ ಬಂದಿದ್ದಾರೆ. ರಾಷ್ಟ್ರೀಯ ದಿನಾಚರಣೆಗಳು, ಮಹನೀಯರ ಜಯಂತಿಗಳು, ಎಲ್ಲ ಧರ್ಮದವರ ಹಬ್ಬಗಳನ್ನು ಇವರು ಗಿಡ ನೆಡುವ ಮೂಲಕ ಆಚರಿಸುತ್ತ ಬಂದಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT