ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಮನೆಗಳಲ್ಲಿಯೇ ರಂಜಾನ್‌ ಪ್ರಾರ್ಥನೆ

ಕೊರೊನಾ ಸೋಂಕಿನ ಭೀತಿಗೆ ಬಾಗಿಲು ಮುಚ್ಚಿದ ಮಸೀದಿಗಳು, ಲಾಕ್‌ಡೌನ್‌ ನಡುವೆ ಉಪವಾಸ ಆರಂಭ
Last Updated 27 ಏಪ್ರಿಲ್ 2020, 4:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಸ್ಲಿಮರ ರಂಜಾನ್‌ ಮಾಸ ಶನಿವಾರದಿಂದ ಪ್ರಾರಂಭವಾಗಿದ್ದು, ಕೊರೊನಾ ಕರಿನೆರಳಿನ ನಡುವೆಯೂ ತಿಂಗಳ ಉಪವಾಸ ಆರಂಭಿಸಿದ್ದಾರೆ. ಮುಂದಿನ ಒಂದು ತಿಂಗಳು, ಅಂದರೆ ಮೇ 24ರ ವರೆಗೆ ಉಪವಾಸ ಆಚರಣೆ ಮುಂದುವರೆಯಲಿದೆ.

ಲಾಕ್‌ಡೌನ್‌, ಕೊರೊನಾ ಸೋಂಕು ಹರಡುವ ಭೀತಿಯ ಕಾರಣಕ್ಕೆ ಈ ಬಾರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶ ನೀಡಿಲ್ಲ. ಹೀಗಾಗಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವ ಅನಿವಾರ್ಯತೆ ನಡುವೆಯೇ ರೋಜಾ ನಡೆಯುತ್ತಿದೆ.

ಎಲ್ಲ ಹಬ್ಬಗಳಂತೆ ರಂಜಾನ್‌ ಮೇಲೆ ಕೂಡ ಕೊರೊನಾ ಕರಿನೆರಳು ಕಾಣಿಸಿಕೊಂಡಿದ್ದು, ರಂಜಾನ್‌ ಮಾಸ ಆರಂಭದ ಮುನ್ನ ನಗರದಲ್ಲಿ, ಅದರಲ್ಲೂ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಉತ್ಸಾಹದ ವಾತಾವರಣ ಈ ಬಾರಿ ಕಾಣಿಸುತ್ತಿಲ್ಲ.

ಮೊದಲ ದಿನದ ಉಪವಾಸವನ್ನು ಬಹುತೇಕರು ತಮ್ಮ ಮನೆಗಳಲ್ಲೇ ಆಚರಿಸಿದರು. ನಸುಕಿನ ಫಜರ್‌ ನಮಾಜ್‌ ಅನ್ನು ವಾಸಸ್ಥಳದ ಕೋಣೆಗಳಲ್ಲೇ ಮಾಡಿದರು. ಲಾಕ್‌ಡೌನ್‌ ಇಲ್ಲದಿದ್ದರೆ, ಬಹುತೇಕರು ಈ ನಮಾಜ್‌ ಅನ್ನು ಹತ್ತಿರದ ಮಸೀದಿಗೆ ಹೋಗಿ ಮಾಡುತ್ತಿದ್ದರು. ಈ ಬಾರಿ ಆ ಸೌಭಾಗ್ಯವಿಲ್ಲ ಎಂದು ಮುನ್ಸಿಫಲ್‌ ಬಡಾವಣೆ ನಿವಾಸಿ ಮೊಹಮ್ಮದ್ ಜಿಲಾನಿ ಹೇಳಿದರು.

ಮುಂಜಾವಿನ ಸಹರಿಯ ಘೋಷಣೆಗಳು ಸಹ ಮಸೀದಿಯ ಧ್ವನಿವರ್ಧಕಗಳಲ್ಲಿ ಹೃಸ್ವವಾಗಿಯೇ ಮೊಳಗಿದವು. ಅಕ್ಕಪಕ್ಕದ ಬಂಧು–ಬಾಂಧವರನ್ನು ಮುಂಜಾನೆ ಎಬ್ಬಿಸಿ, ಲವಲವಿಕೆಯಿಂದ ಖಾದ್ಯಗಳನ್ನು ತಯಾರಿಸುವ ಪರಿಪಾಠಕ್ಕೆ ಕೊಂಚ ಬ್ರೇಕ್‌ ಬಿದ್ದಂತೆ ಕಾಣುತ್ತಿತ್ತು. ಸಹರಿಯ ವೇಳೆ ಮಸೀದಿಗಳಲ್ಲಿ ಮೊಳಗುತ್ತಿದ್ದ ನಾಥ್‌ಗಳೂ (ಪ್ರವಾದಿಯ ಸ್ತುತಿಗೀತೆ) ಈ ಬಾರಿ ಕೇಳಿಸುತ್ತಿಲ್ಲ.

ಇಫ್ತಾರ್‌ಗೆ (ಉಪವಾಸ ತೊರೆಯುವ ಸಮಯ) ವೈವಿಧ್ಯಮಯ ಭಕ್ಷ್ಯಗಳನ್ನು ಸಿದ್ಧಪಡಿಸಲು ಬೇಕಾದ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆ, ಅಂಗಡಿಗಳಿಗೆ ದಾಂಗುಡಿ ಇಡುವುದು ಈ ಹಿಂದೆ ಸಾಮಾನ್ಯವಾಗಿತ್ತು. ಈ ಬಾರಿ ಆ ಖರೀದಿಯ ಭರಾಟೆ ಇಲ್ಲವಾಗಿದೆ.

ಇಫ್ತಾರ್‌ ಕೂಟಗಳು ಇಲ್ಲ: ರಂಜಾನ್‌ ತಿಂಗಳಲ್ಲಿ ಮಸೀದಿಗಳು ಅಲ್ಲದೆ ಕೆಲವೆಡೆ ಇಫ್ತಾರ್‌ ಕೂಟಗಳನ್ನು ಆಯೋಜಿಸಲಾಗುತ್ತದೆ. ಉಪವಾಸವನ್ನು ಸಾಮೂಹಿಕವಾಗಿ ತೊರೆಯಲು ಈ ಏರ್ಪಾಡು ಮಾಡಲಾಗುತ್ತಿತ್ತು. ಆದರೆ ಈಗ ನಿರ್ಬಂಧ ಇರುವುದರಿಂದ ಶನಿವಾರ ಎಲ್ಲೂ ಇಫ್ತಾರ್‌ ಕೂಟ ಆಯೋಜನೆ ಕಂಡುಬರಲಿಲ್ಲ.

ದಿನದ ಐದು ಹೊತ್ತಿನ ನಮಾಜ್‌ ಅಲ್ಲದೆ ರಂಜಾನ್‌ ಮಾಸದ ರಾತ್ರಿ ವೇಳೆ ಮಸೀದಿಗಳಲ್ಲಿ ವಿಶೇಷ ನಮಾಜ್ (ತರಾವೀಹ್‌) ಇರುತ್ತದೆ. ಈ ಬಾರಿ ವಿಶೇಷ ನಮಾಜ್‌ ಮನೆಗೆ ಸೀಮಿತವಾಗಿದೆ.

ಮಸೀದಿಗಳಲ್ಲಿ ಪ್ರಾರ್ಥನೆ ಮಾಡಬಾರದು ಎಂಬ ಸೂಚನೆ ಇದೆ. ಹಾಗಾಗಿ ಈ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಜರುಗಿಸಲು ನಗರದ ಬಹುತೇಕ ಮಸೀದಿಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT