ಶುಕ್ರವಾರ, ನವೆಂಬರ್ 15, 2019
20 °C

ವಿಡಿಯೊ | ಕಾಂಗ್ರೆಸ್‌ ಶಾಸಕ ಶಿವಶಂಕರ ರೆಡ್ಡಿ ಕೈ ಕತ್ತರಿಸುವೆ ಎಂದ ಬಿಜೆಪಿ ನಾಯಕ

Published:
Updated:

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಸಭೆ ಚುನಾವಣೆ ಪ್ರಚಾರದ ವೇಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎನ್.ಎಂ.ರವಿನಾರಾಯಣ ರೆಡ್ಡಿ ಅವರು ‘ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಅವರ ಕೈ ಕತ್ತರಿಸುತ್ತೇವೆ’ ಎಂದಿರುವ‌ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಎಡೆ ಮಾಡಿದೆ.

ಇತ್ತೀಚೆಗಷ್ಟೇ ಶಿವಶಂಕರರೆಡ್ಡಿ ಅವರು ಮಂಚೇನಹಳ್ಳಿ ತಾಲ್ಲೂಕು ರಚನೆ ವಿಚಾರವಾಗಿ ಮಾತನಾಡುತ್ತ ನನ್ನ ಕ್ಷೇತ್ರದಲ್ಲಿ ಕೈ ಹಾಕಿದವರ ಕೈ ಕತ್ತರಿಸುತ್ತೇನೆ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ವಿರುದ್ಧ ಗುಡುಗಿದ್ದರು.

ಇದನ್ನೂ ಓದಿ: ರಕ್ತಕ್ರಾಂತಿಯ ಎಚ್ಚರಿಕೆ ನೀಡಿದ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ

ಅದಕ್ಕೆ ಬುಧವಾರ ಸಂಜೆ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿರುವ ರವಿನಾರಾಯಣ ರೆಡ್ಡಿ, ‘ನಗರಸಭೆ ವ್ಯಾಪ್ತಿಯ ನದಿಗಡ್ಡೆ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸಂತೆ ಮೈದಾನದಲ್ಲಿ ಹಾಗೂ  ನಗರಸಭೆ ವ್ಯಾಪ್ತಿಯ ಬಡವರ ಮನೆಗಳ ಮೇಲೆ ಕೈ ಹಾಕಿದರೆ ಶಾಸಕರ ಕೈ ಕತ್ತರಿಸುವುದು ನಾನೇ’ ಎಂದು ಹೇಳಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

‘ಸುಧಾಕರ್ ಅವರಿಂದ ಶಿವಶಂಕರ ರೆಡ್ಡಿ ಕೈ ಕತ್ತರಿಸುವ ಕೆಲಸ ಆಗುವುದಿಲ್ಲ. ಅದು ನನ್ನಿಂದ ಆಗುತ್ತದೆ. ಈ ಹಿಂದೆಯೇ ಅವರ ಎರಡೂ ಕೈ ಮುರಿದು ನಮ್ಮ ಶಕ್ತಿ ಏನೆಂದು ತೋರಿಸಿದ್ದೆವೆ’ ಎಂದು ರವಿನಾರಾಯಣ ರೆಡ್ಡಿ ಮಾತನಾಡಿರುವುದು, ರಾಜಕೀಯ ಸಂಘರ್ಷಕ್ಕೆ ಎಡೆ ಮಾಡುವ ಸುಳಿವು ನೀಡಿದೆ.

ಪ್ರತಿಕ್ರಿಯಿಸಿ (+)