ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ: ಸಹಿ ಹಾಕದಂತೆ ಒತ್ತಾಯ

ಜಿಲ್ಲಾಡಳಿತ ಭವನದ ಎದುರು ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ
Last Updated 31 ಅಕ್ಟೋಬರ್ 2019, 11:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ದ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಮಾಡಬಾರದು ಎಂದು ಒತ್ತಾಯಿಸಿ ಗುರುವಾರ ರೈತ ಸಂಘದ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಹಾಲಿನ ಕ್ಯಾನ್‌ಗಳನ್ನು ತಲೆ ಮೇಲೆ ಇಟ್ಟುಕೊಂಡು ನಗರದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಭವನದ ಎದುರು ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದಿಂದ ನಮ್ಮ ದೇಶದ ಕೃಷಿ ಮತ್ತು ಆಹಾರ ಕ್ಷೇತ್ರ ತುಂಬಾ ಸಂಕಷ್ಟಕ್ಕೆ ಸಿಲುಕಲಿದೆ. ಈ ಒಪ್ಪಂದದಿಂದ ನಮ್ಮ ದೇಶದ ಕೋಟ್ಯಂತರ ಸಣ್ಣ ರೈತರಿಗೆ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ತೀವ್ರ ಅಪಾಯ ಒದಗಲಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಬಿಕ್ಕಟ್ಟಿನಿಂದ ಅನೇಕ ಬ್ಯಾಂಕುಗಳು ದಿವಾಳಿಯಾಗಿವೆ. ವಿದ್ಯಾವಂತ ಯುವಕರು ಉದ್ಯೋಗದಿಂದ ವಂಚಿತರಾಗಿ ಬೀದಿಗೆ ಬಂದಿದ್ದಾರೆ. ನೆಲ, ಜಲ, ಸೇವಾ ಕ್ಷೇತ್ರಗಳು ಶ್ರೀಮಂತರು, ಕಾರ್ಪೋರೇಟರ್ ಕಂಪನಿಗಳ ಹಿಡಿತಕ್ಕೆ ಸಿಲುಕುತ್ತಿವೆ’ ಎಂದು ಆರೋಪಿಸಿದರು.

‘ಮುಂದುವರಿದ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಸಹಾಯಧನವಿದೆ. ಯಾಂತ್ರಿಕ ಬೆಳೆ ಪದ್ಧತಿಗಳಿವೆ. ಆದ್ದರಿಂದ ಕಡಿಮೆ ಬೆಲೆಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಉತ್ಪನ್ನಗಳನ್ನು ತೆರಿಗೆ ಇಲ್ಲದೆ ಭಾರತಕ್ಕೆ ತಂದು ಸುರಿದು ಮಾರುಕಟ್ಟೆ ಮಾಡುವುದರಿಂದ ನಮ್ಮ ಸ್ಥಳೀಯ ಉತ್ಪನ್ನಗಳು ಬೆಲೆ ಕಳೆದುಕೊಳ್ಳಲಿವೆ. ಉದ್ಯೋಗಗಳು ಕಡಿತವಾಗಲಿವೆ. ಹೀಗಾಗಿ, ರೈತರಿಗೆ ಮಾರಕವಾಗುವ ಅವೈಜ್ಞಾನಿಕ ನೀತಿ ತಕ್ಷಣವೇ ಕೈ ಬಿಡಬೇಕು’ ಎಂದು ಆಗ್ರಹಿಸಿದರು.

‘ಭಾರತೀಯ ಹಾಲಿನ ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದ ಅಡಿ ತಂದು ವಿದೇಶಗಳಿಂದ ಹಾಲಿನ ಉತ್ಪನ್ನಗಳನ್ನು ಆಮದು ಮಾಡಲು ಅವಕಾಶ ಮಾಡಿಕೊಟ್ಟರೆ ದೇಶದ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಪಿ.ರಾಮನಾಥ್ ಮಾತನಾಡಿ, ‘ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದಿಂದ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶೂನ್ಯವಾಗಲಿದೆ. ದೇಶೀಯ ಉತ್ಪನ್ನಗಳ ಬದಲಿಗೆ ವಿದೇಶಿ ವಸ್ತುಗಳಿಗೆ ಸುಸಜ್ಜಿತ ಮಾರುಕಟ್ಟೆಗೆ ಅವಕಾಶ ಸಿಗಲಿದೆ. ವಿದೇಶಿ ಹೂಡಿಕೆದಾರರ ಪ್ರಭಾವದಿಂದ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಸಂಚಾಲಕರಾದ ಲಕ್ಷ್ಮಣ ರೆಡ್ಡಿ, ಉಮಾ, ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಿಕಲ್ ವೇಣು, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕ ಅಧ್ಯಕ್ಷ ಎಂ.ರಾಮಾಂಜಿನಪ್ಪ, ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಹರೆಡ್ಡಿ, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷ ದಪರ್ತಿ ಮುರಳಿ, ಚಿಂತಾಮಣಿ ತಾಲ್ಲೂಕು ಘಟಕದ ಅಧ್ಯಕ್ಷ, ಸೀಕಲ್ ರಮಣಾ ರೆಡ್ಡಿ, ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷ ಮಾಳಪ್ಪ, ಜಂಟಿ ಕಾರ್ಯದರ್ಶಿ ಸಿ.ವಿ.ಶ್ರೀನಿವಾಸ್, ಮುಖಂಡರಾದ ನಂಜುಂಡಪ್ಪ, ರಮಣ, ವೆಂಕಟೇಶ್, ನಾರಾಯಣಸ್ವಾಮಿ, ಗಂಗಾಧರ್, ಗೋಪಾಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT