ಸತ್ತ ಮೇಲಷ್ಟೇ ಅಧಿಕಾರಿಗಳು ಬರ್ತಾರೇನೋ?

7
3ನೇ ವಾರ್ಡ್‌ ವ್ಯಾಪ್ತಿಯ ಮನೆಗಳ ಶೌಚಾಲಯ ಚರಂಡಿಗೆ ಸಂಪರ್ಕ, ಅಧ್ವಾನಗೊಂಡ ಕಾಲುವೆಗಳಿಂದ ಜನ ಹೈರಾಣು

ಸತ್ತ ಮೇಲಷ್ಟೇ ಅಧಿಕಾರಿಗಳು ಬರ್ತಾರೇನೋ?

Published:
Updated:
ಚಿಕ್ಕಬಳ್ಳಾಪುರದ 3ನೇ ವಾರ್ಡ್‌ ವ್ಯಾಪ್ತಿಯ ಭಗತ್ ಸಿಂಗ್ ನಗರದ ಬಳಿ ಅಸ್ತಿತ್ವ ಕಳೆದುಕೊಂಡ ರಾಜ ಕಾಲುವೆ (ಎಡ ಚಿತ್ರ). ಎಂ.ಜಿ.ರಸ್ತೆಯಲ್ಲಿ ದರ್ಗಾ ಮೊಹಲ್ಲಾ ಪ್ರದೇಶದ ದಾರಿ ಬದಿ ಚರಂಡಿಯಲ್ಲಿ ಹರಿದು ಹೋಗಲಾಗದೆ ಮಡುಗಟ್ಟಿ ನಿಂತಿದೆ

ಚಿಕ್ಕಬಳ್ಳಾಪುರ: ‘ಅದೋ ನೋಡಿ ಉಕ್ಕಿ ಹರಿಯೋ ಮ್ಯಾನ್‌ಹೋಲ್. ಗಾಳಿ ಬಿಟ್ಟರೆ ಈ ಮರ ಮನೆ ಮೇಲೆ ಬೀಳುತ್ತದೆ ಎನ್ನುವ ಭಯಕ್ಕೆ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುತ್ತೇವೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಎಲ್ಲವೂ ಚರಂಡಿಯಲ್ಲೇ ಹರಿಯುತ್ತೆ. ಜೋರು ಮಳೆ ಸುರಿದರೆ ಯಾಕ್ ಕೇಳತೀರಿ ನಮ್ಮ ಕಥೆ? ನಗರಸಭೆಯವರಿಗೆ ಸಾವಿರ ಸಲ ಹೇಳಿ ಸಾಕಾಗಿದೆ. ಇಲ್ಲಿ ಯಾರಾದರೂ ಸತ್ತ ಮೇಲಷ್ಟೇ ಅಧಿಕಾರಿಗಳು ನಮ್ಮತ್ತ ಗಮನ ಹರಿಸುತ್ತಾರೆ ಅನಿಸುತ್ತೆ...’

ನಗರದ ಮೂರನೇ ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ, ಕಾಲುವೆಗಳ ಇಣುಕುತ್ತಿದ್ದವರ ಬಳಿ ಬಂದು ಒಂದೇ ಉಸಿರಿನಲ್ಲಿ ತಮ್ಮ ಮನದಾಳದ ಬೇಸರವನ್ನು ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು ಭಗತ್‌ ಸಿಂಗ್ ನಗರ ನಿವಾಸಿ ರಿಯಾಜ್ ಪಾಷಾ.

ಅಪೂರ್ಣ ಒಳಚರಂಡಿ ವ್ಯವಸ್ಥೆ, ಅವೈಜ್ಞಾನಿಕ ಚರಂಡಿ, ಅಧ್ವಾನಗೊಂಡ ರಾಜ ಕಾಲುವೆಗಳಿಂದಾಗಿ ಮೂರನೇ ವಾರ್ಡ್ ವ್ಯಾಪ್ತಿಯ ಭಗತ್ ಸಿಂಗ್ ನಗರ, ದರ್ಗಾ ಮೊಹಲ್ಲಾಗಳಲ್ಲಿ ನಾಗರಿಕರು ಮಳೆಗಾಲ ಯಾಕಾದರೂ ಬರುತ್ತಪ್ಪಾ ಎಂದು ತಳಮಳ ಹೊರ ಹಾಕುತ್ತಾರೆ.

ವರ್ಷಪೂರ್ತಿ ತುಂಬಿಕೊಂಡಿರುವ ಚರಂಡಿಗಳು, ಮಳೆಗಾಲದಲ್ಲಿ ಈ ವಾರ್ಡ್‌ನ ಕೆಲವೆಡೆ ಕೃತಕ ಕೆರೆಗಳು, ಪ್ರವಾಹ ಸೃಷ್ಟಿಸಿ ಸ್ಥಳೀಯರ ನೆಮ್ಮದಿ ಕಸಿದು, ಏನಾಗುತ್ತದೋ ಎನ್ನುವ ಭಯದಲ್ಲಿ ಬದುಕುವಂತೆ ಮಾಡುತ್ತಿವೆ. ಮಳೆ ಬರುತ್ತಿದ್ದರೆ ರಾತ್ರಿ ನಿದ್ದೆ ಮಾಡದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಸದಾ ಗುಂಡಿಗಳಿಂದಲೇ ತುಂಬಿರುವ ಮುಸ್ಟೂರು ರಸ್ತೆಯ ಎಡಗಡೆ ಭಾಗ ನಾಲ್ಕನೇಯ ವಾರ್ಡ್, ಬಲಗಡೆ ಭಾಗ ಮೂರನೇ ವಾರ್ಡ್‌ಗೆ ಸೇರುತ್ತವೆ. ಹೀಗಾಗಿ ಇಲ್ಲಿ ಅಭಿವೃದ್ಧಿ ವಿಚಾರ ಪರಸ್ಪರ ಬೊಟ್ಟು ತೋರಿಸುವುದರಲ್ಲಿಯೇ ಮರೀಚಿಕೆಯಾಗಿ ಉಳಿದಿದೆ.

ಮುಸ್ಟೂರು ರಸ್ತೆಯ ಎಡಭಾಗದಲ್ಲಿ ಚರಂಡಿ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಮೇಲ್ಭಾಗದಲ್ಲಿರುವ ಪ್ರಶಾಂತ್ ನಗರದ ನೀರೆಲ್ಲ ಹರಿದು ರಸ್ತೆ ಬಲಗಡೆ, ತಗ್ಗು ಪ್ರದೇಶದಲ್ಲಿರುವ ಭಗತ್‌ ಸಿಂಗ್ ನಗರದ ಸುಮಾರು 50 ಮನೆಗಳಿಗೆ ನುಗ್ಗುತ್ತದೆ. ಇಲ್ಲಿರುವ ರಾಜಕಾಲುವೆಯಂತೂ ಹೂತು ಹೋಗಿ ಕಿರಿದಾಗಿದ್ದು, ಮಳೆ ನೀರು ಸಾಗಿಸುವ ಸಾಮರ್ಥ್ಯ ಕಡಿಮೆಯಾಗಿದ್ದೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

‘ನಾಲ್ಕನೇ ವಾರ್ಡ್ ವ್ಯಾಪ್ತಿಯಲ್ಲಿ ಕಾಲುವೆಗಳಿಗೆ ತ್ಯಾಜ್ಯ, ಕಟ್ಟಡ ಒಡೆದ ಅವಶೇಷ, ಮಣ್ಣು ತಂದು ಸುರಿಯುತ್ತಿದ್ದಾರೆ. ಅದನ್ನು ಯಾರು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಮಳೆ ನೀರು ಕಾಲುವೆಗಳು ಹೂತು ಹೋಗಿವೆ. ಮೊದಲೇ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿ ಚರಂಡಿ ಕಟ್ಟಿಕೊಂಡರೆ ಮನೆಯಲ್ಲಿ ಇರಲು ಆಗುವುದಿಲ್ಲ’ ಎಂದು ರಿಯಾಜ್ ಪಾಷಾ ಬೇಸರ ವ್ಯಕ್ತಪಡಿಸಿದರು.

‘ನಮ್ಮ ಕಷ್ಟ ಎಷ್ಟೇ ಹೇಳಿಕೊಂಡರೂ ಯಾರೊಬ್ಬರೂ ತಲೆಗೆ ಹಚ್ಚಿಕೊಳ್ಳುತ್ತಿಲ್ಲ. ಬಂದವರಿಗೆಲ್ಲ ನಾವು ಹೇಳುತ್ತಲೇ ಇದ್ದೇವೆ. ಅವರು ಕೇಳುತ್ತಲೇ ಹೋಗುತ್ತಿದ್ದಾರೆ ವಿನಾ ಬದಲಾವಣೆ ಮಾತ್ರ ಆಗಿಲ್ಲ. ಅನೇಕ ವರ್ಷಗಳ ಹಿಂದೆ ತುಮಕೂರಿನಿಂದ ಬಂದು ಕೊಳೆಗೇರಿ ಅಧಿಕಾರಿಗಳು ಬಡಾವಣೆ ಅಭಿವೃದ್ಧಿಗೆ ನಮ್ಮಿಂದ ಹಣ ಕಟ್ಟಿಸಿಕೊಂಡು ಹೋಗುತ್ತಿದ್ದರು. ಆದರೆ ಕೊಳೆಗೇರಿ ಏನು ಅಭಿವೃದ್ಧಿ ಮಾಡಿದರು ಎನ್ನುವುದು ಇವತ್ತಿಗೂ ತಿಳಿಸಿಲ್ಲ’ ಎಂದು ಹೇಳಿದರು.

**

ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಎನ್ನುವವರು ಒಮ್ಮೆ ಇಲ್ಲಿ ಬಂದು ನೋಡಲಿ.

-ಇಮ್ರಾನ್‌, ದರ್ಗಾ ಮೊಹಲ್ಲಾ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !