ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ ರಿಜಿಸ್ಟರ್ ಕಚೇರಿ: ಪರಿಹಾರ ಕಾಣದ ಸರ್ವರ್ ಸಮಸ್ಯೆ

ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಸ್ಥಗಿತ
Last Updated 3 ಫೆಬ್ರುವರಿ 2021, 2:32 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಎರಡು ದಿನದಿಂದ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯವಾಗದೆ ಸಾರ್ವಜನಿಕರು ಕಾದುಕಾದು ಸುಸ್ತಾಗಿ ವಾಪಸ್ ಹೋಗುತ್ತಿದ್ದಾರೆ.

ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು, ನಿವೇಶನ ಹಾಗೂ ಕಟ್ಟಡಗಳ ನೋಂದಣಿ ಪ್ರಕ್ರಿಯೆಗೆ ನಾಗರಿಕರು ಬರುತ್ತಾರೆ. ಆಸ್ತಿಗಳ ದಾಖಲೆಗಳನ್ನು ಪಡೆಯಲು ಪ್ರತಿನಿತ್ಯ ನೂರಾರು ಜನರು ಕಚೇರಿಗೆ ಎಡತಾಕುತ್ತಾರೆ. ಸರ್ವರ್ ಸಮಸ್ಯೆಯಿಂದ ಇವೆಲ್ಲ ಪ್ರಕ್ರಿಯೆಗಳು ನಿಂತಿವೆ. ಆಸ್ತಿಗಳ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು ಕುಟುಂಬ ಸಮೇತ ಕಚೇರಿಯ ಮುಂದೆ ಕುಳಿತು ತೂಕಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸಂಜೆಯವರೆಗೂ ಕಾದರೂ ಕೆಲಸ ಮುಗಿಯದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ವಾಪಸ್ ತೆರಳಿದರು.

‘ಕುಟುಂಬ ಸಮೇತ ಬಂದು ಕುಳಿತಿದ್ದೇವೆ. ಅಧಿಕಾರಿಗಳು ಸರ್ವರ್ ಸಮಸ್ಯೆ ಎಂದು ಹೇಳಿ ಆರಾಮವಾಗಿ ಕುಳಿತಿದ್ದಾರೆ. ಕೇಳಿದರೆ ಮತ್ತೊಂದು ದಿನ ಬನ್ನಿ ಎನ್ನುತ್ತಾರೆ. ಬಂದು ಹೋಗುವ ಶ್ರಮ, ಹಣಕಾಸಿನ ಖರ್ಚು, ಸಮಯದ ವ್ಯರ್ಥ ಆಗಿರುವುದಕ್ಕೆ ಪರಿಹಾರ ಕೊಡುವವರು ಯಾರು’ ಎಂದು ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ನಿಗದಿಪಡಿಸಿದ ದಿನಾಂಕದ ಒಳಗೆ ಶುಲ್ಕ ಪಾವತಿಸದಿದ್ದರೆ ದಂಡ ವಿಧಿಸುತ್ತದೆ. ಜನರಿಗೆ ಆಗುತ್ತಿರುವ ತೊಂದರೆಗೆ ಯಾರು ಹೊಣೆ, ಯಾರಿಗೆ ದಂಡ ವಿಧಿಸಬೇಕು’ ಎಂದು ನೋಂದಣಾಧಿಕಾರಿಗಳ ಕಚೇರಿ ಮುಂದೆ ದಿನವಿಡೀ ಕಾದು ವಾಪಸ್ ತೆರಳಿದ ಜಿಯಾವುಲ್ಲಾ ಪ್ರಶ್ನಿಸಿದರು.

‘ಈ ರೀತಿಯ ಸಮಸ್ಯೆ ಉಂಟಾಗುವುದು ಇದೇ ಮೊದಲಲ್ಲ. ಆಗಾಗ ಸರ್ವರ್ ಸ್ಥಗಿತಗೊಂಡು ನೋಂದಣಿಗೆ ಕೈಕೊಡುವುದು ಸಾಮಾನ್ಯವಾಗಿದೆ. ಈ ರೀತಿಯ ತಾಂತ್ರಿಕ ಸಮಸ್ಯೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದವರು ಊಟ, ತಿಂಡಿ ಇಲ್ಲದೆ ಸಂಜೆಯವರೆಗೂ ಕಾದಿದ್ದರೂ ಪ್ರಯೋಜನವಾಗಲಿಲ್ಲ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT