ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ವೈಚಾರಿಕ ಸಂತ ಎಚ್‌.ನರಸಿಂಹಯ್ಯ ಮನೆಗೆ ಹೊಸರೂಪ

ಎಚ್.ನರಸಿಂಹಯ್ಯ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು
Last Updated 7 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದನದ ಕೊಟ್ಟಿಗೆಗಿಂತಲೂ ಕಡೆಯಾದ ಸ್ಥಿತಿಯಲ್ಲಿದ್ದ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಪ್ಪಟ ಗಾಂಧಿವಾದಿ ಡಾ.ಎಚ್.ನರಸಿಂಹಯ್ಯ ಅವರ ಹುಟ್ಟೂರಿನ ಮನೆಗೆ ಕೊನೆಗೂ ಕಾಯಕಲ್ಪದ ಭಾಗ್ಯ ದೊರೆತಿದೆ.

ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿದ್ದ ಎಚ್‌.ಎನ್ ಅವರ ಮನೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಅವಗಣನೆಯಿಂದ ಶಿಥಿಲಾವಸ್ಥೆಗೆ ತಲುಪಿ ಬೀಳುವ ಸ್ಥಿತಿಗೆ ತಲುಪಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಎಚ್‌.ಎನ್ ಅವರ ಜನ್ಮ ಶತಮಾನೋತ್ಸವ ದಿನದಂದು (ಜೂನ್ 6) ವಿಶೇಷ ವರದಿ ಪ್ರಕಟಿಸಿತ್ತು.

ಅದರ ಬೆನ್ನಲ್ಲೇ, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಸ್ವಯಂ ಪ್ರೇರಣೆಯಿಂದ ವಂತಿಗೆ ಸಂಗ್ರಹಿಸುವ ಮೂಲಕ ದುಸ್ಥಿತಿಯಲ್ಲಿದ್ದ ಎಚ್‌.ಎನ್ ಅವರ ಮನೆಗೆ ಹೊಸ ಮೆರಗು ನೀಡುವ ಮೂಲಕತಮ್ಮ ಸರಳ ಬದುಕು, ಉದಾತ್ತ ಮತ್ತು ಪ್ರಖರ ವೈಜ್ಞಾನಿಕ ಚಿಂತನಾ ಮನೋಭಾವದಿಂದಲೇ ಜನಮಾನಸದಲ್ಲಿ ಮಹಾನ್ ಚೇತನದ ಸ್ಥಾನ ಪಡೆದಿದ್ದ ಎಚ್‌.ಎನ್ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಕಚೇರಿ ಸಿಬ್ಬಂದಿ ತಮ್ಮ ಕೈಲಾದ ಆರ್ಥಿಕ ಸಹಾಯ ನೀಡುವ ಮೂಲಕ ಸುಮಾರು ₹5 ರಿಂದ ₹6 ಲಕ್ಷ ವೆಚ್ಚದಲ್ಲಿ ಮನೆ ನವೀಕರಣ ಮಾಡಿಸಿ, ಶಿಕ್ಷಣ ಕ್ಷೇತ್ರದಲ್ಲಿ ಮೇರು ಪರ್ವತವಾದ ವ್ಯಕ್ತಿತ್ವದ ಘನತೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.

ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಎಚ್‌.ಎನ್ ಅವರ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾದ ರೀತಿ ಮೂಲ ಸ್ವರೂಪದಲ್ಲೇ ಮನೆ ನವೀಕರಿಸಿದ್ದಾರೆ. ಸುಮಾರು 3 ತಿಂಗಳಿಂದ ನಡೆದಿದ್ದ ನವೀಕರಣ ಕಾಮಗಾರಿ ಸದ್ಯ ಪೂರ್ಣಗೊಂಡಿದ್ದು, ಮನೆಯಲ್ಲಿ ಎಚ್‌.ಎನ್ ಅವರು ಬಳಸುತ್ತಿದ್ದ ವಸ್ತುಗಳು, ಅವರಿಗೆ ಸಂದ ಪ್ರಶಸ್ತಿಗಳು, ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡುವ ಮೂಲಕ ಮುಂದಿನ ಪೀಳಿಗೆಗೆ ಎಚ್‌.ಎನ್ ಅವರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.

ಹೊಸೂರಿನಲ್ಲಿ 1920 ಜೂನ್ 6 ರಂದು ಹಿಂದುಳಿದ ವರ್ಗದ ಹನುಮಂತಪ್ಪ–ವೆಂಕಟಮ್ಮ ದಂಪತಿ ಪುತ್ರರಾಗಿ ಜನಿಸಿದ ಎಚ್‌.ಎನ್ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ, ಉನ್ನತ ಹುದ್ದೆಗಳು, ಅಗಣಿತ ಗೌರವಗಳು ಅರಸಿ ಬಂದರೂ ಬದುಕಿನುದ್ಧಕ್ಕೂ ಯಾವತ್ತೂ ಆಡಂಭರ ತೋರದೆ, ಗಾಂಧಿ ಮಾರ್ಗದ ಸರಳ ಬದುಕು ಮೈಗೂಡಿಸಿಕೊಂಡು ಇಡೀ ಜೀವನ ಶಿಕ್ಷಣಕ್ಕೆ ಮೀಸಲಿಟ್ಟು, ಸಂತನ ತೆರದಿ ಬದುಕಿದವರು.

ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದ ನರಸಿಂಹಯ್ಯ ಅವರು ಅಧ್ಯಾಪಕರಾದ ಮೇಲೂ 1946 ರಿಂದ ಕೊನೆಯುಸಿರೆಳೆಯುವವರೆಗೂ (2005ರ ಜನವರಿ 31) ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ನಿಲಯದ ಪುಟ್ಟ ಕೊಣೆಯಲ್ಲಿಯೇ ಬದುಕಿ ಯುವ ಪೀಳಿಗೆಗೆ ಆದರ್ಶದ ಅತ್ಯುನ್ನತ ಮಾದರಿಯಾದವರು.

ಕುಗ್ರಾಮದ ಬಡ ಪೋಷಕರ ದಟ್ಟ ದಾರಿದ್ರ್ಯದ ನಡುವೆಯೂ ತಮ್ಮ ಪ್ರತಿಭೆಯಿಂದಲೇ ದೈತ್ಯ ಪ್ರತಿಭಾ ಸಂಪನ್ನರಾಗಿ ಬೆಳೆದ ನರಸಿಂಹಯ್ಯ ಅವರು, ತಮ್ಮ 85 ವರ್ಷಗಳ ಬದುಕಿನಲ್ಲಿ 62 ವರ್ಷಗಳ ಕಾಲ ವಿದ್ಯಾರ್ಥಿನಿಲಯಗಳಲ್ಲೇ ಜೀವನ ಸವೆಸಿದ್ದು ವಿಶೇಷ.

ಅವಿವಾಹಿತರಾಗಿದ್ದ ಎಚ್‌.ಎನ್ ಅಖಂಡ ಬ್ರಹ್ಮಚರ್ಯದ ಬದುಕಿನಲ್ಲಿ ಸಮಾಜದಿಂದ ಪಡೆದ ಎಲ್ಲವನ್ನೂ ಸಮಾಜಕ್ಕೆ ಮರಳಿಸಿ ನಿರ್ಗಮಿಸಿದ ನಿಸ್ಪೃಹರು. ಅವರ ಹುಟ್ಟೂರಿನಲ್ಲಿ ಪುಟ್ಟದೊಂದು ಮನೆಯನ್ನು ಹೊರತುಪಡಿಸಿದರೆ ಅವರ ಕುಟುಂಬಕ್ಕೆ ಒಂದಿಂಚೂ ಭೂಮಿ ಸಹ ಇಲ್ಲ.

ನರಸಿಂಹಯ್ಯ ಅವರಿಗೆ ಒಬ್ಬ ಸಹೋದರಿ ಇದ್ದರು. ಅವರು ಸಹ ಬಹು ಕಾಲದ ಹಿಂದೆಯೇ ತೀರಿ ಹೋಗಿದ್ದಾರೆ. ಹೀಗಾಗಿ, ವಾರಸುದಾರರಿಲ್ಲದ ಅವರ ಮನೆ ಸ್ಥಿತಿ ಅವರ ಅಪಾರ ಶಿಷ್ಯ ಬಳಗ ಮತ್ತು ಪ್ರಜ್ಞಾವಂತರಲ್ಲಿ ತೀವ್ರ ಬೇಸರ ಉಂಟು ಮಾಡಿತ್ತು. ಅಧಿಕಾರಿಗಳ ಕಾಳಜಿಯಿಂದ ಪುನರುಜ್ಜೀವನಗೊಂಡ ಎಚ್‌.ಎನ್ ಅವರ ಮನೆ ಇದೀಗ ಅವರ ಜನ್ಮ ಶತಮಾನೋತ್ಸವಕ್ಕೆ ಉತ್ತಮ ಕೊಡುಗೆಯಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT