ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಅವ್ಯವಹಾರ ತನಿಖೆಗೆ ಆಗ್ರಹ

ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು
Last Updated 19 ಜುಲೈ 2018, 13:33 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿಯ ಅಂಗಡಿ ಮಳಿಗೆಗಳ ಬಾಡಿಗೆ ನೀಡುವಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಂಪೂರ್ಣ ತನಿಖೆ ಮಾಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು ತಿಳಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಸದಸ್ಯರೊಬ್ಬರ ಆರೋಪಕ್ಕೆ ಪ್ರತಿಯಾಗಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಮಾತನಾಡಿದರು.

ಸಭೆಯಲ್ಲಿ ಸದಸ್ಯ ಕೆ.ಎನ್.ರಾಮಕೃಷ್ಣಾ ರೆಡ್ಡಿ ಮಾತನಾಡಿದ, ‘ಚೇಳೂರು ಗ್ರಾಮ ಪಂಚಾಯಿತಿಯ ಅಂಗಡಿ ಮಳಿಗೆಗಳ ಬಾಡಿಗೆಯನ್ನು ವಸೂಲಿ ಮಾಡಿಲ್ಲ. ಅನರ್ಹರಾಗಿರುವವರಿಗೆ ನಿಯಮ ಉಲ್ಲಂಘಿಸಿ ಪುನಃ ಬಾಡಿಗೆ ನೀಡಲಾಗಿದೆ. ಹೀಗಾಗಿ ಸುಮಾರು ₨30 ಲಕ್ಷ ಬಾಡಿಗೆ ನಷ್ಟ ಉಂಟಾಗಿದೆ’ ಎಂದು ಆರೋಪಿಸಿದರು. ಅವರ ಮಾತಿಗೆ ಅನೇಕ ಸದಸ್ಯರು ಧ್ವನಿಗೂಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಬೇಕು ಪಟ್ಟು ಹಿಡಿದಿದ್ದರು.

ಸದಸ್ಯ ಕೆ.ಆರ್.ಸುಧಾಕರರೆಡ್ಡಿ ಮಾತನಾಡಿ, ‘ತಾಲ್ಲೂಕಿನ ಚಾಕವೇಲು ಪ್ರಾಥಮಿಕ ಆರೋಗ್ಯ ಕೇಂದ್ರದ ಜಮೀನಿನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಗ್ಯ ಕೇಂದ್ರಕ್ಕೆ ಹೋಗಲು ಆಗುತ್ತಿಲ್ಲ. ಈ ಬಗ್ಗೆ ಒಂದು ವರ್ಷದಿಂದ ತಾಲ್ಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯ ಆಸ್ತಿಯನ್ನು ಅಳತೆ ಮಾಡಿಸಿ, ರಕ್ಷಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಸದಸ್ಯ ಶ್ರೀರಾಮ ನಾಯಕ್, ‘ಕೆಲ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳು ಉದ್ಘಾಟನೆ ಆದ ಕೆಲವೇ ತಿಂಗಳುಗಳಲ್ಲಿ ಕೆಟ್ಟಿವೆ. ಹೀಗಾಗಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಘಟಕಗಳನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸರ್ಕಾರದ ಹಣ ದುರುಪಯೋಗ ತಡೆಗಟ್ಟಬೇಕಾಗಿದೆ’ ಎಂದು ಹೇಳಿದರು.

ನರೇಂದ್ರಬಾಬು ಮಾತನಾಡಿ, ‘ತಾಲ್ಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮಟ್ಟದ ಬೆಲ್ಲ ವಿತರಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸುವಂತೆ ಗುತ್ತಿಗೆದಾರರಿಗೆ ತಿಳಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಧ್ಯಾಹ್ನವೇ ಹೊರಟುಹೋಗಿ, ಸಹಾಯಕಿರನ್ನಾಗಿ ಇರಿಸುತ್ತಿದ್ದಾರೆ. ಇವರು ಮಕ್ಕಳಿಗೆ ಏನು ಶಿಕ್ಷಣ ಕಲಿಸಿಕೊಡ್ತಾರೆ? ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತವಾಗಿ ನಾನು ಭೇಟಿ ನೀಡುತ್ತೇನೆ. ಲೋಪಗಳು ಕಂಡುಬಂದಲ್ಲಿ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT