ಸೋಮವಾರ, ಡಿಸೆಂಬರ್ 16, 2019
18 °C

ದಂಡದ ಮೊತ್ತ ಇಳಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಮೋಟಾರು ವಾಹನ ಕಾಯ್ದೆಯಿಂದ ದುಬಾರಿಯಾಗಿರುವ ದಂಡದ ಮೊತ್ತವನ್ನು ಜನಸಾಮಾನ್ಯರು, ಬಡವರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇಳಿಕೆ ಮಾಡಬೇಕು’ ಎಂದು ಸಾಮಾಜಿಕ ಹೋರಾಟಗಾರ ಎ.ಟಿ.ಕೃಷ್ಣನ್‌ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷತೆ ಮುಖ್ಯ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಹೆಚ್ಚಳವಾದ ದಂಡ ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ನೂಕಿದೆ. ಕೂಲಿನಾಲಿ ಮಾಡುವವರು ವಾಹನಗಳನ್ನು ಬಳಸಲು ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

‘ನಗರದ ಮಾರುಕಟ್ಟೆಗೆ ಹೂವು, ತರಕಾರಿ ತಗೆದುಕೊಂಡು ಬರುವ ಬಹುತೇಕ ರೈತರಿಗೆ ಅಷ್ಟಾಗಿ ಕಾನೂನಿನ ಅರಿವು ಇರುವುದಿಲ್ಲ. ಅನೇಕ ವಾಹನಗಳ ದಾಖಲೆಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿರುತ್ತಾರೆ. ಬರಗಾಲಕ್ಕೆ ತುತ್ತಾಗಿ ರೈತರು ಬದುಕುವುದೇ ದುಸ್ತರವಾಗುತ್ತಿರುವ ಈ ಹೊತ್ತಿನಲ್ಲಿ ಹತ್ತಾರು ಸಾವಿರದಷ್ಟು ದುಬಾರಿ ದಂಡ ವಿಧಿಸಿದರೆ ಬಡವರ ಪಾಡು ಏನಾಗಬೇಡ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಜಾರಿ ಮಾಡಿರುವ ದಂಡದ ಪ್ರಮಾಣ ಅವೈಜ್ಞಾನಿಕವಾಗಿದೆ. ಸಂಚಾರ ಪೊಲೀಸರು ಅಧಿಕ ದಂಡ ಹಾಕಿ ಬಡವರು, ರೈತರ ಹೊಟ್ಟೆ ಮೇಲೆ ಹೊಡೆಯಬಾರದು. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ದಂಡದ ವಿಚಾರದಲ್ಲಿ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದಲ್ಲಿ ಟಿಪ್ಪರ್‌ಗಳು ಅಧಿಕ ಭಾರ ಹೊತ್ತು, ಅತಿ ವೇಗವಾಗಿ ರಾಜಾರೋಷವಾಗಿ ಓಡಾಡುತ್ತಿವೆ. ಈ ಬಗ್ಗೆ ಏಕೆ ಸಾರಿಗೆ ಇಲಾಖೆ ಗಮನ ಹರಿಸುತ್ತಿಲ್ಲ? ದಾಖಲೆಗಳನ್ನು ಇಟ್ಟುಕೊಳ್ಳದೆ ಓಡಾಡುವ ಖಾಸಗಿ ಬಸ್‌ನವರನ್ನು ಏಕೆ ಪ್ರಶ್ನಿಸುತ್ತಿಲ್ಲ. ಬಡ ಜನರ ಮೇಲೆ ಕಾನೂನಿನ ಹೆಸರಿನಲ್ಲಿ ಹೊರೆ ಹಾಕುವುದು ಯಾವ ನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ಟಿ.ಕೆ.ಮಂಜುನಾಥ್, ವಿಜೆಂದ್ರ ಬಾಬು, ಕಳವಾರ ಶ್ರೀಧರ್, ಸುರೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು