ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ರಾಗಿ ಖರೀದಿ ಕೇಂದ್ರ ತೆರೆಯಲು ಆಗ್ರಹ

Last Updated 29 ನವೆಂಬರ್ 2021, 5:44 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ರಾಗಿ ಕೊಯ್ಲಿಗೆ ಬಂದಿದೆ. ಉತ್ತಮ ಮಳೆಯಾಗಿದ್ದು ರಾಗಿ ಬೆಳೆ ಉತ್ತಮ ಇಳುವರಿ ಬಂದಿದೆ. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದ ಬೆಳೆ ನಷ್ಟವಾಗಿದೆ. ಮಳೆಯ ಕಾರಣಕ್ಕೆ ಕಟಾವು ಸ್ವಲ್ಪ ವಿಳಂಬವಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಇನ್ನೂ ಕ್ರಮಕೈಗೊಳ್ಳದಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದು ರಾಗಿ ಕಟಾವು ಆರಂಭವಾಗಿದೆ. ಸುಗ್ಗಿಯ ಕಾಲ ಆರಂಭವಾಗಿದ್ದರೂ ರಾಗಿ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ. ಸರ್ಕಾರದಿಂದ ಮಾರ್ಗದರ್ಶಿ ಸೂತ್ರ ಇನ್ನೂ ಪ್ರಕಟವಾಗಿಲ್ಲದ ಕಾರಣ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ ಎನ್ನಲಾಗಿದೆ.

ಪ್ರತಿ ವರ್ಷವೂ ಖರೀದಿ ಕೇಂದ್ರ ತೆರೆಯಲು ಸರ್ಕಾರ ವಿಳಂಬ ಮಾಡುತ್ತದೆ. ವಿಳಂಬದಿಂದ ಖರೀದಿ ಕೇಂದ್ರ ಆರಂಭವಾಗುವುದಕ್ಕೂ ಮುನ್ನವೇ ರೈತರು ರಾಗಿ ಮಾರಾಟ ಮಾಡುತ್ತಾರೆ. ಈ ವರ್ಷವಾದರೂ ಕಟಾವು ಆರಂಭವಾದ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂಬುದು ರೈತರ ಆಗ್ರಹ.

ಕಳೆದ ವರ್ಷ ತಾಲ್ಲೂಕಿನಲ್ಲಿ 1,617 ರೈತರು ಎಂಎಸ್‌ಪಿ ಯೋಜನೆಯಡಿ ರಾಗಿ ಮಾರಾಟ ಮಾಡಲು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1504 ರೈತರು 26,931 ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ್ದರು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ರೈತರಿಂದ ನೇರವಾಗಿ ರಾಗಿ ಖರೀದಿಸಿತ್ತು.

ರೈತರು ಸಾಲ ಮಾಡಿ ಬೆಳೆ ತೆಗೆದಿರುತ್ತಾರೆ. ಸುಗ್ಗಿಯ ಕಾಲ ಆರಂಭವಾದ ಕೂಡಲೇ ರಾಗಿಯನ್ನು ಮಾರಿ ಸಾಲ ತೀರಿಸಲು ಒತ್ತಡ ಇರುತ್ತದೆ. ರಾಗಿಯನ್ನು ದಾಸ್ತಾನು ಮಾಡಿಕೊಳ್ಳಲು ಸೂಕ್ತ ಅನುಕೂಲ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಳೆ ಕಟಾವು ಮಾಡಿ ರಾಗಿ ಮಾಡಿದ ಕೂಡಲೇ ಮಾರಾಟ ಮಾಡಲು ಕಾಯುತ್ತಿರುತ್ತಾರೆ. ಖರೀದಿ ಕೇಂದ್ರ ತೆರೆದು ರೈತರಿಂದ ಖರೀದಿ ಆರಂಭಿಸಿದರೆ
ಅನುಕೂಲವಾಗುತ್ತದೆ.

ತಡವಾದರೆ ದಳ್ಳಾಳಿಗಳು ರೈತರಿಂದ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಾರೆ. ನಂತರ ನಕಲಿ ದಾಖಲೆಗಳನ್ನುಸೃಷ್ಟಿಸಿ ರೈತರ ಹೆಸರಿನಲ್ಲಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುತ್ತಾರೆ. ದಳ್ಳಾಳಿಗಳು ಮಾತ್ರ ಲಾಭ ಮಾಡಿಕೊಳ್ಳುತ್ತಾರೆ. ಹೀಗಾಗಿ ಕೂಡಲೇ ಖರೀದಿ ಕೇಂದ್ರವನ್ನು ತೆರೆಯಬೇಕು. ರೈತರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ಕಟಾವು ಮಾಡಿದ ಕೂಡಲೇ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಾರೆ.

ಕಳೆದ ವರ್ಷ ಕ್ವಿಂಟಲ್ ರಾಗಿಗೆ ₹3,295 ನಿಗದಿಪಡಿಸಿತ್ತು. ಈ ಬಾರಿ ಇನ್ನೂ ದರ ನಿಗದಿಯಾಗಿಲ್ಲ. ನಿರಂತರವಾಗಿ ಮಳೆಯಾಗಿದ್ದರಿಂದ ತಾಲ್ಲೂಕಿನಾದ್ಯಂತ ರಾಗಿ ಬೆಳೆಗೆ ಹಾನಿಯಾಗಿತ್ತು. ಹೊಲಗಳಲ್ಲಿ ನೀರು ನಿಂತಿದ್ದರಿಂದ ಕಟಾವಿಗೆ ಹಿನ್ನಡೆಯಾಗಿದೆ. ತೇವಾಂಶ ಅಧಿಕವಾಗಿರುವುದರಿಂದ ಬೆಳೆ ಅಥವಾ ತೆನೆಯನ್ನು ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗದಿರುವುದು ರೈತರ ಆತಂಕವನ್ನು ದೂರಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT