ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಭೀಕ್ಷೆಯಲ್ಲ, ನಮ್ಮ ಹಕ್ಕು

‘ವಾಲ್ಮೀಕಿ ನಾಯಕ ಜನಾಂಗದ ಮೀಸಲಾತಿಗಾಗಿ ಜಾಗೃತಿ ಸಮಾವೇಶ’ದಲ್ಲಿ ಸರ್ಕಾರಕ್ಕೆ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ
Last Updated 10 ಜುಲೈ 2019, 14:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಈವರೆಗೆ ನಮಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ನೀಡಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಗಡುವಿನ ಒಳಗೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7.5ಕ್ಕೆ ಏರಿಸಬೇಕು. ಇಲ್ಲದೇ ಹೋದರೆ ನಾಯಕರ ತಾಕತ್ತು ಎಂತಹದ್ದು ಎಂದು ತೋರಿಸಬೇಕಾಗುತ್ತದೆ’ ಎಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ವಾಲ್ಮಿಕಿ ನಾಯಕ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ವಾಲ್ಮೀಕಿ ನಾಯಕ ಜನಾಂಗದ ಮೀಸಲಾತಿಗಾಗಿ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡಕ್ಕೆ ಈಗಾಗಲೇ 2004 ರಿಂದ ಕೇಂದ್ರ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಶೇ 7.5 ಮೀಸಲಾತಿ ಎಲ್ಲ ರಂಗಗಳಲ್ಲೂ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಕಳೆದ 40 ವರ್ಷಗಳಿಂದ ಬರೀ ಶೇ 3 ರಷ್ಟು ಮಾತ್ರ ನೀಡುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರದ ಮಾದರಿಯಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಸುಮಾರು 50 ರಿಂದ 60 ಲಕ್ಷದಷ್ಟಿದೆ. ಅಂಬೇಡ್ಕರ್‌ ಅವರು ಹೇಳಿರುವಂತೆ ಮತ್ತು ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಮೀಸಲಾತಿ ಹೆಚ್ಚಿಸಲೇ ಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಲಾಗಿದೆ’ ಎಂದು ಹೇಳಿದರು.

‘ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ರಸ್ತೆ ಬಂದ್‌ಗೆ ಕರೆ ನೀಡಲಾಗುತ್ತದೆ. ಮಠದ ಕರೆ ಬಂದ ತಕ್ಷಣ ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಿ ಚಳವಳಿ, ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಹೋರಾಟದ ರೂಪರೇಷೆ ಸಿದ್ದಪಡಿಸಲು ಆಗಸ್ಟ್ 7ರ ವರೆಗೂ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಜಾಗೃತಿ ಸಮಾವೇಶ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಹಾಗೂ ಗ್ರಾಮ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಮ್ಮ ಜನಾಂಗಕ್ಕೆ ಸಮುದಾಯ ಭವನ ನಿರ್ಮಾಣ ಮಾಡಬೇಕು. ಸ್ಥಳೀಯ ಸಂಸ್ಥೆಗಳು ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ವಾಲ್ಮೀಕಿ ಸಮುದಾಯದವರಿದ್ದಾರೆ. ಆದರೂ ಈವರೆಗೆ ಆ ಸಮುದಾಯದವರಿಗೆ ಶಾಸಕ ಸ್ಥಾನ, ವಿಧಾನ ಪರಿಷತ್ ಸದಸ್ಯ ಸ್ಥಾನ ಕೂಡ ದೊರಕಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಕಿಂಚಿತ್ತೂ ಪ್ರಯತ್ನಿಸಿಲ್ಲ. ಚುನಾವಣಾ ಪ್ರಣಾಳಿಕೆಗಳು ಕೇವಲ ಬರೀ ಘೋಷಣೆಗೆ ಸೀಮಿತಗೊಂಡಿವೆ. ಇನ್ನು ಇಂತಹ ಮೋಸದ ಆಟ ನಡೆಯದು’ ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯದ ಮುಖಂಡ ಅಶೋಕ್ ಕುಮಾರ್ ಮಾತನಾಡಿ, ‘ನಮ್ಮ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಮೀಸಲಾತಿಗಾಗಿ ಹೋರಾಟ ಮಾಡುವುದು ಅನಿವಾರ್ಯ. ಆ ನಿಟ್ಟಿನಲ್ಲಿ ಈಗಾಗಲೇ ಪ್ರಸನ್ನಾನಂದಪುರಿ ಸ್ವಾಮೀಜಿ ಸುಮಾರು 380 ಕಿ.ಮೀ ಪಾದಯಾತ್ರೆ ನಡೆಸಿ, ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಗಡುವಿನೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಯೊಬ್ಬರೂ ಹೋರಾಟಕ್ಕೆ ಸನ್ನದ್ಧರಾಗಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ನರಸಿಂಹಪ್ಪ, ಮುಖಂಡರಾದ ಜ್ಞಾನಪ್ಪ, ನಾಗಪ್ಪ, ವಿರೇಂದ್ರ, ಅಶೋಕ್‌ ಕುಮಾರ್, ಪ್ರತಾಪ್, ಕೆ.ಟಿ.ನಾರಾಯಣಸ್ವಾಮಿ, ಮಂಜುನಾಥ್, ಗೂಳೂರು ಲಕ್ಷ್ಮೀನಾರಾಯಣ, ಆವಲಕೊಂಡರಾಯಪ್ಪ, ಪಿ.ಜಿ.ಶ್ರೀನಿವಾಸ್, ಕೆ.ಸೋಮಶೇಖರ್, ಗಂಗರಾಜು, ವೆಂಕಟೇಶ್, ಅಪ್ಪಣ್ಣ, ನಾರಾಯಣಪ್ಪ, ವಿ.ವೆಂಕಟರಾಯಪ್ಪ, ಚಂದ್ರಪ್ಪ, ಮುರಳಿ, ಕರಿತಿಮ್ಮಪ್ಪ, ಗವಿರಾಯಪ್ಪ, ಮೂರ್ತಿ, ಮುನಿವೆಂಕಟಸ್ವಾಮಿ, ವಕೀಲ ಮಟಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT