ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಆಸೆಗಲ್ಲ, ಒಳಿತಿಗಾಗಿ ರಾಜೀನಾಮೆ: ಅಳೆದುತೂಗಿ ಬಿಜೆಪಿ ಸೇರಿದ ಸುಧಾಕರ್

Last Updated 14 ನವೆಂಬರ್ 2019, 14:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್ ಜೆಡಿಎಸ್‌ನ ಅಪವಿತ್ರ ಮೈತ್ರಿ ಸರ್ಕಾರದಲ್ಲಿ ನಮಗೆ ಅತ್ಯಂತ ನೋವು ಕೊಟ್ಟಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅಷ್ಟಾದ ಮೇಲೆ ಕುರ್ಚಿ ಇದ್ದರೆಷ್ಟು, ಇಲ್ಲದಿದ್ದರೆಷ್ಟು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಒಂದು ಆಶಯಕ್ಕಾಗಿ ರಾಜೀನಾಮೆ ಕೊಟ್ಟಿದ್ದೇವೆ ವಿನಾ ಯಾವುದೇ ಆಸೆ, ಆಮಿಷಕ್ಕೆ ಅಲ್ಲ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ಚುನಾವಣೆಗೆ ಮುಂಚೆ ಕಾರ್ಯಕ್ರಮಗಳ ಆಧಾರಿತವಾಗಿ ಮೈತ್ರಿ ಆಗಬೇಕು. ಜತೆಗೆ ತತ್ವ, ಸಿದ್ಧಾಂತಗಳು ಒಂದಾಗಿರಬೇಕು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೋರಾಟ ಮಾಡಿ, ಅಧಿಕಾರಕ್ಕಾಗಿ ಮಾತ್ರ ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡವು. ಹಾಗಾಗಿ ನಮ್ಮ ಮನಸ್ಸುಗಳು ಯಾವಾಗಲೂ ಒಂದು ಆಗಲಿಲ್ಲ’ ಎಂದು ತಿಳಿಸಿದರು.

‘ಮೈತ್ರಿ ಸರ್ಕಾರ ಕೆಲವರು ಹೇಳಿದಂತೆ ಮಾತ್ರ ನಡೆಯುತ್ತಿತ್ತು. ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಲಿಲ್ಲ. ಜನರಿಗೆ ಕೊಟ್ಟ ಭರವಸೆಗಳು ಈಡೇರಲಿಲ್ಲ. ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಲು ಆಗಿಲ್ಲ. ಹಾಗಾಗಿ ನಮಗೆ ಬೇರೆ ದಾರಿ ಕಾಣಲಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರೆಲ್ಲ ಸ್ವಂತ ಶಕ್ತಿಯ ಮೇಲೆ ಗೆದ್ದು ಬಂದವರು. ಯಾರು ಕೂಡ ಬೇರೆ ನಾಯಕರನ್ನು ಅವಲಂಬಿಸಿ, ಕೃಪಾಕಟಾಕ್ಷದಿಂದ ಗೆದ್ದವರಲ್ಲ’ ಎಂದರು.

‘ಕ್ರೌರ್ಯ, ವಿಕೃತ ಮನಸ್ಸಿನಿಂದ ಆದೇಶ ಕೊಟ್ಟ ರಮೇಶ್‌ ಕುಮಾರ್ ಅವರಂತಹ ಮತ್ತೊಬ್ಬ ವಿಧಾನಸಭೆ ಅಧ್ಯಕ್ಷರು ರಾಜ್ಯದ ಇತಿಹಾಸ, ಭವಿಷ್ಯದಲ್ಲಿ ಬರಬಾರದು. 16 ಶಾಸಕರ ರಾಜಕೀಯ ಭವಿಷ್ಯ ಮುಗಿಸಲು ಹೋಗಿದ್ದರು. ಅದಕ್ಕೆ ಸುಪ್ರೀಂ ಕೋರ್ಟ್ ದೇಶದಲ್ಲಿ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಇನ್ನೂ ಬದುಕಿದೆ ಎಂದು ಹೇಳುವಂತಹ ತೀರ್ಪು ನೀಡಿ, ನಾವು ಮತ್ತೆ ಜನರ ಮುಂದೆ ಹೋಗಲು ಅವಕಾಶ ಮಾಡಿ ಕೊಟ್ಟಿದೆ. ಆ ತೀರ್ಪಿಗೆ ನಾವು ತಲೆ ಬಾಗುತ್ತೇವೆ’ ಎಂದು ಹೇಳಿದರು.

‘ನಾವು ಬಿಜೆಪಿ ತತ್ವ ಸಿದ್ಧಾಂತ, ಆಶಯವನ್ನು ಒಪ್ಪಿ, ದೇಶಕ್ಕೆ ಸಮರ್ಥ ನಾಯಕತ್ವ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು, ಯಡಿಯೂರಪ್ಪ ಅವರ ಆದರ್ಶದ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ಇವತ್ತು ಶಿಸ್ತುಬದ್ಧ ಪಕ್ಷಕ್ಕೆ ಅಂತಃಕರಣ, ಸಂತೋಷದಿಂದ, ಪೂರ್ಣ ಪ್ರಜ್ಞೆಯಿಂದ ಹೆಗಲ ಮೇಲೆ ಅತ್ಯಂತ ಜವಾಬ್ದಾರಿ ಇಟ್ಟುಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.

‘ಉಜ್ವಲವಾದ ಭವಿಷ್ಯ, ಸಮ ಸಮಾಜ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಈ ಸರ್ಕಾರದ ಅಡಿಪಾಯ ಎಂದು ತಿಳಿದು ಈ ನಿರ್ಧಾರ ಕೈಗೊಂಡಿದ್ದೇವೆ. ನಾವೆಲ್ಲ ಸೇರಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು. ಸಮರ್ಥ ನಾಯಕತ್ವದಲ್ಲಿ ನಾವಿದ್ದೇವೆ. ಯಡಿಯೂರಪ್ಪ ಅವರ ಕೈ ಬಲಪಡಿಸಲು ನಾವು ಮುಂದುವರಿಯುತ್ತೇವೆ’ ಎಂದರು.

‘ಚುನಾವಣೆ ಕೇವಲ 20 ದಿನಗಳು ಬಾಕಿ ಇದೆ. ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ ಇದೆ. ಕೆಲ ಕ್ಷೇತ್ರಗಳಲ್ಲಿ ಇರದಿರಬಹುದು. ಆದರೆ ಈ ರಾಜ್ಯದಲ್ಲಿ ಮೂರುವರೆ ವರ್ಷ ಬಿಜೆಪಿ ಸರ್ಕಾರ ಮುಂದುವರಿಯಬೇಕು. ಯಡಿಯೂರಪ್ಪ ಅವರ ನೇತೃತ್ವ ಇರಬೇಕು. ರಾಜ್ಯದಲ್ಲಿ ಸಮಸಮಾಜ ಬರಬೇಕು. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಬಿಜೆಪಿ ವಿಸ್ತರಣೆಯಾಗಬೇಕು ಎನ್ನುವುದಾದರೆ, ಈ ಸರ್ಕಾರದ ಅಳಿವು, ಉಳಿವು 16 ಕ್ಷೇತ್ರದ ಚುನಾವಣೆಯಲ್ಲಿ ಆಗುತ್ತದೆ’ ಎಂದು ಹೇಳಿದರು.

**
ಇವತ್ತು ಜನರ ಪ್ರಾರ್ಥನೆ ಫಲಿಸಿದೆ, ನಮಗೆಲ್ಲ ನ್ಯಾಯ ಸಿಕ್ಕಿದೆ. ನಾವೆಲ್ಲ ರಾಜ್ಯದ ಒಳಿತಿಗಾಗಿ ರಾಜೀನಾಮೆ ಮಾಡಿದ್ದೇವೆ. ವೈಯಕ್ತಿಕ ಆಸೆಗಲ್ಲ.
-ಡಾ.ಕೆ.ಸುಧಾಕರ್, ಅನರ್ಹ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT