ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹರಾಜಾಗದ ಮಳಿಗೆಗಳು, ಆದಾಯ ಸೋರಿಕೆ

ವರ್ತಕರಿಗೆ ದುಬಾರಿಯಾಗಿ ಪರಿಣಮಿಸಿದ ಬಾಡಿಗೆ, ನಗರಸಭೆ ಹತ್ತಾರು ಬಾರಿ ಹರಾಜು ಪ್ರಕ್ರಿಯೆ ನಡೆಸಿದರೂ ಮುಂದೆ ಬಾರದ ಬಾಡಿಗೆದಾರರು
Last Updated 18 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೀದಿ ವ್ಯಾಪಾರಕ್ಕೆ ಕಡಿವಾಣ ಹಾಕದ ನಗರಸಭೆ ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದಲ್ಲಿರುವ ಮಾರುಕಟ್ಟೆ ಸಂಕೀರ್ಣಗಳ ಮಳಿಗೆಗಳನ್ನು ಪದೇ ಪದೇ ಹರಾಜು ಹಾಕಲು ಪ್ರಯತ್ನಿಸುತ್ತಲೇ ಇದೆ. ಬಾಡಿಗೆ ದುಬಾರಿ ಎಂಬ ಕಾರಣಕ್ಕೆ ಬಾಡಿಗೆದಾರರು ಮಾತ್ರ ಮುಂದೆ ಬರುತ್ತಿಲ್ಲ. ಪರಿಣಾಮ, ಈವರೆಗೆ ಆದಾಯ ಸೋರಿಕೆ ನಿಂತಿಲ್ಲ.

‘ರಾಜ್ಯ ಹಣಕಾಸು ನಿಗಮ’ (ಎಸ್ಎಫ್‌ಸಿ) ಮತ್ತು ‘ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ’ (ಸಿಎಂಎಸ್‌ಎಂಟಿಡಿಪಿ) ಅನುದಾನಗಳಡಿ ನಗರಸಭೆ 2012ರಲ್ಲಿ ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದಲ್ಲಿ ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದೆ. ಈ ಎರಡು ಸಂಕೀರ್ಣಗಳಲ್ಲಿ ಸೇರಿ 125 ಮಳಿಗೆಗಳಿವೆ.

ಈ ಮಳಿಗೆಗಳನ್ನು ಹರಾಜು ಹಾಕಲು ನಗರಸಭೆ 2012ರಿಂದ ಈವರೆಗೆ ಹತ್ತಾರು ಬಾರಿ ಹರಾಜು ಪ್ರಕ್ರಿಯೆ ನಡೆಸಿದರೂ ಕೇವಲ 64 ಮಳಿಗೆಗಳಿಗೆ ಮಾತ್ರ ಬಾಡಿಗೆದಾರರು ಬಂದಿದ್ದಾರೆ. ಸದ್ಯ ಎರಡು ಸಂಕೀರ್ಣಗಳ ಪೈಕಿ 61 ಮಳಿಗೆಗಳು ದೂಳು ತಿನ್ನುತ್ತಿವೆ.

ಖಾಲಿ ಬಿದ್ದಿರುವ ಮಳಿಗೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ನಗರದಾದ್ಯಂತ ಇರುವ ಚಿಕನ್, ಮಟನ್ ಮತ್ತು ಮೀನು ಮಾರಾಟದಂತಹ ಮಾಂಸಾಹಾರಿ ಮಳಿಗೆಗಳನ್ನು ಈ ಮಾರುಕಟ್ಟೆ ಸಂಕೀರ್ಣಗಳಿಗೆ ಸ್ಥಳಾಂತರಗೊಳಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಆ ಆದೇಶ ಕಡತದಲ್ಲೇ ಕಳೆದು ಹೋಯಿತು.

ಈವರೆಗೆ ಬೀದಿ ಬದಿ ವ್ಯಾಪಾರ ನಿಯಂತ್ರಿಸುವುದಾಗಲಿ, ಚಿಕನ್, ಮಟನ್ ಮಳಿಗೆಗಳನ್ನು ಸ್ಥಳಾಂತರಿಸುವುದಾಗಲಿ ಯಾವೊಂದು ಕೆಲಸವೂ ನಡೆದಿಲ್ಲ. ಹೀಗಾಗಿ ಮಾರುಕಟ್ಟೆ ಸಂಕೀರ್ಣಗಳು ಮತ್ತಷ್ಟು ಧೂಳುಮಯವಾಗುತ್ತಿವೆ ವಿನಾ ವರ್ತಕರು ಅವುಗಳತ್ತ ತಿರುಗಿ ಸಹ ನೋಡುತ್ತಿಲ್ಲ.

ಪರಿಣಾಮ, ಸಂತೆ ಮೈದಾನ ಮತ್ತು ಭುವನೇಶ್ವರ ವೃತ್ತದ ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಮಳಿಗೆಗಳತ್ತ ನಗರದ ವರ್ತಕರು ಆಸಕ್ತಿ ತೋರದ ಕಾರಣ ಸುಮಾರು 8 ವರ್ಷಗಳಲ್ಲಿ ಎರಡು ಸಂಕೀರ್ಣಗಳಿಂದ ನಗರಸಭೆಗೆ ಬಾಡಿಗೆ ರೂಪದಲ್ಲಿ ಬರಬೇಕಿದ್ದ ₹2 ಕೋಟಿಗೂ ಅಧಿಕ ಆದಾಯ ಖೋತಾ ಆಗಿದೆ. ಸದ್ಯ ದೂಳುತ್ತಿರುವ 61 ಮಳಿಗೆಗಳಿಂದ ನಗರಸಭೆಗೆ ಪ್ರತಿ ತಿಂಗಳು ₹ 2 ಲಕ್ಷ ಆದಾಯ ನಷ್ಟವಾಗುತ್ತಿದೆ.

ಈ ನಷ್ಟ ಸೋರಿಕೆ ತಡೆಯುವ ನಿಟ್ಟಿನಲ್ಲಿ ಬಾಡಿಗೆಯನ್ನು ಬಡ ವರ್ತಕರ ಕೈಗೆಟುಕುವಂತೆ ಪರಿಷ್ಕರಣೆ ಮಾಡಿ ಬಾಕಿ ಉಳಿದ ಮಳಿಗೆಗಳನ್ನೆಲ್ಲ ಹರಾಜು ಹಾಕುವ ಉದ್ದೇಶದಿಂದ ನಗರಸಭೆಯಿಂದ ಅನೇಕ ಬಾರಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ ಎನ್ನುತ್ತವೆ ನಗರಸಭೆ ಮೂಲಗಳು.

‘ನಗರದಲ್ಲಿ ಮೀತಿ ಮೀರಿ ಬೆಳೆಯುತ್ತಿರುವ ರಸ್ತೆಬದಿ ವ್ಯಾಪಾರವೇ ನಗರಸಭೆಯ ಬಾಡಿಗೆ ಮಳಿಗೆಗಳಿಗೆ ಕಂಟಕವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಮಳಿಗೆಗಳಲ್ಲಿಯೇ ವ್ಯಾಪಾರ ಮಾಡಬೇಕು ಎನ್ನುವಂತಹ ಅನಿವಾರ್ಯತೆ ಸೃಷ್ಟಿಸುವವರೆಗೂ ನಗರಸಭೆ ಮಳಿಗೆಗಳಿಗೆ ಬೇಡಿಕೆ ಬರುವುದಿಲ್ಲ’ ಎನ್ನುವುದು ನಗರದ ಅನುಭವಸ್ಥ ವರ್ತಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT