ಬುಧವಾರ, ಜನವರಿ 19, 2022
23 °C
ಚಿಂತಾಮಣಿಯಲ್ಲಿ 19,530 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ

ಬೆಲೆ ಏರಿಕೆ: ಬಿಸಿಯೂಟ ನಿರ್ವಹಣೆ ಸವಾಲು

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಶಾಲೆಗಳು ಆರಂಭವಾಗಿದ್ದು ಮಕ್ಕಳ ಕಲರವ ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದೆ. ಎಲ್‌ಕೆಜಿ, ಯುಕೆಜಿಯಿಂದ ಎಲ್ಲ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ಮಕ್ಕಳು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ ಆರಂಭಿಸಲಾಗಿದೆ. ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲೆಗಳಿಗೆ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗಿದ್ದು, ಅಡುಗೆ ಎಣ್ಣೆ ಮತ್ತು ತೊಗರಿಬೇಳೆಯನ್ನು ಇನ್ನೂ ಸರಬರಾಜು ಮಾಡಿಲ್ಲ. ಮುಂದಿನ ಸರಬರಾಜು ಮಾಡುವವರೆಗೆ ಬಿಸಿಯೂಟದ ಅನುದಾನದಲ್ಲಿ ಖರೀದಿಸುವಂತೆ ಆದೇಶ ನೀಡಲಾಗಿದೆ.

ತರಕಾರಿ ಬೆಲೆಗಳು ತುಟ್ಟಿಯಾಗಿದ್ದು ಸರ್ಕಾರ ನೀಡುವ ಅನುದಾನ ಸಾಕಾಗುತ್ತಿಲ್ಲ ಎಂದು ಮುಖ್ಯ ಶಿಕ್ಷಕರು ಅಸಮಧಾನ ವ್ಯಕ್ತಪಡಿಸುತ್ತಾರೆ. ತರಕಾರಿ, ತೊಗರಿಬೇಳೆ, ಅಡುಗೆ ಎಣ್ಣೆ ದರ ಏರಿಕೆಯ ಪ್ರಭಾವ ಮಕ್ಕಳ ಮೇಲೆ ಬೀರುತ್ತಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳು ತಿಳಿಸಾರು, ಅನ್ನ ಮಾತ್ರ ಊಟ ಮಾಡಬೇಕಾದ ಸ್ಥಿತಿ ಎದುರಾಗಿದೆ.

ತಾಲ್ಲೂಕಿನಲ್ಲಿ 1 ಕೆಪಿಎಸ್(ಎಲ್.ಕೆ.ಜಿ, ಯು.ಕೆ.ಜಿ) ಶಾಲೆಯ 79 ಮಕ್ಕಳು, 201 ಕಿರಿಯ ಪ್ರಾಥಮಿಕ(1-5 ನೇ ತರಗತಿ) ಶಾಲೆಗಳಿಂದ 9,663 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ(6-8) ಶಾಲೆಗಳ 5,839 ಹಾಗೂ ಪ್ರೌಢಶಾಲೆಗಳ 3,949 ವಿದ್ಯಾರ್ಥಿಗಳು ಸೇರಿ ಒಟ್ಟು 19,530 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಾರೆ.

ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಟೋಬರ್ 21ರಿಂದ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನವೆಂಬರ್ 2ರಿಂದ ಬಿಸಿಯೂಟ ಮತ್ತು ಎಲ್ಲ ಶಾಲೆಗಳಲ್ಲಿ ನವೆಂಬರ್ 2 ರಿಂದ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಗಿದೆ. ಕೆ.ಪಿ.ಎಸ್ ಶಾಲೆಯಲ್ಲಿ ಮಾತ್ರ ನವೆಂಬರ್ 8ರಿಂದ ಆರಂಭಿಸಲಾಗಿದೆ. ಯೋಜನೆ ಪ್ರಾರಂಭ ಮಾಡಿ ಸುಮಾರು 1 ತಿಂಗಳಾದರೂ ಶಾಲೆಗಳಿಗೆ ಸರ್ಕಾರದಿಂದ ಅಡುಗೆ ಎಣ್ಣೆ ಮತ್ತು ತೊಗರಿಬೇಳೆ ಸರಬರಾಜು ಆಗಿಲ್ಲ ಎಂದು ಶಿಕ್ಷಕರು ದೂರುತ್ತಾರೆ.

1 ರಿಂದ 5ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ ನಿತ್ಯ 5 ಮಿ.ಲೀ ಅಡುಗೆ ಎಣ್ಣೆ ಬಳಸಲು 46 ಪೈಸೆ ನಿಗದಿ ಮಾಡಲಾಗಿದೆ. ಈ ದರದ ಪ್ರಕಾರ ಒಂದು ಲೀಟರ್ ಅಡುಗೆ ಎಣ್ಣೆಗೆ ₹92 ಆಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ ₹150-180 ಇದೆ. ಲೀಟರ್‌ಗೆ ₹92 ಅನುದಾನ ನೀಡಿದರೆ ಉಳಿದ ಹಣವನ್ನು ಮುಖ್ಯ ಶಿಕ್ಷಕರು ಭರಿಸುವಂತಾಗಿದೆ.

ತರಕಾರಿ ಬೆಲೆಗಳು ಸಹ ಗಗನಕ್ಕೇರಿದ್ದು ಸರ್ಕಾರ ನಿಗದಿ ಮಾಡಿರುವ ಹಣದಲ್ಲಿ ಒಂದು ಕೆ.ಜಿ ಟೊಮೆಟೊ ಕೂಡ ಬರುವುದಿಲ್ಲ. ಕಿರಿಯ ಪ್ರಾಥಮಿಕ ಶಾಲೆಗಳ ಪ್ರತೀ ವಿದ್ಯಾರ್ಥಿಗೆ ₹1.36 ಬೆಲೆಯ ತರಕಾರಿ ಖರೀದಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗರಿಷ್ಠ 30 ವಿದ್ಯಾರ್ಥಿಗಳಿರುತ್ತಾರೆ. ತರಕಾರಿಗೆ 30 ವಿದ್ಯಾರ್ಥಿಗಳಿಗೆ ₹40.80 ಬರುತ್ತದೆ. ಈ ಹಣದಲ್ಲಿ ತರಕಾರಿ ಖರೀದಿಸಲು ಸಾಧ್ಯವೇ? ಎಂಬುದು ಶಿಕ್ಷಕರ ಪ್ರಶ್ನೆ.

ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೊ ₹60-70 ಇದೆ. ಸರ್ಕಾರದ ಅನುದಾನದಲ್ಲಿ ಅರ್ಧ ಕೆ.ಜಿ.ಟೊಮೆಟೊ ಬರುವುದಿಲ್ಲ. ಕ್ಯಾರೆಟ್ ಕೆ.ಜಿ.ಗೆ ₹70, ಬೀನ್ಸ್ ₹60, ಆಲೂಗಡ್ಡೆ ₹50 ಹೀಗೆ ಎಲ್ಲಾ ತರಕಾರಿಗಳು ಸರಾಸರಿ ಕೆ.ಜಿ.₹50-60 ಇದೆ. ಈರುಳ್ಳಿ ದರ ₹45, ಸೊಪ್ಪುಗಳು ಬೆಲೆ ಕಟ್ಟಿಗೆ ₹25 ಇದ್ದು ಬಿಸಿಯೂಟ ನಿರ್ವಹಣೆ ಮಾಡುವುದು ಕಠಿಣವಾಗಿದೆ. ಅಡುಗೆ ಎಣ್ಣೆ ಮತ್ತು ತೊಗರಿ ಬೇಳೆ ಸರಬರಾಜು ಮಾಡದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ.

ಸಾಂಬಾರಿಗೆ ಬಳಸುವ ಮಸಾಲೆಪುಡಿ, ಮತ್ತು ಖಾರದಪುಡಿಗಾಗಿ ಪ್ರತಿ ವಿದ್ಯಾರ್ಥಿಗೆ ₹26 ಪೈಸೆ ನಿಗದಿ ಮಾಡಿದ್ದು ಅದೂ ಸಾಕಾಗುವುದಿಲ್ಲ. ತರಕಾರಿ ಮತ್ತು ಸಾಂಬಾರ ಪದಾರ್ಥಗಳಿಗೆ ಸರ್ಕಾರ ನಿಗದಿ ಮಾಡಿರುವ ಅನುದಾನ ಕಡಿಮೆ. ಯಾವುದೋ ಕಾಲದಲ್ಲಿ ನಿಗದಿ ಮಾಡಿದ ದರವನ್ನೇ ಈಗಲೂ ಮುಂದುವರೆದಿದೆ. ಬೆಳೆ ಏರಿಕೆಗೆ ಅನುಗುಣವಾಗಿ ಅನುದಾನವನ್ನು ಹೆಚ್ಚಿಸಬೇಕು. ಕೂಡಲೇ ಅಡುಗೆ ಎಣ್ಣೆ ಮತ್ತು ತೊಗರಿ ಬೇಳೆಯನ್ನು ಸರಬರಾಜು ಮಾಡಬೇಕು ಎಂದು ಮುಖ್ಯ ಶಿಕ್ಷಕರು ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು