ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭೀಷ್ಟ ಸಿದ್ಧಿಗೆ ಆಚರಣೆ ಅವಶ್ಯಕ

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸಡಗರದಿಂದ ಶರನ್ನವರಾತ್ರಿ ಆಚರಣೆ
Last Updated 1 ಅಕ್ಟೋಬರ್ 2019, 11:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹೋಮ ಧೂಮ, ಸಾಯಂಕಾಲದ ಗೋಧೋಳಿ ಹಾಗೂ ವೇದಧ್ವನಿಗಳು ಉಳ್ಳ ಪರಿಸರದಲ್ಲಿ ಬದುಕಿನ ಶಾಂತಿ, ನೆಮ್ಮದಿ ನೆಲೆಸುತ್ತವೆ. ಆ ಕಾರಣದಿಂದಲೇ ಯಜ್ಞಯಾಗಾದಿ ಪೂಜಾ ಕೈಂಕರ್ಯಗಳಿಗೆ ತನ್ನದೇ ಆದ ಮಹತ್ವಿದೆ’ ಎಂದು ವೇದ ಪಂಡಿತ ಚಂದ್ರಶೇಖರ ಸೋಮಯಾಜಿ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದಿರುವ ಶರನ್ನವರಾತ್ರಿಯ ಮೂರನೇ ದಿನವಾದ ಮಂಗಳವಾರದ ಕಾರ್ಯಕ್ರಮದಲ್ಲಿ ವೇದಗಳ ಮಹತ್ವ ಕುರಿತು ವಿವರಿಸಿದರು.

ಸಾಯಿಬಾಬಾ ಅವರ ಸಂದೇಶವಾಹಕ ಮಧುಸೂದನ ಸಾಯಿ ಮಾತನಾಡಿ, ‘ನವರಾತ್ರಿಯ ಆಚರಣೆಯಲ್ಲಿ ಪಾಲ್ಗೊಳ್ಳುವುದು ಮಕ್ಕಳು ತಾಯಿ ಮಡಿಲನ್ನು ಸೇರುವ ದ್ಯೋತಕ. ಹೊರಗೆ ಆಟವಾಡಿ ದಣಿದು ಬಂದ ಮಕ್ಕಳನ್ನು ತಾಯಿ ಉಪಚರಿಸಿ, ದಣಿವು ನಿವಾರಿಸುವಂತೆ, ಭಕ್ತರು ಪ್ರಾಪಂಚಿಕ ಕ್ಷೋಭೆಗಳನ್ನು ಮರೆತು ಮಾತೆ ಮಡಿಲನ್ನು ಸೇರಿದಾಗ ಆತಂಕ, ಕೌತುಕ, ಭಯಗಳಿಂದ ಹೊರಬಂದು ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ನವರಾತ್ರಿಯ ಅಂಗವಾಗಿ ದುರ್ಗಾಮಾತೆಯ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಯಿತು. ವೇದಬ್ರಹ್ಮ ಯಜ್ಞಮೂರ್ತಿ ಭಟ್ಟರು ಧನ್ವಂತರಿ ಹೋಮ ಮತ್ತು ವಿಷ್ಣು ಸಹಸ್ರನಾಮ ಹೋಮಗಳನ್ನು ನೆರವೇರಿಸಿದರು. ವೇದ ಪಾರಂಗತ ಗಿರೀಶ ಭಟ್ಟರು ಯಜ್ಞಯಾಗಾದಿಗಳ ಮಹತ್ವವನ್ನು ವಿವರಿಸಿದರು.

ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ವೇದಾಗಮ ಪಂಡಿತರು ಶುಕ್ಲಯಜುರ್ವೇದ ಮತ್ತು ಕೃಷ್ಣಯಜುರ್ವೇದದ ಪಾರಾಯಣವನ್ನು ನಡೆಸಿಕೊಟ್ಟರು. ದುರ್ಗಾಮಾತೆಯ ಆರಾಧನೆಯ ಅಂಗವಾಗಿ ಹರಿಪಾದ ಚಕ್ರವರ್ತಿಯವರು ದುರ್ಗಾ ಸಪ್ತಶತಿ ಪಾರಾಯಣ ಮಾಡಿದರು. ಸುಕುಮಾರ ಚಕ್ರವರ್ತಿ ಮತ್ತು ಬಳಗದವರು ಛತ್ರ, ಚಾಮರ, ಗಂಟೆ, ಶಂಖ, ನರ್ತನ ಆರತಿಗಳ ಸೇವೆಯನ್ನು ಸಲ್ಲಿಸಿದರು.

ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು, ಆಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT