ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗೆತ; ಸುಗಮ ಸಂಚಾರಕ್ಕೆ ಅಡ್ಡಿ

ಬಾಗೇಪಲ್ಲಿಯ ವಿವಿಧ ಬಡಾವಣೆಗಳಲ್ಲಿ ನಗರೋತ್ಥಾನ ಯೋಜನೆ ಕಾಮಗಾರಿ
Last Updated 24 ಜೂನ್ 2019, 20:00 IST
ಅಕ್ಷರ ಗಾತ್ರ

ಬಾಗೇಪಲ್ಲಿ: ನಗರೋತ್ಥಾನ ಯೋಜನೆಯಡಿ ನಗರದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನೀರಿನ ಪೈಪುಗಳು, ಚರಂಡಿ ನೀರು ಹರಿಯಲು ವ್ಯವಸ್ಥೆ ಮಾಡದೆ ರಸ್ತೆ ಮಾಡುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ರಸ್ತೆ ಅಗೆದು 8 ತಿಂಗಳು ಕಳೆದರೂ, ರಸ್ತೆ ಕಾಮಗಾರಿ ಮಾಡಿಲ್ಲ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ನಗರೋತ್ಥಾನ ಯೋಜನೆಯಡಿ ₹ 7 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಕೆಲ ವಾರ್ಡ್‌ಗಳಲ್ಲಿ ರಸ್ತೆ ಅಗೆದು ಮಣ್ಣು ತೆಗೆದಿದ್ದಾರೆ. ಇದರಿಂದ ಕುಡಿಯುವ ನೀರು, ಮಲಮೂತ್ರ ಪೈಪುಗಳು ಹೊಡೆದಿವೆ. ಈ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದೇ ನೀರಿನ ಮೇಲೆ ನಿವಾಸಿಗಳು ಸಂಚರಿಸಬೇಕಾಗಿದೆ. ರಸ್ತೆ ಮಾಡಲು ಜಲ್ಲಿ, ಕಲ್ಲುಗಳು ಹಾಕಿದ್ದಾರೆ. ಬೈಕ್‌ಗಳಲ್ಲಿ ಸಾಗಲು ಜನರಿಗೆ ತೊಂದರೆ ಆಗುತ್ತಿದೆ.

ಮಣ್ಣು ತೆಗೆಯುವಾಗ ಕುಡಿಯುವ ನೀರಿನ ಪೈಪುಗಳು ಹಾಳಾಗಿವೆ. ಇದರಿಂದ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಬೇರೆ ಕಡೆಯಿಂದ ನೀರು ತರುವಾಗ ಜಲ್ಲಿ, ಕಲ್ಲುಗಳು ಚುಚ್ಚುತ್ತಿದೆ. ಸಮರ್ಪಕವಾಗಿ ಕಾಮಗಾರಿ ಮಾಡಿಲ್ಲ. ಚರಂಡಿಗಳು ಸಹ ಹಾಳಾಗಿದೆ. ಚರಂಡಿ ನೀರು ರಸ್ತೆಯ ಮೂಲಕ ಮನೆಗೆ ಸೇರುತ್ತಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವರು.

ಪಟ್ಟಣದಲ್ಲಿ ಕಾಮಗಾರಿ ಸಂದರ್ಭದಲ್ಲಿ ಹೊಡೆದಿರುವ ಪೈಪುಗಳನ್ನು ಸರಿಪಡಿಸಿಲ್ಲ. ಗುತ್ತಿಗೆದಾರರು ಏಕಾಏಕಿ ಜಲ್ಲಿ, ಕಲ್ಲುಗಳು ಹಾಕಿ ರಸ್ತೆ ಮಾಡಲು ಮುಂದಾಗಿದ್ದಾರೆ. ಚರಂಡಿ ಮಾಡಿಲ್ಲ. ಮಲಮೂತ್ರ ವಿಸರ್ಜನೆ ಪೈಪುಗಳನ್ನು ಜೋಡಿಸಿಲ್ಲ. ಕಾಮಗಾರಿ ಮುಗಿಸಿ ಬಿಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

‘5ನೇ ವಾರ್ಡ್‌ನಲ್ಲಿ 6 ತಿಂಗಳ ಹಿಂದೆ ರಸ್ತೆ ಕಾಮಗಾರಿ ಮಾಡಲು ಮಣ್ಣು ಅಗೆದಿದ್ದಾರೆ. ಮಣ್ಣು ಕಲ್ಲುಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಜಲ್ಲಿ ಕಲ್ಲುಗಳು ಹಾಕಿ ತಿಂಗಳಾದರೂ ರಸ್ತೆ ಕಾಮಗಾರಿ ಮಾಡಿಲ್ಲ. ತಳ್ಳುಗಾಡಿ ವ್ಯಾಪಾರಿಗಳ ಗೋಳು ಹೇಳತೀರದು’ ಎಂದು ಪಾನಿಪೂರಿ ವ್ಯಾಪಾರಿ ಸುಗುಣಮ್ಮ ಆರೋಪಿಸಿದರು.

ಜಿಲ್ಲಾಧಿಕಾರಿಗಳೇ ಬನ್ನಿ
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಬಾಗೇಪಲ್ಲಿಗೆ ಬರಬೇಕು. ನಗರೋತ್ಥಾನದ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಸರ್ಕಾರದ ಮಾನದಂಡದ ರೀತಿ ಕಾಮಗಾರಿ ಮಾಡದ್ದಾರೆಯೇ ಎಂದು ಪರೀಕ್ಷಿಸಬೇಕು. ಮಾಡದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಜಿ.ಕೃಷ್ಣಪ್ಪ ಆಗ್ರಹಿಸುವರು.

ಕ್ಯಾರೆ ಎನ್ನದ ಗುತ್ತಿಗೆದಾರರು
ನಗರೋತ್ಥಾನ ಕಾಮಗಾರಿ ಅತ್ಯಂತ ಕಳಪೆ ಆಗಿದೆ ಎಂದು ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದರು. ಪುರಸಭೆ ಗುತ್ತಿಗೆದಾರರಿಗೆ 6 ಬಾರಿ ನೋಟಿಸ್ ನೀಡಿದೆ. ಆದರೆ ನೋಟಿಸ್‌ಗೆ ಗುತ್ತಿಗೆದಾರರು ಕ್ಯಾರೆ ಅನ್ನುತ್ತಿಲ್ಲ. ಕಳಪೆ ಹಾಗೂ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿರುವುದರಿಂದ ಮೂರೇ ತಿಂಗಳಿಗೆ ಡಾಂಬರ್ ಕೀಳುತ್ತಿದೆ ಎಂದು ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಎನ್.ರವೀಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT