ಶುಕ್ರವಾರ, ಫೆಬ್ರವರಿ 26, 2021
31 °C
ಹೊಸದಾಗಿ ಹಾಕಿದ ಟಾರನ್ನು ಬರಿಗೈಯಲ್ಲಿ ಕಿತ್ತು ಆಕ್ರೋಶ ವ್ಯಕ್ತಪಡಿಸಿದ ಹರಿಸ್ಥಳ ಗ್ರಾಮಸ್ಥರು

ರಸ್ತೆ ಕಾಮಗಾರಿ ಕಳಪೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿಗೈಯಲ್ಲಿ ಟಾರು ಕಿತ್ತು ಹಾಕುತ್ತಿರುವ ಹರಿಸ್ಥಳದ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ತಾಲ್ಲೂಕಿನ ಚಿಕ್ಕಪೈಲಗುರ್ಕಿ ಮತ್ತು ಹರಿಸ್ಥಳ ಗ್ರಾಮಗಳ ನಡುವೆ ನೂತನವಾಗಿ ನಿರ್ಮಿಸಿದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಹರಿಸ್ಥಳ ಗ್ರಾಮಸ್ಥರು ಆರೋಪಿಸಿ, ಬುಧವಾರ ಬರಿಗೈಯಿಂದಲೇ ರಸ್ತೆಗೆ ಹಾಕಿದ ಟಾರು ಕಿತ್ತು ಪ್ರದರ್ಶಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯ (ಪಿಎಂಜಿಎಸ್‌ವೈ) ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಸುಮಾರು 1.57 ಕಿ.ಮೀ ಉದ್ದದ ಈ ರಸ್ತೆಯನ್ನು ₨1.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಳೆದ ವರ್ಷದ ಆಗಸ್ಟ್ 20 ರಂದು ಈ ಕಾಮಗಾರಿ ಆರಂಭಿಸಲಾಗಿತ್ತು.

ಜುಲೈ 22 ರಂದು ರಸ್ತೆಗೆ ಟಾರು ಹಾಕಲಾಗಿತ್ತು. ಟಾರು ಹಾಕಿ ಮೂರು ದಿನಗಳು ಕಳೆಯುವ ಮುನ್ನವೇ ಟಾರಿನ ಪದರ ಸುಲಭವಾಗಿ ಕಿತ್ತು ಬರುತ್ತಿದೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿ ರಸ್ತೆ ಕಾಮಗಾರಿಗೆ ಕೋಟಿಗಟ್ಟಲೇ ಖರ್ಚು ಮಾಡಲಾಗಿದೆ ಎಂದು ನಾಮಫಲಕ ಅಳವಡಿಸಿದ್ದಾರೆ. ಆದರೆ ವಾಸ್ತವದಲ್ಲಿ ರಸ್ತೆ ಅವಲೋಕಿಸಿದರೆ ಅದಕ್ಕೆ ₨30 ಲಕ್ಷ ಕೂಡ ಖರ್ಚು ಮಾಡಿಲ್ಲ ಎನಿಸುತ್ತದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಗ್ರಾಮಸ್ಥರ ವಿರುದ್ಧವೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ರೀತಿ ಮರುಕಳುಹಿಸದಂತೆ ಮೇಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿದೆ’ ಎಂದು ದೊಡ್ಡಪೈಲಗುರ್ಕಿ ನಿವಾಸಿ ಅನಿಲ್ ಆಗ್ರಹಿಸಿದರು.

ಈ ಕುರಿತು ಪಿಎಂಜಿಎಸ್‌ವೈ ಕಾರ್ಯಪಾಲಕ ಎಂಜಿನಿಯರ್ ಮುತ್ತಪ್ಪ ಅವರನ್ನು ವಿಚಾರಿಸಿದರೆ, ‘ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬೆಂಗಳೂರಿನಿಂದ ಕೂಡ ನಮ್ಮ ಮೇಲಾಧಿಕಾರಿಗಳು ಬಂದು ರಸ್ತೆ ಪರಿಶೀಲನೆ ಮಾಡಿದ್ದಾರೆ. ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಕಳಪೆಯಾಗಿಲ್ಲ’ ಎಂದು ಹೇಳಿದರು.

‘ಹೊಸದಾಗಿ ಹಾಕಿದ ಟಾರ್ ಹೊಂದಿಕೊಳ್ಳಬೇಕಾದರೆ ಒಂದು ವಾರ ಬೇಕು. ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣವಿರುವುದರಿಂದ ಟಾರ್ ಇನ್ನೂ ಸರಿಯಾಗಿ ಕುಳಿತಿಲ್ಲ. ಗ್ರಾಮಸ್ಥರು ರಸ್ತೆ ಅಂಚಿನ ಭಾಗದಿಂದ ಕೀಳಲು ಪ್ರಯತ್ನಿಸಿದ್ದಾರೆ. ಆ ರಸ್ತೆಯನ್ನು ಐದು ವರ್ಷ ನಿರ್ವಹಣೆ ಮಾಡುವ ಜತೆಗೆ 6ನೇ ವರ್ಷಕ್ಕೆ ಪುನಃ ಟಾರು ಹಾಕಿ ಕೊಡುವಂತೆ ಗುತ್ತಿಗೆದಾರರೊಂದಿಗೆ ಒಪ್ಪಂದವಾಗಿದೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು